ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮೇಲೆ ಬೆಳಿಗ್ಗೆ ಇಡಿ ದಾಳಿ ನಡೆದಿದ್ದು, ಈಗ ಅವರ ಪಿಎ ಹರೀಶ್ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಅವರ ಮನೆ ಮೇಲೂ ಇಡಿ ದಾಳಿ ಮಾಡಿದ್ದು, ಈಗ ಅದೇ ಬೆನ್ನಲ್ಲೇ ನಾಗೇಂದ್ರ ಅವರ ಪಿಎ ಹರೀಶ್ ಅವರನ್ನು ಬಂಧಿಸಲಾಗಿದೆ.
ಬಂಧಿತ ಹರೀಶ್ ಅವ್ಯವಹಾರದ ವೇಳೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದು, ಸಚಿವರ ಪರವಾಗಿ ಒತ್ತಡ ಹಾಕಿ ಹಣದ ವಹಿವಾಟು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೈದರಾಬಾದ್ನ ಆರೋಪಿ ಸತ್ಯನಾರಾಯಣ ವರ್ಮಾರಿಂದ ಬಂದಿದ್ದ ಹಣ ಹರೀಶ್ಗೆ ತಲುಪಿತ್ತು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮತ್ತು ಸಾಕ್ಷಿಗಳು ದೊರಕುತ್ತಿದ್ದು ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಹರೀಶ್ನನ್ನು ಬಂಧಿಸಿದ್ದಾರೆ.