ಕೋಲಾರ: ಕೆಂಪೇಗೌಡ ಜಯಂತಿ ವೇದಿಕೆ ಮುಂಭಾಗವೇ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಸಂಘರ್ಷ ಏರ್ಪಟ್ಟು, ಹೊಡೆದಾಟವಾಗುವುದು ಸ್ವಲ್ಪದರಲ್ಲೇ ತಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸರ್ಕಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿಗೆ ಮಾಜಿ ಪ್ರಧಾನಿ ದೇವೇಗೌಡ ಹಾಗು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್ ಮುಖಂಡರು ಮೊದಲು ಕಿತಾಪತಿ ಆರಂಭಿಸಿದರು.
ಜೆಡಿಎಸ್ ಕಾರ್ಯಕರ್ತರು ವೇದಿಕೆ ಬಳಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಧಿಕ್ಕಾರ ಕೂಗಿ ಗಲಭೆ ಆರಂಭಿಸಿದರು.
ಇದರಿಂದ ಕೆರಳಿದ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ನನಗೂ ರಾಜಕೀಯ ಮಾಡೋದಿಕ್ಕೆ ಬರುತ್ತದೆ. ನೋಡ್ತೀರಾ ಎಂದು ಜೆಡಿಎಸ್ ಮುಖಂಡರಿಗೆ ಏರುಧ್ವನಿಯಲ್ಲಿ ಎಚ್ಚರಿಸಿದರು.
ನಂತರ ಎಂಎಲ್ ಸಿ ಅನಿಲ್ ಕುಮಾರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಲಾರಂಭಿಸಿದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಯುವ ಮುಖಂಡ ಜನಪನಹಳ್ಳಿ ನವೀನ್ ಕುಮಾರ್ ನಮ್ಮ ಎಂಎಲ್ ಸಿಗೆ ಬೈತೀರಾ ಎಂದು ತೋಳೇರಿಸಿ ಬಂದರು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ತಳ್ಳಾಟ ನೂಕಾಟ ನಡೆಯಿತು.
ಕೋಲಾರ ನಗರದ ಪ್ರವಾಸಿ ಮಂದಿರದ ಬಳಿ ಆಯೋಜಿಸಲಾಗಿದ್ದ 515 ನೇ ಕೆಂಪೇಗೌಡ ಜಯಂತೋತ್ಸವದ ವೇಳೆ ಈ ಘಟನೆ ನಡೆದಿದೆ. ಗಲಾಟೆ ನಡೆಸುತ್ತಿದ್ದವರನ್ನು ಪೊಲೀಸರು ಸುಮ್ಮನಾಗಿಸಿದರು. ಕಾರ್ಯಕ್ರಮಕ್ಕೆ ಮಂಗಳಾನಂದ ಸ್ವಾಮೀಜಿ, ಶಾಸಕ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಚಾಲನೆ ನೀಡಿದರು.