ತುರ್ತು ಪರಿಸ್ಥಿತಿಗೆ ಇಂದಿರಾ ಗಾಂಧಿ ಕಾರಣ ಎನ್ನುವುದಕ್ಕಿಂತ ಆ ರೀತಿಯ ಸಂದರ್ಭವನ್ನು ಸೃಷ್ಟಿ ಮಾಡಲಾಗಿತ್ತು ಎನ್ನುವುದೇ ಕಟು ಸತ್ಯ. ತಮ್ಮನ್ನು ಗುರಿಯಾಗಿಸಿ ರೂಪುಗೊಳ್ಳುತ್ತಿದ್ದ ಒಟ್ಟಾರೆ ಸಂಚಿನ ಜೊತೆಗೆ ಆಂತರಿಕ ಸಂಘರ್ಷಗಳು ದೇಶದ ಭದ್ರತೆಗೆ ಉಂಟು ಮಾಡಬಹುದಾದ ಗಂಭೀರ ಪರಿಣಾಮಗಳನ್ನು ಗ್ರಹಿಸಿಯೇ ಅವರು ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಈಗ ಅದನ್ನು ಸಂವಿಧಾನದ ಹತ್ಯಾ ದಿವಸ ಎಂದು ಆಚರಿಸುವ ಮೂಲಕ ರಾಜಕೀಯ ಲಾಭದಾಯಕ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ – ರಾ. ಚಿಂತನ್, ಪತ್ರಕರ್ತರು
ಸಂವಿಧಾನವನ್ನು ಬದಲಾಯಿಸಲು ಬಂದವರು ಎನ್ನುತ್ತಿದ್ದ ಸಂಘಿ ಕೃಪಾಪೋಷಿತ ನಾಟಕಮಂಡಳಿಯ ವಿರುದ್ಧ ವಿರೋಧ ಪಕ್ಷಗಳು ಯಾವಾಗ ಒಂದೇ ಸಮನೇ ಸಂವಿಧಾನದ ಪುಸ್ತಕವನ್ನು ಹಿಡಿದು ಜಾಡಿಸತೊಡಗಿದರೋ, ಸಂವಿಧಾನ ಬದಲಾಯಿಸುವುದಿರಲಿ, ಅದರ ಬಗ್ಗೆ ವಿಮರ್ಶೆ ಮಾಡುವುದಕ್ಕೂ ಹೆದರುವಂತಾಗಿದೆ. ಈ ಸಲದ ಲೋಕಸಭೆ ಚುನಾವಣೆಯ ಫಲಿತಾಂಶ ನಾಲ್ಕು ನೂರು ಸೀಟು ಪಡೆಯುವ ಉದ್ದೇಶದ ಹಿಂದೆ ಸಂವಿಧಾನಕ್ಕೆ ಕೈಯಿಡುವ ದುರುದ್ದೇಶವಿತ್ತು ಎನ್ನುವುದನ್ನು ಜನರು ಅರ್ಥ ಮಾಡಿಕೊಂಡ ಪರಿಣಾಮ; ಸಣ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಆದರೂ ಯಾವಾಗ ಬೇಕಾದರೂ ಕೈ ಕೊಡಬಹುದಾದ ಚಂದ್ರ ಬಾಬು ನಾಯ್ಡು, ನಿತೀಶ್ ಕುಮಾರ್ ಅವರನ್ನು ನೆಚ್ಚಿಕೊಂಡು ನಿರಮ್ಮಳವಾಗಿ ಆಡಳಿತ ನಡೆಸುತ್ತೇವೆ ಎನ್ನುವುದು ಕನಸಿನ ಮಾತು ಎಂಬುದು ಈ ಕ್ಷಣಕ್ಕೆ ನನ್ನ ನಂಬಿಕೆಯಾಗಿದೆ.
ಇದೀಗ ಸಂವಿಧಾನಕ್ಕೆ ಅಲರ್ಜಿಯಂತಿದ್ದ ಬಿಜೆಪಿ ಅರ್ಥಾತ್ ಎನ್‌ಡಿಎ ಮೈತ್ರಿಕೂಟ ಸಂವಿಧಾನಕ್ಕೆ ಸಂಬಂಧಿಸಿದಂತೆ ಒಂದು ಗೆಜೆಟ್ ಹೊರಡಿಸಿದೆ. ಕೇಂದ್ರ ಗೃಹಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಜೂನ್ 25ನೇ ತಾರೀಕನ್ನು ಸಂವಿಧಾನ ಹತ್ಯಾ ದಿವಸ ಎಂದು ಘೋಷಿಸಿದೆ. ತುರ್ತು ಪರಿಸ್ಥಿತಿಯ ವಿರುದ್ಧ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಆ ದಿನದಂದು ಗೌರವ ಸಲ್ಲಿಸಲಾಗುವುದು ಎಂದಿದ್ದಾರೆ.
ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಸಂವಿಧಾನದ ಹತ್ಯೆಗೆ ಮುಂದಾದವರು ಸಂವಿಧಾನ ರಕ್ಷಕರನ್ನು ಗೌರವಿಸುತ್ತೇವೆ ಎನ್ನುತ್ತಿರುವುದು ವಿಚಿತ್ರ ಮತ್ತು ವಿಕಟ. 1975 ಜೂನ್ 25ನೇ ತಾರೀಕಿನಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದು ಸಂವಿಧಾನಬದ್ಧವಾಗಿಯೇ ಇತ್ತು ಹಾಗೂ ಅವತ್ತಿನ ದೇಶದ ಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲೇಬೇಕಾದ ಸಂದರ್ಭ ಇತ್ತು ಎನ್ನುವುದನ್ನು ಇವರು ಒಪ್ಪಿಕೊಳ್ಳಲಾರರು.
ಅಸಲಿಗೆ 1969ರಲ್ಲಿ ಬ್ಯಾಂಕ್ ರಾಷ್ಟ್ರೀಕಣದಂತಹ ದಿಟ್ಟ ನಿರ್ಧಾರ ಕೈಗೊಂಡ ನಂತರ ಇಂದಿರಾ ಗಾಂಧಿ ವಿರುದ್ಧ ನ್ಯಾಯಾಂಗ ವ್ಯವಸ್ಥೆ ಹಾಗೂ ವಿರೋಧಿ ಪಾಳೆಯ ಜಿದ್ದು ಸಾಧಿಸತೊಡಗಿತ್ತು. ಅವರ ಸೇರಿಗೆ ಸವ್ವಾಸೇರು ಅಂತ ನಿಂತಿದ್ದು ಐರನ್ ಲೇಡಿ. ಅವತ್ತಿನ ನೈಜ ಚಿತ್ರಣವನ್ನು ನಿಮ್ಮ ಮುಂದೆ ಎಳೆಎಳೆಯಾಗಿ ಸ್ಫುಟವಾಗಿ ಬಿಡಿಸಿಡದಿದ್ದರೇ; ಅವತ್ತಿನ ತುರ್ತು ಪರಿಸ್ಥಿತಿಯನ್ನು ಸಂವಿಧಾನದ ಹತ್ಯೆಯೆಂದು ನಿರೂಪಿಸಲು ಹೆಣಗುತ್ತಿರುವ ಬಿಜೆಪಿ ಸಂಘದ ಕುತಂತ್ರ ಯಶಸ್ವಿಯಾಗಿ ಬಿಡುತ್ತದೆ.
ಆದರೆ ತುರ್ತು ಪರಿಸ್ಥಿತಿ ಹೇರಿದ ನಂತರ ಸಂಜಯ್ ಗಾಂಧಿ ಆಸಕ್ತಿಯ ನಸ್‌ಬಂಧಿ, ಕೊಳಗೇರಿ ನಿರ್ಮೂಲನೆಯ ಕ್ರೌರ್ಯಗಳನ್ನು ದಿಟ್ಟವಾಗಿ ಧಿಕ್ಕರಿಸುವ ಜೊತೆಗೆ ದೇಶದಲ್ಲಾದ ಆ ಸಂದರ್ಭದ ಕೆಲವು ಸುಧಾರಣೆಗಳನ್ನು ಒಪ್ಪಿಕೊಳ್ಳುತ್ತಾ ನಾವು ತುರ್ತು ಪರಿಸ್ಥಿತಿ ಸಂವಿಧಾನ ವಿರೋಧಿ ನಡೆಯೇ? ಸಂವಿಧಾನಬದ್ಧ ನಡೆಯೇ? ಅಧಿಕಾರ ದುರುಪಯೋಗವೇ? ಅಧಿಕಾರದ ವ್ಯಾಪ್ತಿಯಲ್ಲೇ ನಡೆದ ರಾಷ್ಟ್ರಪರವಾದ ನಿರ್ಣಯವೇ? ಎನ್ನುವುದನ್ನು ತಿಳಿದುಕೊಳ್ಳೋಣ.
ದೇಶದಲ್ಲಿ 1975ಕ್ಕೂ ಮೊದಲೂ ಎರಡು ಬಾರಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. 1962ರಲ್ಲಿ ಭಾರತ ಮತ್ತು ಚೀನಾ ಯುದ್ಧದ ಸಂದರ್ಭದಲ್ಲಿ ಹಾಗೂ 1971ರ ಇಂಡಿಯಾ – ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. Article 352( 1950 ) ರ ಪ್ರಕಾರ ಯುದ್ಧದ ವೇಳೆ ತುರ್ತುಸ್ಥಿತಿಯನ್ನು ಘೋಷಿಸಲೇಬೇಕಾದ ಸಂದರ್ಭದಲ್ಲಿ ದೇಶದ ಅಧ್ಯಕ್ಷರಾದವರು ಅಂದರೆ ರಾಷ್ಟ್ರಪತಿಗಳು ದೇಶದ ಪ್ರಧಾನಿಯವರ ಮನವಿಯನ್ನು ಆಧರಿಸಿ ತುರ್ತುಪರಿಸ್ಥಿತಿ ಹೇರಬಹುದು. ಆದರೆ 1975 ಜೂನ್ 25ನೇ ತಾರೀಕು ದೇಶದಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿ ಮೊದಲೆರಡು ತುರ್ತುಪರಿಸ್ಥಿತಿಗಿಂತ ಭಿನ್ನವಾಗಿತ್ತು. ಆಂತರಿಕ ಸಂಘರ್ಷದಿಂದ ದೇಶದ ಭದ್ರತೆಗೆ ಅಪಾಯವಿದೆ ಎಂಬ ಕಾರಣ ನೀಡಿ ಸಂವಿಧಾನದ ಅಧಿನಿಯಮ 352ರ ಪ್ರಕಾರವಾಗಿಯೇ ಪ್ರಧಾನಿ ಇಂದಿರಾಗಾಂಧಿಯವರ ಮನವಿಯನ್ನು ಪರಿಗಣಿಸಿ ಅಂದಿನ ರಾಷ್ಟ್ರಪತಿಗಳಾದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
1975ರ ಹೊತ್ತಿಗೆ ಇಂದಿರಾ ಗಾಂಧಿಯವರು ಈ ತರಹದ ನಿರ್ಣಯ ಕೈಗೊಳ್ಳುವ ಸಂದರ್ಭ ಸೃಷ್ಟಿಯಾಗಲು ಕಾರಣ; ಇಂದಿರಾ ಗಾಂಧಿಯವರ ಹೊಂದಾಣಿಕೆಯಿಲ್ಲದ, ಬಡವರ ಪರವಾದ ಕಾರ್ಯಕ್ರಮಗಳು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದ ಇಂದಿರಾ ಗಾಂಧಿಯವರು 1969ರಲ್ಲಿ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುತ್ತಾರೆ. ಖಾಸಗಿ ಸಂಸ್ಥೆಗಳಿಂದ ಸರ್ಕಾರ ಮಾಲಿಕತ್ವ ಪಡೆದುಕೊಂಡು ದೇಶದ ಮೂಲೆ ಮೂಲೆಗೂ ಬ್ಯಾಂಕುಗಳನ್ನು ತಲುಪಿಸಿ ಆ ಮೂಲಕ ಬಡವರಿಗೂ ಕೂಡ ಬ್ಯಾಂಕುಗಳು ಕೈಗೆಟುಕುವಂತೆ ಮಾಡುವುದು ಇದರ ಉದ್ದೇಶವಾಗಿತ್ತು. ಇದರ ವಿರುದ್ಧ ಅವತ್ತು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥ ಆರ್ ಸಿ ಕೂಪರ್. ಸುಪ್ರೀಂ ಕೋರ್ಟ್ ಇಂದಿರಾ ಗಾಂಧಿ ಸರ್ಕಾರದ ಈ ನಿಲುವು ಹೂಡಿಕೆದಾರರ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸರ್ಕಾರದ ವಿರುದ್ಧ ಅರ್ಜಿದಾರರ ಪರವಾಗಿ ತೀರ್ಪು ನೀಡಿತು.
ಇಲ್ಲಿಂದ ಸರ್ಕಾರ ಅಥವಾ ಇಂದಿರಾಗಾಂಧಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಸಂಘರ್ಷ ಶುರುವಾಗಿತ್ತು. ಆ ಹೊತ್ತಿಗಾಗಲೇ ಸಂವಿಧಾನಕ್ಕೆ ತಿದ್ದುಪಡಿ ತರುವಷ್ಟು ನಿರ್ದಿಷ್ಟ ಬಹುಮತವಿದ್ದ ಇಂದಿರಾ ಗಾಂಧಿ ಸರ್ಕಾರ, ಸಂವಿಧಾನದಲ್ಲಿ ತಿದ್ದುಪಡಿ ತಂದು ಬ್ಯಾಂಕ್ ರಾಷ್ಟ್ರೀಕರಣ ಮಾಡಿಯೇ ಬಿಡುತ್ತದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ಹಿನ್ನಡೆಯುಂಟುಮಾಡಿ, ನ್ಯಾಯಾಂಗ ವ್ಯವಸ್ಥೆ ಇಂದಿರಾ ಗಾಂಧಿ ವಿರುದ್ಧ ಸಿಟ್ಟಾಗುತ್ತದೆ.
ಇಂದಿರಾ ಗಾಂಧಿಯವರ ವಿರುದ್ಧ ಉರಿಯುತ್ತಿದ್ದ ನ್ಯಾಯಾಂಗ ಹಾಗೂ ವಿರೋಧಿ ವ್ಯವಸ್ಥೆಗೆ ಪೆಟ್ರೋಲ್ ಸುರಿಯುವಂತೆ ಇಂದಿರಾ ಗಾಂಧಿಯವರು ಮತ್ತೊಂದು ಪ್ರಮುಖವಾದ ನಿರ್ಣಯವನ್ನು ಕೈಗೊಳ್ಳುತ್ತಾರೆ. ಅದು PRIVY PURSE. ಅಂದರೆ 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬಳಿಕ ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ರಾಜಪ್ರಭುತ್ವ ವ್ಯವಸ್ಥೆ ಮುಂದುವರಿದಿತ್ತು. ಭಾರತವನ್ನು ಒಗ್ಗೂಡಿಸುವ ಸವಾಲಿನ ಈ ಸಂದರ್ಭ ಸರ್ಕಾರದ ವತಿಯಿಂದ ರಾಜಪರಿವಾರಕ್ಕೆ ಹಣ ಕೊಡಲಾಗುತ್ತಿತ್ತು. ಅದು ಇಂದಿರಾ ಗಾಂಧಿಯವರಿಗೆ ಇಷ್ಟವಿರಲಿಲ್ಲ. 1970ರಲ್ಲಿ ಅವರಿಗೆ ಹಣ ಕೊಡುವುದನ್ನು ನಿಲ್ಲಿಸುವ ಬಗ್ಗೆ ಬಿಲ್ ಜಾರಿಗೊಳಿಸಿದರು. ಈ ಬಿಲ್ ರಾಜ್ಯಸಭೆಯಲ್ಲಿ ಪಾಸಾಗಲಿಲ್ಲ. ಪಟ್ಟುಬಿಡದ ಇಂದಿರಾಗಾಂಧಿ ಸರ್ಕಾರ ಇನ್ಮುಂದೆ ರಾಜಪ್ರಭುತ್ವದ ರಾಜ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದುಬಿಟ್ಟರು. ಇದರಿಂದ ತಾವು ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿದ ರಾಜರ ಪರಿವಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವು. ಕೋರ್ಟ್ ಇಂದಿರಾ ಗಾಂಧಿ ಸರ್ಕಾರದ ನಿರ್ಣಯವನ್ನು ರದ್ದುಮಾಡಿ ರಾಜಪರಿವಾರದ ಪರವಾಗಿ ತೀರ್ಪು ನೀಡಿತು.
ಆದರೆ ನಿರ್ಣಾಯಕ ಬಹುಮತವಿದ್ದ ಇಂದಿರಾ ಗಾಂಧಿ ಸರ್ಕಾರ ARTICLE 1971ಕ್ಕೆ ತಿದ್ದುಪಡಿ ತಂದು ಬಿಲ್ ಅನ್ನು ಜಾರಿಗೊಳಿಸಿತು. ರಾಜಪರಿವಾರಕ್ಕೆ ಹಣ ಕೊಡುವುದನ್ನು ನಿಲ್ಲಿಸಲಾಯಿತು. ಇದು ನ್ಯಾಯಾಂಗ, ವಿರೋಧಿ ಬಣ ಹಾಗೂ ರಾಜಾಡಳಿತದ ವ್ಯವಸ್ಥೆ ಆಕ್ರೋಶಗೊಳ್ಳುವಂತೆ ಮಾಡಿತ್ತು. ಹೇಳಿಕೇಳಿ ರಾಜಪರಿವಾರ ಬೀದಿಗಿಳಿದು ದೊಂಬಿ ಮಾಡುವಂತಿಲ್ಲ. ದೊಡ್ಡ ಸಂಖ್ಯೆಯ ಜನಬೆಂಬಲ ಸಿಗುವುದಿಲ್ಲ. ಪರಂಪರೆಯ ನೆಪದಲ್ಲಿ ಸುಖವಾಗಿ ಆಳುವ ಸ್ಥಾನದಲ್ಲಿ ರಾಜಾರೋಷವಾಗಿ ಇದ್ದವರು ನೇಪಥ್ಯಕ್ಕೆ ಸರಿಯುವುದಕ್ಕೆ ಇಷ್ಟವಿಲ್ಲದೇ ಚುನಾವಣಾ ರಾಜಕಾರಣದ ಮೂಲಕ ಅಸ್ತಿತ್ವ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದರು. ಆ ಮೂಲಕ ಇಂದಿರಾ ಗಾಂಧಿಯವರ ವ್ಯವಸ್ಥೆಯನ್ನು ಎದುರಿಸುವ ನಿರ್ಧಾರ ಮಾಡಿದರು.
1971ರಲ್ಲಿ ಗರೀಬಿ ಹಠಾವೋ ಘೋಷಣೆಯ ಮೂಲಕ ಇಂದಿರಾ ಗಾಂಧಿಯವರು ಚುನಾವಣಾ ರಾಜಕೀಯಕ್ಕೆ ಧುಮುಕಿದರು. ಆಗ ರಾಜಪರಿವಾರದ ಕೆಲವರು ಕಣಕ್ಕೆ ಇಳಿದರು. ಅವರ ಪೈಕಿ ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ಒಬ್ಬರು. ಚಿತ್ರನಟ ಸೈಫ್ ಅಲಿ ಖಾನ್ ಅವರ ತಂದೆಯಾಗಿದ್ದ ಇವರು ರಾಜಮನೆತನಕ್ಕೆ ಸೇರಿದವರು. ಹರ್ಯಾಣದ ಗುರಗಾಂವ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಶೇಕಡಾ ಐದರಷ್ಟೂ ಮತಗಳನ್ನು ಪಡೆಯದೆ ಹೀನಾಯವಾಗಿ ಪರಾಭವಗೊಂಡರು. ಇದೇ ವೇಳೆ ಗ್ವಾಲಿಯರ್ ರಾಜಮನೆತನದ ರಾಜಮಾತೆ ವಿಜಯ್ ರಾಜೇ ಸಿಂಧ್ಯಾ ಹಾಗೂ ಅವರ ಮಗ ಮಾಧವ್ ರಾವ್ ಸಿಂಧ್ಯಾ ಚುನಾವಣಾ ರಾಜಕೀಯಕ್ಕಿಳಿದು ಗೆಲುವು ಸಾಧಿಸಿದರು. ಇಂದಿರಾ ಗಾಂಧಿ PIVY PURSE ರದ್ದತಿ ವಿರುದ್ಧ ಸಿಡಿದು ಭಾರತೀಯ ಜನಸಂಘದ ಮೂಲಕ ರಾಜಕೀಯವನ್ನು ಆರಂಭಿಸಿ ಕಡೆಗೆ ಕಾಂಗ್ರೆಸ್ ಪಕ್ಷದ ಕದವನ್ನು ತಟ್ಟಿದ ಈ ರಾಜ ಕುಟುಂಬ ಇವತ್ತಿಗೂ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿದೆ. ಜ್ಯೋತಿರಾಧಿತ್ಯ ಸಿಂಧ್ಯಾ, ತಂದೆ ಮಾಧವ್ ರಾವ್ ಸಿಂಧ್ಯಾ ವಿಮಾನ ಅಪಘಾತದಲ್ಲಿ ತೀರಿಕೊಂಡ ನಂತರ “ಗುಣ”ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಕಾರಣ ಆರಂಭಿಸಿ ಪದವಿ ಪುರಸ್ಕಾರ ಪಡೆದು ಈಗ ಬಿಜೆಪಿ ಸೇರಿಕೊಂಡಿದ್ದಾರೆ.
ತಾವು ತೆಗೆದುಕೊಳ್ಳುತ್ತಿದ್ದ ನಿರ್ಣಯಗಳನ್ನು ಸುಪ್ರೀಂ ಕೋರ್ಟ್ ನಿರಾಕರಿಸಿ ತೀರ್ಪು ಕೊಟ್ಟಾಗೆಲ್ಲಾ, ಸೂಪರ್ ಪವರ್ ಬಳಸಿ ಸಂವಿಧಾನ ತಿದ್ದುಪಡಿಯ ಮೂಲಕ ತಮ್ಮ ಉದ್ದೇಶವನ್ನು ಪೂರೈಸಿಕೊಳ್ಳುತ್ತಿದ್ದರು ಇಂದಿರಾಗಾಂಧಿ. ಬ್ಯಾಂಕ್ ರಾಷ್ಟ್ರೀಕರಣ ಬಡವರ ಪರವಾದ ಕಾರ್ಯಕ್ರಮವಾದರೆ, pivy purse ರದ್ಧತಿ ಸರ್ಕಾರದ ದುಡ್ಡಿನಲ್ಲಿ ತಿಂದುಂಡು ಹಾಯಾಗಿದ್ದ ರಾಜಮನೆತನದ ಅಕ್ರಮದ ಬದುಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೂಡಿತ್ತು. ಇಲ್ಲಿ ಇಂದಿರಾ ಅವರ ನಿರ್ಧಾರ ಸರಿಯಿತ್ತೇ ಹೊರತು; ಸುಪ್ರೀಂ ಕೋರ್ಟ್. ಹಾಗಾಗಿ ಅವೆರಡೂ ಅವಶ್ಯಕವಾದ ತಿದ್ದುಪಡಿಯಾಗಿತ್ತು.
1971ರ ಚುನಾವಣೆಯಲ್ಲಿ 352 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಮತ್ತಷ್ಟು ಪ್ರಬಲರಾದರು ಇಂದಿರಾ ಗಾಂಧಿ. ಬಡವರು, ದಲಿತರು , ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ದೊಡ್ಡ ಪ್ರಮಾಣದಲ್ಲಿ ಇಂದಿರಾ ಸರ್ಕಾರದ ಕೈಹಿಡಿದಿದ್ದರು. ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಸಂಯುಕ್ತ ಸೋಷಲಿಸ್ಟ್ ಪಕ್ಷದಿಂದ ರಾಜ್ ನಾರಾಯಣ್ ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತುಹೋದರು. ಆದರೆ ರಾಜ್ ನಾರಾಯಣ್ ಸೋಲೊಪ್ಪಿಕೊಳ್ಳದೆ ಎಪ್ರಿಲ್ 24 1971ರಂದು ಅಲಹಾಬಾದ್ ನ್ಯಾಯಾಲಯದಲ್ಲಿ ಇಂದಿರಾ ಗಾಂಧಿ ಗೆಲ್ಲಲು ಭ್ರಷ್ಟಾಚಾರದ ವಿಧಾನ ಅನುಸರಿಸಿದ್ದಾರೆ ಎಂದು ಆರೋಪ ದಾಖಲಿಸಿದರು. ಇಂದಿರಾ ಗಾಂಧಿಯವರ ವಿರುದ್ಧ ಹಲ್ಲುಮಸೆಯುತ್ತಿದ್ದ ಅವತ್ತಿನ ನ್ಯಾಯಾಂಗ ವ್ಯವಸ್ಥೆಗೆ ಅಸ್ತ್ರ ಸಿಕ್ಕಂತಾಗಿತ್ತು. 1975ರಲ್ಲಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ಹೇರಲು ಈ ಪ್ರಕರಣವೂ ಒಂದು ಕಾರಣವಾಗಿತ್ತು.
1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದು ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಜೊತೆಗೆ ಇಂದಿರಾ ಗಾಂಧಿ ಸರ್ಕಾರದ ಹಲವು ಮಂತ್ರಿಗಳ ಮೇಲೆ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂತು. 1973ರಲ್ಲಿ ಜಾಗತಿಕ ತೈಲಬಿಕ್ಕಟ್ಟಿನ ಪರಿಣಾಮ ಕಚ್ಚಾತೈಲದ ಬೆಲೆ ಶೇಕಡಾ ಮುನ್ನೂರರಷ್ಟು ಹೆಚ್ಚಾಗಿ, ಆರ್ಥಿಕ ಸಂಕಷ್ಟದ ಜೊತೆ ಬೆಲೆಯೇರಿಕೆ ಜನರನ್ನು ಹೈರಾಣಾಗಿಸಿತ್ತು. 1874ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಚಿಮನ್ ಭಾಯ್ ಪಟೇಲ್ ವ್ಯಾಪಕ ಭ್ರಷ್ಟಾಚಾರದಲ್ಲಿ ಭಾಗಿಯಾದ ಪರಿಣಾಮ, ಗುಜರಾತ್ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಬೀದಿಗಿಳಿದ ನಾಗರೀಕರು, ವಿದ್ಯಾರ್ಥಿಗಳು, “ಚೀಮನ್ ಚೋರ್” ಎನ್ನುತ್ತಾ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಿಳಿದರು. ಪ್ರತಿಭಟನೆಯ ಭರಾಟೆಯಲ್ಲಿ ದರೋಡೆ, ಹಿಂಸೆಗಳನ್ನು ಮಾಡಿದರು. ಈ ಆಂದೋಲನಕ್ಕೆ “ನವನಿರ್ಮಾಣ ಆಂದೋಲನ” ಎಂದು ಕರೆಯಲಾಯಿತು. ಆರೋಪ ನಿಜವಾಗಿದ್ದರಿಂದ ಬೇರೆ ದಾರಿಯಿಲ್ಲದೇ ಇಂದಿರಾ ಗಾಂಧಿ ಗುಜರಾತ್ ಸರ್ಕಾರವನ್ನು ವಜಾಗೊಳಿಸಿದರು.
ಇದೇ ವೇಳೆ ಅಂದರೆ 1974ರಲ್ಲೇ, ಬಿಹಾರದಲ್ಲಿ ಕೂಡ ಬಿಹಾರ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಆಂದೋಲನ ಆರಂಭವಾಯಿತು. ವಿದ್ಯಾರ್ಥಿಗಳು ಆಯೋಜಿಸಿದ್ದ ಈ ಆಂದೋಲನವನ್ನು ಜಯಪ್ರಕಾಶ್ ನಾರಾಯಣ್ ಮುನ್ನಡೆಸಿದರು. ಜೆಪಿ ಚಳವಳಿ ಎಂದೇ ಕರೆಯಲಾದ ಈ ಆಂದೋಲನದಲ್ಲಿ ಬಿಹಾರ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಲಾಯಿತು. ಇದೇ ಬಿಹಾರದ ಇನ್ನೊಂದು ಭಾಗದಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರು ರೈಲ್ವೆ ನೌಕರರಿಗೆ ಉದ್ಯೋಗ ಭದ್ರತೆ, ಉತ್ತಮ ಸಂಬಳ ನೀಡುವಂತೆ ಆಗ್ರಹಿಸಿ ಮೂರು ದಿನಗಳ ಕಾಲ ರೈಲ್ವೆ ನೌಕರರ ಮುಷ್ಕರಕ್ಕೆ ಕರೆ ನೀಡಿ ಹೋರಾಟವನ್ನು ಮುನ್ನಡೆಸುತ್ತಾರೆ. ಲಕ್ಷಾಂತರ ನೌಕರರು ಕೆಲಸ ನಿಲ್ಲಿಸಿದ ಪರಿಣಾಮ ದೇಶದ ಸಾರಿಗೆ ಹಾಗೂ ಅದಾಗಲೇ ಹದಗೆಟ್ಟಿದ್ದ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಿತು.
`ಜನರ ಹೃದಯ ಹೇಳುತ್ತಿದೆ, ಇಂದಿರಾ ಸಿಂಹಾಸನ ಅಲುಗಾಡುತ್ತಿದೆ’ ಎಂಬ ಘೋಷಣೆಯಡಿ ಈ ಪ್ರತಿಭಟನೆಗಳು ನಡೆಯುತ್ತಿದ್ದವು.
ಆದರೆ ಇಂದಿರಾಗಾಂಧಿ ಇದರಿಂದ ಧೃತಿಗೆಡಲಿಲ್ಲ. ಗುಜರಾತ್ ಸರ್ಕಾರದಂತೆ ಬಿಹಾರ ಸರ್ಕಾರವನ್ನು ವಜಾಗೊಳಿಸಲಾರೆ, ಈ ಆಂದೋಲನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ರಾಷ್ಟ್ರವಿರೋಧದಿಂದ ಕೂಡಿವೆ ಎಂದರು. ಆದರೆ ಪ್ರತಿಭಟನೆ ನಿಲ್ಲಲಿಲ್ಲ.
ಒಂದು ಕಡೆ ಯುದ್ಧದಿಂದ ಆರ್ಥಿಕ ಹೊಡೆತ, ಇನ್ನೊಂದು ಕಡೆ ತೈಲಬಿಕ್ಕಟ್ಟಿನ ಘೋರ ಪರಿಣಾಮ, ಮತ್ತೊಂದು ಕಡೆ ದೊಡ್ಡಮಟ್ಟದ ಆಂದೋಲನಗಳು, ಬಾಧಿಸುತ್ತಿದ್ದ ಕ್ಷಾಮ – ಆ ಸಂದರ್ಭ ದೇಶದ ಸ್ಥಿತಿ ಹೇಗಿತ್ತು ಎನ್ನುವುದನ್ನು ನೀವೇ ಊಹಿಸಿ ನೋಡಿ. ಹೀಗಿರುವಾಗಲೇ ಇಂದಿರಾಗಾಂಧಿ ಸುಧಾರಿಸಿಕೊಳ್ಳಲು ಆಗಲೇಬಾರದು ಎಂಬಂತೆ 1975 ಮಾರ್ಚ್ 12ನೇ ತಾರೀಕು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ವಿರುದ್ಧ ದಾಖಲಾಗಿದ್ದ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಈ ರೀತಿಯ ತೀರ್ಪು ಕೊಡುತ್ತದೆ.
`1971ರಲ್ಲಿ ಇಂದಿರಾಗಾಂಧಿಯವರು ಸರ್ಕಾರದ ಸಂಪನ್ಮೂಲವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗ ಮಾಡಿಕೊಂಡು ಬೃಹತ್ ಸರ್ಕಾರಿ ವೇದಿಕೆಯ ಮೂಲಕ ಚುನಾವಣಾ ಭಾಷಣ ಮಾಡಿದ್ದು ಹಾಗೂ ಸರ್ಕಾರಿ ನೌಕರ ಯಶ್ಪಾಲ್ ಕಪೂರ್ ಅವರನ್ನು ಚುನಾವಣಾ ಏಜೆಂಟ್ ಆಗಿ ನೇಮಿಸಿಕೊಂಡಿದ್ದು ಅಕ್ರಮವಾಗಿದ್ದು – ಈ ಕೂಡಲೇ ಅವರನ್ನು ಸೆಕ್ಸನ್ 123 (7) ರ ಅನ್ವಯ ಲೋಕಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಲಾಗುತ್ತಿದೆ, ಹಾಗೆಯೇ ಅವರು ಆರು ವರ್ಷಗಳ ಕಾಲ ಮತದಾನ ಮಾಡುವುದಾಗಲಿ, ಚುನಾವಣಾ ರಾಜಕೀಯದಲ್ಲಿ ಸ್ಪರ್ಧೆ ಮಾಡುವುದಾಗಲಿ ಮಾಡುವಂತಿಲ್ಲ’ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಜಗಮೋಹನ್‌ಲಾಲ್ ಸಿನ್ಹಾ ತೀರ್ಪು ನೀಡಿದರು.
ಸಣ್ಣ ತಪ್ಪಿಗೆ ಉದ್ದೇಶ ಪೂರ್ವಕವಾಗಿಯೇ ದೊಡ್ಡ ಶಿಕ್ಷೆಯನ್ನು ನೀಡಲಾಗಿದೆ ಎಂದು ಇಂದಿರಾಗಾಂಧಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗಿಳಿದರು. ಅದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ಆಂದೋಲನದ ಕಾವು ಹೆಚ್ಚಾಗುವಂತೆ ನೋಡಿಕೊಂಡರು.
ಇಂದಿರಾ ಗಾಂಧಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್, 24 ಜೂನ್ 1975ರಂದು, ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದು, ಇಂದಿರಾ ಗಾಂಧಿಯವರು ಸಂಸದರಾಗಿ ಪಡೆದ ಎಲ್ಲಾ ಸವಲತ್ತುಗಳನ್ನು ನಿಲ್ಲಿಸಿ, ಅವರನ್ನು ಮತದಾನದಿಂದ ನಿಷೇಧಿಸುವಂತೆ ಆದೇಶಿಸಿದರು. ಆದರೆ, ಅವರ ಮನವಿ ಇತ್ಯರ್ಥವಾಗುವವರೆಗೂ ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ನೀಡಲಾಯಿತು.
ಈ ತೀರ್ಪು ದೊಡ್ಡಮಟ್ಟದ ಜನಾಂದೋಲನಕ್ಕೆ ಕಾರಣವಾಯಿತು. ದೇಶದ ಆಂತರಿಕ ಸ್ಥಿತಿ ವಿಪರೀತ ಎನಿಸುವಷ್ಟು ಹದಗೆಟ್ಟುಹೋದ ಸಂದರ್ಭ, ಪಾಕಿಸ್ತಾನದ ವಿರುದ್ಧದ ಯುದ್ಧದಿಂದ ಎದುರಾಗಿದ್ದ ಆರ್ಥಿಕ ಸವಾಲು, 1973ರ ತೈಲ ಬಿಕ್ಕಟ್ಟು ಮತ್ತು ದೇಶದಲ್ಲಿ ತಲೆದೋರಿದ್ದ ಕ್ಷಾಮದ ಪರಿಸ್ಥಿತಿಗಳು, ಜೊತೆಗೆ ತಮ್ಮ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಂಗ ವ್ಯವಸ್ಥೆ, ಆಂದೋಲನಗಳು – ಎಲ್ಲವೂ ಸೇರಿ ಜೂನ್ 25, 1975ರಂದು ಇಂದಿರಾಗಾಂಧಿಯವರು ತಮ್ಮ ಸಂಪುಟದ ಸಭೆ ಕರೆದರು. ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ ಅವರು “ಆಂತರಿಕ ತುರ್ತುಸ್ಥಿತಿ” ಹೇರಲು ಪ್ರಧಾನಿಗೆ ಸಲಹೆ ನೀಡಿದರು.
“ಆಂತರಿಕ ಗೊಂದಲಗಳಿಂದ ಭಾರತದ ಭದ್ರತೆಗೆ ಅಪಾಯವಾಗುತ್ತಿದೆ, ಭಾರತದ ಸಂವಿಧಾನದ ಅಧಿನಿಯಮ 352ರ ಅನ್ವಯ ತುರ್ತು ಪರಿಸ್ಥಿತಿ ಘೋಷಿಸಿ ಎಂದು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರಿಗೆ ಇಂದಿರಾಗಾಂಧಿ ಪತ್ರದ ಮೂಲಕ ಮನವಿ ಮಾಡಿದರು. ಜೂನ್ 25, 1975ರ ಮಧ್ಯರಾತ್ರಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಆಂತರಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿಯೇ ಬಿಟ್ಟರು.
ಕ್ಷಿಪ್ರ ಆರ್ಥಿಕ ಸುಧಾರಣೆಯ ಅವಶ್ಯಕತೆಯಿದ್ದ ಸಂದರ್ಭದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಇಂದಿರಾ ಗಾಂಧಿಯವರಿಗೆ ಪೂರಕ ವಾತಾವರಣ ನಿರ್ಮಿಸಿತ್ತು. ಆಂತರಿಕ ಭದ್ರತಾ ಕಾಯ್ದೆಯಡಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಆಂದೋಲನ ನಡೆಸುತ್ತಿದ್ದ ವಿಜಯರಾಜೇ ಸಿಂಧಿಯಾ, ಜಯಪ್ರಕಾಶ್ ನಾರಾಯಣ್, ರಾಜ್ ನಾರಾಯಣ್, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಜೀವತ್ರಾಂ ಕೃಪಲಾನಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಅರುಣ್ ಜೇಟ್ಲಿ, ಸತ್ಯೇಂದ್ರ ನಾರಾಯಣ ಸಿನ್ಹಾ, ಜೈಪುರದ ರಾಣಿ ಗಾಯತ್ರಿ ದೇವಿ ಸೇರಿದಂತೆ ಪ್ರತಿಪಕ್ಷದ ಹಲವು ನಾಯಕರನ್ನು ಹಾಗೂ ಇಂದಿರಾ ಗಾಂಧಿ ಆಡಳಿತದ ವಿರುದ್ಧ ಗಟ್ಟಿ ಧ್ವನಿ ಎತ್ತಿದವರನ್ನು ಜೈಲಿಗಟ್ಟಲಾಯಿತು. ತಮ್ಮ ವಿರುದ್ಧ ಸುದ್ದಿ ಮಾಡುತ್ತ ವಿರೋಧಿಗಳ ಜೊತೆ ಕೈಜೋಡಿಸಿದ್ದ ಮಾಧ್ಯಮಗಳನ್ನು ನಿಯಂತ್ರಿಸಲಾಯಿತು. ಕೆಲವು ರಾಜಕೀಯ ಪಕ್ಷಗಳೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸೆಸ್ ಮತ್ತು ಜಮಾತ್-ಎ-ಇಸ್ಲಾಮಿಯಂತಹ ಸಂಘಟನೆಗಳನ್ನು ನಿಷೇಧಿಸಲಾಯಿತು. ಕಾಂಗ್ರೆಸ್ಸೇತರ ರಾಜ್ಯಗಳ ಚುನಾಯಿತ ಸರಕಾರವನ್ನು ವಜಾ ಗೊಳಿಸಲಾಯಿತು. ಚುನಾವಣೆಗಳನ್ನು ನಿಲ್ಲಿಸಲಾಯಿತು.
ಇನ್ನು ತಮ್ಮ ವಿರುದ್ಧ ಅಲಹಬಾದ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಅನುಗುಣವಾಗಿ, ಸಂವಿಧಾನದ 39ನೇ ತಿದ್ದುಪಡಿ ನಡೆಸಿ, 392A ವಿಧಿಯನ್ನು ಸಂವಿಧಾನಕ್ಕೆ ಸೇರ್ಪಡೆಗೊಳಿಸಿದರು. 392A ವಿಧಿಯಲ್ಲಿ ಭಾರತದ ಪ್ರಧಾನಿ ಮತ್ತು ಲೋಕಸಭಾ ಅಧ್ಯಕ್ಷರ ಚುನಾವಣಾ ಸಿಂಧುತ್ವವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ, ನ್ಯಾಯಾಲಯದ ಬದಲಿಗೆ, ಅವರ ಚುನಾವಣಾ ಸಿಂಧುತ್ವವನ್ನು ಸಂಸತ್ತು ರಚಿಸುವ ಸಮಿತಿಗೆ ಮಾತ್ರವೇ ಪರಿಶೀಲಿಸಲು ಅವಕಾಶವಿದೆ ಎಂದು ತಿದ್ದುಪಡಿ ಮಾಡಲಾಯಿತು. ಅಲ್ಲಿಗೆ ತಮ್ಮ ಸದಸ್ಯತ್ವವನ್ನು ಅಸಿಂಧುಗೊಳಿಸಿದ ಸುಪ್ರೀಂ ತೀರ್ಪನ್ನು ಸಂಪೂರ್ಣವಾಗಿ ಮುಗಿಸಿದ್ದರು ಇಂದಿರಾಗಾಂಧಿ.
ತುರ್ತು ಪರಿಸ್ಥಿತಿಯ ವೇಳೆ ಇಂದಿರಾ ಅವರ ಪುತ್ರ ಸಂಜಯ್ ಗಾಂಧಿ ಅವರು ಆರ್ಥಿಕತೆ ಸುಧಾರಿಸುವ ಸಲುವಾಗಿ ಬಲವಂತದ ಕುಟುಂಬ ಯೋಜನೆ ಮತ್ತು ಕೊಳೆಗೇರಿಗಳ ತೆರವು ಒಳಗೊಂಡ “ಐದು ಅಂಶಗಳ ಕಾರ್ಯಕ್ರಮ”ವನ್ನು ತಂದರು. ಏಪ್ರಿಲ್ 1976ರಲ್ಲಿ , ಡಿಡಿಎ ಉಪಾಧ್ಯಕ್ಷ ಜಗಮೋಹನ್ ಅವರ ಆದೇಶದ ಮೇರೆಗೆ ಬುಲ್ಡೋಜರ್‌ಗಳನ್ನು ಬಳಸಿ ದೆಹಲಿಯ ತುರ್ಕಮನ್ ಗೇಟ್ ಬಳಿಯ ಕೊಳೆಗೇರಿಗಳನ್ನು ತೆರವು ಗೊಳಿಸಲಾಯಿತು. ಇದರ ವಿರುದ್ಧ ಪ್ರತಿಭಟಿಸಿದ ಕೊಳಗೇರಿ ನಿವಾಸಿಗಳನ್ನು ಹಿಂಸಾತ್ಮಕವಾಗಿ ಹತ್ತಿಕ್ಕಲಾಯಿತು. ಸಂಜಯ್ ಗಾಂಧಿ ಕೇಂದ್ರ ಮತ್ತು ರಾಜ್ಯಗಳಲ್ಲಿನ ಅಧಿಕಾರಿಗಳಿಗೆ ಕುಟುಂಬ ಯೋಜನೆ ಗುರಿಗಳನ್ನು ನೀಡಿದರು. ಇದನ್ನು ನಸ್ ಬಂಧಿ ಅಥವಾ ಬಲವಂತದ ಸಂತಾನಹರಣ ಕ್ರಮ ಎನ್ನಲಾಗುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ದೇಶದ ಆರ್ಥಿಕ ಹಾಗೂ ಆಂತರಿಕ ಸ್ಥಿತಿಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದ ಇಂದಿರಾಗಾಂಧಿಯವರು, ನಸ್‌ಬಂಧಿ, ಕೊಳೆಗೇರಿ ನಿರ್ಮೂಲನೆಯ ಸಂದರ್ಭದಲ್ಲಿ ಆದ ಸಂಘರ್ಷಗಳ ಕಾರಣಕ್ಕೆ ಜನವಿರೋಧವನ್ನು ಎದುರಿಸಬೇಕಾಯಿತು.
ತುರ್ತು ಪರಿಸ್ಥಿತಿಯ ವೇಳೆ ಸರ್ಕಾರ ಕೈಗೊಂಡ ಕೆಲ ನಿರಂಕುಶ ಕ್ರಮಗಳನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆದವು. ತುರ್ತು ಪರಿಸ್ಥಿತಿ ವಿರೋಧಿಸಿ ಪ್ರತಿಭಟನೆಗಳಿಗೆ ಕರೆಕೊಡಲಾಯಿತು. ತುರ್ತುಪರಿಸ್ಥಿತಿಯ ಎರಡು ವರ್ಷಗಳ ಕಾಲ ಇಂದಿರಾ ಗಾಂಧಿಯವರು ದೇಶದ ಒಳಗೆ ಮತ್ತು ಜಾಗತಿಕ ನಾಯಕರಿಂದ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು. ಅಂತಿಮವಾಗಿ, 1977ರ ಮಾರ್ಚ್ 21ರಂದು ತುರ್ತು ಪರಿಸ್ಥಿತಿಯನ್ನು ಮುಗಿಸಿ ಚುನಾವಣೆಯನ್ನು ಘೋಷಿಸಿದರು. ಆ ಚುನಾವಣೆಯಲ್ಲಿ ಜನತಾ ಪರಿವಾರ ದೇಶದಾದ್ಯಂತ ತುರ್ತುಪರಿಸ್ಥಿತಿಯ ವಿರುದ್ಧ ವ್ಯಾಪಕ ಪ್ರಚಾರ ಮಾಡಿದ ಪರಿಣಾಮ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸರ್ಕಾರವೇ ಪತನವಾಯಿತು. 1971ರಲ್ಲಿ 352 ಸ್ಥಾನಗಳನ್ನು ಪಡೆದಿದ್ದ ಇಂದಿರಾಗಾಂಧಿ ಸರ್ಕಾರ ಈ ಚುನಾವಣೆಯಲ್ಲಿ ಕೇವಲ 154 ಸ್ಥಾನಗಳನ್ನು ಪಡೆದುಕೊಂಡು 1971ರ ಚುನಾವಣೆಯಲ್ಲಿ ಗೆದ್ದುಕೊಂಡಿದ್ದ 198 ಸ್ಥಾನಗಳನ್ನು ಕಳೆದು ಕೊಂಡಿತ್ತು. ದಕ್ಷಿಣ ರಾಜ್ಯಗಳು ಇಂದಿರಾಗಾಂಧಿಯವರ ಕೈ ಹಿಡಿದರೆ ಉತ್ತರ ರಾಜ್ಯಗಳು ಸಂಪೂರ್ಣ ಕೈಬಿಟ್ಟಿದ್ದವು. ಅಧಿಕಾರಕ್ಕೆ ಬಂದ ಜನತಾ ಪರಿವಾರದ ಪ್ರಧಾನಿಯಾದ ಮೊರಾರ್ಜಿ ದೇಸಾಯಿಯವರು ತುರ್ತುಪರಿಸ್ಥಿತಿಗೆ ಸಂಬಂಧಿಸಿದಂತೆ ಕಠಿಣವಾದ ತಿದ್ದುಪಡಿಯನ್ನು ತಂದರು. ಆದರೆ ಈ ಸರ್ಕಾರ ಮೂರು ವರ್ಷದಲ್ಲೇ ಪತನವಾಗಿ 1980ರಲ್ಲಿ ಚುನಾವಣೆ ನಡೆಯಿತು. ಅಷ್ಟರಲ್ಲಾಗಲೇ ತುರ್ತುಪರಿಸ್ಥಿತಿಯನ್ನು ಮರೆತಿದ್ದ ಜನರು ಇಂದಿರಾಗಾಂಧಿಯವರನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದರು. 353 ಸ್ಥಾನಗಳನ್ನು ಪಡೆದ ಇಂದಿರಾ ನೇತೃತ್ವದ ಕಾಂಗ್ರೆಸ್ ಅಭೂತಪೂರ್ವವಾಗಿ ಜಯಗಳಿಸಿತು. ಇಂದಿರಾ ಗಾಂಧಿ ಫೀನಿಕ್ಸ್‌ನಂತೆ ಎದ್ದು ಬಂದಿದ್ದರು. ತುರ್ತುಸ್ಥಿತಿ ಸೇರಿದಂತೆ 1969ರಿಂದಲೂ ಇಂದಿರಾ ಗಾಂಧಿಯವರ ಬೆನ್ನುಬಿದ್ದು ಕಾಡುತ್ತಾ 1977ರಲ್ಲಿ 295 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದ್ದ ಜನತಾಪರಿವಾರ ಒಡೆದು ಹೋಗಿ ಚರಣ್ ಸಿಂಗ್ ನೇತೃತ್ವದಲ್ಲಿ ಕೇವಲ 41 ಸ್ಥಾನಗಳಿಗೆ ಕುಸಿದು ಹೋಗಿತ್ತು.
ತುರ್ತು ಪರಿಸ್ಥಿತಿಗೆ ಇಂದಿರಾ ಗಾಂಧಿ ಕಾರಣ ಎನ್ನುವುದಕ್ಕಿಂತ ಆ ರೀತಿಯ ಸಂದರ್ಭವನ್ನು ಸೃಷ್ಟಿ ಮಾಡಲಾಗಿತ್ತು ಎನ್ನುವುದೇ ಕಟುಸತ್ಯ. ತಮ್ಮನ್ನು ಗುರಿಯಾಗಿಸಿ ರೂಪುಗೊಳ್ಳುತ್ತಿದ್ದ ಒಟ್ಟಾರೆ ಸಂಚಿನ ಜೊತೆಗೆ ಆಂತರಿಕ ಸಂಘರ್ಷಗಳು ದೇಶದ ಭದ್ರತೆಗೆ ಉಂಟುಮಾಡಬಹುದಾದ ಗಂಭೀರ ಪರಿಣಾಮಗಳನ್ನು ಗ್ರಹಿಸಿಯೇ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು.
ಈಗ ಅದನ್ನು ಸಂವಿಧಾನದ ಹತ್ಯಾ ದಿವಸ ಎಂದು ಆಚರಿಸುವ ಮೂಲಕ ರಾಜಕೀಯ ಲಾಭದಾಯಕ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ. ಇದರಲ್ಲಿ ವಿಶೇಷವೇನಿಲ್ಲ.
ರಾ ಚಿಂತನ್
ಪತ್ರಕರ್ತರು
ಇದನ್ನೂ ಓದಿ- ಅಂಬಾನಿಯ ಆಡಂಬರದ ಮದುವೆ ಮತ್ತು ರಾಹುಲ್ ಗಾಂಧಿಯ ಸರಳ ಸಂದೇಶ