ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ವಿರುದ್ಧ ನಿರ್ಣಯವನ್ನು ಅಲ್ಲಿನ ಡಿಎಂಕೆ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ನಂತರ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಸ್ವಾಗತಿಸುವ ಮೂಲಕ ರಾಜ್ಯ ಸರ್ಕಾರದ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ಟಿವಿಕೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟ ವಿಜಯ್, “ಜನರು ಈಗ ನೀಟ್ ಪರೀಕ್ಷೆಯಲ್ಲಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈಗ ದೇಶಕ್ಕೆ ನೀಟ್ ಪರೀಕ್ಷೆ ಅಗತ್ಯವಿಲ್ಲ. ನೀಟ್ ಪರೀಕ್ಷೆ ರದ್ದುಗೊಳಿಸುವುದೊಂದೆ ಈಗಿನ ಪರಿಹಾರ” ಎಂದು ಹೇಳಿದ್ದಾರೆ.
ತಮಿಳುನಾಡು ಸರ್ಕಾರ ಕೈಗೊಂಡ ನೀಟ್ ಪರೀಕ್ಷೆ ವಿರುದ್ಧದ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ. ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸುವಂತೆ ನಾನು ಕೇಂದ್ರ ಸರ್ಕಾರವನ್ನೂ ವಿನಂತಿಸುವುದೇನೆಂದರೆ ನೀಟ್ ಅನ್ನು ರದ್ದುಗೊಳಿಸಿ ಎಂದು ಹೇಳಿದ್ದಾರೆ.
“ಮಧ್ಯಂತರ ಪರಿಹಾರವಾಗಿ, ಭಾರತೀಯ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ವಿಶೇಷ ಸಮಕಾಲೀನ ಪಟ್ಟಿಯ ಅಡಿಯಲ್ಲಿ ಸೇರಿಸಬೇಕು ಎಂದು ನಟ ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆ ಅಕ್ರಮ ಬೆಳಕಿಗೆ ಬಂದಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ತೊಂದರೆ ಉಂಟಾಗಿದೆ. ಇದಾದ ನಂತರ ಸಾವಿರಾರು ವಿದ್ಯಾರ್ಥಿ ಸಂಘಟನೆಗಳು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲು ಆಗ್ರಹಿಸಿದೆ.