ರಾಜಕೀಯ ಭಂಡತನ ಮತ್ತು ಸಾಹಿತ್ಯಕ ಮೌನ

Most read

ಅಧಿಕಾರ ರಾಜಕಾರಣವು ಸಾಹಿತ್ಯಕ ಸೃಜನಶೀಲತೆಯನ್ನು ಶಿಥಿಲಗೊಳಿಸುವ ಸಲುವಾಗಿಯೇ ಮಾರುಕಟ್ಟೆಯನ್ನು ಆಶ್ರಯಿಸುತ್ತದೆ. ಈ ಸಮ್ಮಿಶ್ರ ಆಳ್ವಿಕೆಯಲ್ಲಿ ತಮ್ಮದೇ ಆದ ನೆಲೆ ಉಳಿಸಿಕೊಳ್ಳಲು  ಸಾಂಸ್ಕೃತಿಕ ಜಗತ್ತಿನ ಪರಿಚಾರಕರು ಕೆಲವೊಮ್ಮೆ “ ಕೈ ಕಟ್‌ ಬಾಯ್ಮುಚ್‌ ” ಸೂತ್ರವನ್ನು ಅನುಸರಿಸಬೇಕಾಗುತ್ತದೆ. ಇದನ್ನು ಧಿಕ್ಕರಿಸುವವರು ಶಾಶ್ವತವಾಗಿ ಹೊರಗುಳಿಯಬೇಕಾಗುತ್ತದೆ- ನಾ ದಿವಾಕರ, ಚಿಂತಕರು

ಕರ್ನಾಟಕದ ಸಾಂಸ್ಕೃತಿಕ ಅಂಗಳದಲ್ಲಿ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣ ಇಡೀ ಸಾಹಿತ್ಯ ವಲಯವನ್ನೇ ಅಣಕಿಸುವಂತೆ ಕಾಣುತ್ತಿದೆ. ರಾಜ್ಯದ ಸಮಕಾಲೀನ ಸಾಂಸ್ಕೃತಿಕ ಇತಿಹಾಸದಲ್ಲಿ, ವಿಶೇಷವಾಗಿ ಸಾಹಿತ್ಯ ಚರಿತ್ರೆಯಲ್ಲಿ ಪ್ರಭುತ್ವದ ಹೊಸ್ತಿಲಲ್ಲಿ ಫಲಾಕಾಂಕ್ಷಿಗಳಾಗಿ ಸಾಲುಗಟ್ಟಿ ನಿಲ್ಲುವ ಪರಂಪರೆ ಹೊಸತೇನೂ ಅಲ್ಲ. ಭಾರತ ವಸಾಹತುಶಾಹಿಯಿಂದ ವಿಮೋಚನೆ ಪಡೆದು ಸ್ವತಂತ್ರ ಗಣತಂತ್ರ-ಪ್ರಜಾತಂತ್ರವನ್ನು ಒಪ್ಪಿಕೊಂಡಿದ್ದರೂ, ದೇಶದ ಆಳ್ವಿಕೆಯ ಕೇಂದ್ರಗಳಲ್ಲಿ ಹಾಗೂ ಇವುಗಳನ್ನು ನಿರ್ದೇಶಿಸುವ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನಲ್ಲಿ ರಾಜಪ್ರಭುತ್ವದ ಯಜಮಾನಿಕೆಯ ಸಂಸ್ಕೃತಿ ನಾಶವಾಗಿಲ್ಲ. ಪ್ರಜಾಪ್ರಭುತ್ವವನ್ನು ಮೌಲಿಕವಾಗಿ ಆಳ್ವಿಕೆಯ ನೆಲೆಗಳಿಗೇ ಕಟ್ಟಿಹಾಕಿ, ಚುನಾವಣೆ ಮತ್ತು ಅಧಿಕಾರ ರಾಜಕಾರಣಕ್ಕೆ ಸೀಮಿತಗೊಳಿಸಿರುವ ನಮ್ಮ ಸಮಾಜ ಬೌದ್ಧಿಕ ನೆಲೆಯಲ್ಲಿ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲವಾಗಿದೆ.

ಹಾಗಾಗಿಯೇ ಏಳು ದಶಕಗಳ ಆನಂತರವೂ ಭಾರತದ ಶೈಕ್ಷಣಿಕ ಜಗತ್ತನ್ನೂ ಸೇರಿದಂತೆ ಬೌದ್ಧಿಕ ಸಾಮಗ್ರಿಯನ್ನು ಉತ್ಪಾದಿಸುವ ಎಲ್ಲ ಸಾಂಸ್ಕೃತಿಕ ನೆಲೆಗಳೂ ಸಹ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಲಂಕಾರಿಕವಾಗಿ ಬಳಸಿಕೊಳ್ಳುತ್ತಿವೆ. ಆದರೆ ಭಾರತದ ಜಾತಿ ವ್ಯವಸ್ಥೆ ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯಜಮಾನಿಕೆಯ ಸಂಸ್ಕೃತಿ ಮತ್ತು ಆಧಿಪತ್ಯದ ಪರಂಪರೆಗಳು ಈ ವಲಯವನ್ನು ಆವರಿಸಿರುವುದರಿಂದ ಇಲ್ಲಿಯೂ ಸಹ ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಬಲಾಢ್ಯ-ದುರ್ಬಲ ಮುಂತಾದ ವಿಂಗಡನೆಗಳು ಆಳವಾಗಿ ಬೇರೂರಿದೆ. ಸಾಹಿತ್ಯವನ್ನೂ ಒಳಗೊಂಡಂತೆ ಜನಸಾಮಾನ್ಯರ ನಡುವೆ ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಗಳನ್ನು ಕಂಡುಕೊಳ್ಳಬೇಕಾದ ಸಾಂಸ್ಕೃತಿಕ ವಲಯ ಈ ಜಂಜಡದಿಂದ ಅವಶ್ಯವಾಗಿ ಹೊರಬರಬೇಕಿದೆ .

ತಳಸಮಾಜದ ಜನಸಾಮಾನ್ಯರ ಬದುಕು-ಬವಣೆಯ ಸುತ್ತ ಕಟ್ಟಲಾಗುವ ಅಕ್ಷರ ಲೋಕದ ಯಾವುದೇ ಪ್ರಕಾರವಾದರೂ ಮೂಲತಃ ಆಯಾ ಸಮಾಜಕ್ಕೆ ಬದ್ಧವಾಗಿರಬೇಕು. ಜೀವನ ಸೂಕ್ಷ್ಮತೆ ಮತ್ತು ಮಾನವ ಸಂವೇದನೆಗಳನ್ನು ಒಟ್ಟುಗೂಡಿಸುತ್ತಾ ಸಮಾಜದೊಳಗಿನ ದೌರ್ಬಲ್ಯಗಳನ್ನು ಹೊರಗೆಡಹುವುದೇ ಅಲ್ಲದೆ ಶತಮಾನಗಳಿಂದ ಕಾಡುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಪಿಡುಗುಗಳಿಗೆ ಪರಿಹಾರ ಸೂಚಿಸುವ ಚಿಕಿತ್ಸಕ ಗುಣವನ್ನು ಸಾಂಸ್ಕೃತಿಕ ಲೋಕ ರೂಢಿಸಿಕೊಳ್ಳಬೇಕು. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ಸಾಂಸ್ಕೃತಿಕ ವಲಯ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಿದ್ದು, ಇಂದಿಗೂ ಸಹ ಚಿಕಿತ್ಸಕ ಗುಣದ ಸಂವೇದನಾಶೀಲ ಅಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಚಿಕಿತ್ಸಕ ಗುಣದ ಸಾಹಿತ್ಯ ಮತ್ತು ರಂಗಪ್ರಯೋಗಗಳು ರಾಜ್ಯದ ತಳಸಮುದಾಯಗಳ ನಡುವೆ ಪ್ರವೇಶಿಸಿರುವುದೇ ಅಲ್ಲದೆ ಅಲ್ಲಿರಬಹುದಾದ ಅನಿಷ್ಟಗಳನ್ನು ಹೋಗಲಾಡಿಸಲು ನಿರಂತರ ಪ್ರಯತ್ನ ಮಾಡಿವೆ.

ಆದರೆ ಸಾಹಿತ್ಯ-ಸಾಂಸ್ಕೃತಿಕ ವಲಯವು ಪ್ರಭುತ್ವದ ಹಿಡಿತದಿಂದ, ಆಳ್ವಿಕೆಯ ಕೇಂದ್ರಗಳಿಂದ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಫಲವಾಗುತ್ತಲೇ ಬಂದಿದೆ. ಪ್ರಶಸ್ತಿ ಸಮ್ಮಾನಗಳ ಹಂಬಲ, ಅಧಿಕಾರ ಕೇಂದ್ರಗಳ ಸಾಮೀಪ್ಯ ಮತ್ತು ಸಾಂಗತ್ಯದ ಹಪಹಪಿ, ತನ್ಮೂಲಕ ಆಯಾ ಜಾತಿ-ಸಮುದಾಯಗಳ ನಡುವೆ ಒಂದು ಸಾಮಾಜಿಕ ಸ್ಥಾನಮಾನವನ್ನು ಗಳಿಸುವ ಮಹತ್ವಾಕಾಂಕ್ಷೆಯೇ ಅಕ್ಷರ ಲೋಕದ ಪರಿಚಾರಕರ ಸ್ವಂತಿಕೆ ಮತ್ತು ಸ್ವಾವಲಂಬಿ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ. ಅಧಿಕಾರ ರಾಜಕಾರಣದ ಭ್ರಷ್ಟ ಪರಂಪರೆಯ ಬೇರುಗಳು ಸಾಂಸ್ಕೃತಿಕ-ಶೈಕ್ಷಣಿಕ ಜಗತ್ತಿನ ಒಳಪದರಗಳನ್ನೂ ಕಲುಷಿತಗೊಳಿಸಿರುವುದರಿಂದ ವಿಶ್ವವಿದ್ಯಾಲಯಗಳ ಉನ್ನತ ಸ್ಥಾನಗಳಿಂದ ಹಿಡಿದು ಅಕಾಡೆಮಿ-ಪ್ರಾಧಿಕಾರಗಳ ಅಧಿಕಾರಯುತ ಸ್ಥಾನಗಳವರೆಗೂ ಎಲ್ಲವೂ ಸಹ ಆಧಿಪತ್ಯದ ಕೇಂದ್ರ ಬಿಂದುಗಳಾಗಿ ಪರಿಣಮಿಸಿವೆ.

ಈ ನೈತಿಕ ಭ್ರಷ್ಟತೆ ಮತ್ತು ಬೌದ್ಧಿಕ ಅಪ್ರಾಮಾಣಿಕತೆಯೇ ಸಾಂಸ್ಕೃತಿಕ ವಲಯದಲ್ಲಿ ಸ್ಥಾನ-ಮಾನ-ಸಮ್ಮಾನಗಳ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿರುವುದು ಒಪ್ಪಲೇಬೇಕಾದ ಸತ್ಯ. ಇದರ ಮೂಲ ಕಾರಣಗಳನ್ನು ಶೋಧಿಸುವುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಕಾಡಬೇಕಿರುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವ ಫಲಾಕಾಂಕ್ಷಿಗಳ ದಂಡು ಮತ್ತು ಅದರ ಹಿಂದಿನ ಸಾಂಸ್ಥಿಕ ಹಿತಾಸಕ್ತಿಗಳು. ಇಲ್ಲಿ ಬಲಿಯಾಗಿರುವುದು ನೈಜ ಸಾಂಸ್ಕೃತಿಕ ಮೌಲ್ಯಗಳು. ರಾಜ್ಯೋತ್ಸವದಿಂದ ಹಿಡಿದು ಅಕಾಡೆಮಿಗಳವರೆಗೆ ಪ್ರಶಸ್ತಿಗಳಿಗಾಗಿ ಅರ್ಜಿ ಹಾಕುವ ಒಂದು ಪರಂಪರೆ ಎಷ್ಟು ವ್ಯಾಪಕವಾಗಿದೆ ಎಂದರೆ ತಳಮಟ್ಟದ ಸಾಂಸ್ಕೃತಿಕ ನೆಲೆಗಳಲ್ಲೂ ಸಹ ಸಾಹಿತ್ಯಕ ಪ್ರತಿಭೆಯನ್ನು ಗುರುತಿಸಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಸಹಜವಾಗಿಯೇ ಇಲ್ಲಿ ಫಲಾಕಾಂಕ್ಷಿಗಳ ಸಾಮಾಜಿಕ ಪ್ರಾಬಲ್ಯ, ಆರ್ಥಿಕ ಕ್ಷಮತೆ ಅಥವಾ ಸಾಮುದಾಯಿಕ ಅಸ್ತಿತ್ವದ ನೆಲೆಗಳು ಪ್ರಧಾನವಾಗುತ್ತವೆ. ಇಂದು ಒಂದು ರಾಜಕೀಯ ಪಕ್ಷದ ಅಧಿಕಾರ ಪೀಠಗಳ ಕೈಕಟ್ಟಿ ಕುಳಿತ ಸಾಹಿತ್ಯಕ-ಸಾಂಸ್ಕೃತಿಕ ಪರಿಚಾರಕರು ನಮಗೆ ವಿನಮ್ರತೆಯ ಪ್ರತೀಕವಾಗಿ ಕಾಣಬಹುದು. ಆದರೆ ಈ ಸಾಂಸ್ಕೃತಿಕ ಕೂಟದ ಹಿಂದೆ ಆಯಕಟ್ಟಿನ ಸ್ಥಾನಗಳಿಗಾಗಿ, ಅಧಿಕಾರಯುತ ಹುದ್ದೆಗಳಿಗಾಗಿ, ಪ್ರತಿಷ್ಠಿತ ಪದವಿ ಪುರಸ್ಕಾರಗಳಿಗಾಗಿ ಇದೇ ರೀತಿ ಕೈಕಟ್ಟಿ ನಿಂತ ಒಂದು ಪರಂಪರೆಯೂ ನಮ್ಮಲ್ಲಿರುವುದನ್ನು ಮರೆಯುವಂತಿಲ್ಲ.

ಇಲ್ಲಿ ಇವರೇಕೆ ಹೀಗೆ ಎಂಬ ವ್ಯಕ್ತಿನಿಷ್ಠ ಪ್ರಶ್ನೆಗಿಂತಲೂ ಇದೇಕೆ ಹೀಗೆ ಎಂಬ ವಸ್ತುನಿಷ್ಠ ಜಿಜ್ಞಾಸೆ ನಮ್ಮನ್ನು ಕಾಡಬೇಕಿದೆ. ಭಾರತದ ಸಾಂಸ್ಕೃತಿಕ ವಲಯವು ಯಾವ ಕಾಲಘಟ್ಟದಲ್ಲಾದರೂ ರಾಜಕೀಯ ಪ್ರಭಾವಳಿಯಿಂದ ಮುಕ್ತವಾಗಿದ್ದುಂಟೇ ಎಂದು ಪ್ರಶ್ನಿಸಿಕೊಂಡಾಗ ನಿರಾಸೆಯಾಗುವುದೇ ಹೆಚ್ಚು. ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರ ಕೇಂದ್ರಗಳು, ಇದನ್ನು ನಿಯಂತ್ರಿಸುವ ಅಧಿಕಾರ ರಾಜಕಾರಣದ ಚೌಕಟ್ಟುಗಳು ತಮ್ಮ ರಾಜಕೀಯ ಅಸ್ತಿತ್ವವನ್ನು ಸುರಕ್ಷಿತವಾಗಿರಿಸಿಕೊಳ್ಳುವ ಸಲುವಾಗಿಯೆ ಸಾಂಸ್ಕೃತಿಕ ಜಗತ್ತಿನ ಮೇಲೆ ಸವಾರಿ ಮಾಡಲಿಚ್ಚಿಸುತ್ತವೆ. ಸಾಂಸ್ಥಿಕ ನೆಲೆಯಲ್ಲಿ ಸಾಂಸ್ಕೃತಿಕ ಧ್ವನಿಗೆ ಸ್ವತಂತ್ರ ಅಸ್ತಿತ್ವವನ್ನು ನೀಡುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ಆಂತರಿಕವಾಗಿ ಈ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸೂತ್ರಗಳನ್ನು ಅಧಿಕಾರ ರಾಜಕಾರಣ ಹೆಣೆದಿರುತ್ತದೆ.

ಹಾಗಾಗಿಯೇ ಸಾಂಸ್ಕೃತಿಕ ಜಗತ್ತನ್ನು ಪ್ರತಿನಿಧಿಸುವ ಸಾಂಸ್ಥಿಕ ನೆಲೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೇ ನೀಡಲಾಗುವುದಿಲ್ಲ. ಈ ಸಂಸ್ಥೆಗಳನ್ನು ನಿರ್ವಹಿಸಲು ಬೇಕಾದ ಬೌದ್ಧಿಕ ಬಂಡವಾಳವನ್ನು ಒದಗಿಸಲು ಆಡಳಿತಾರೂಢ ಸರ್ಕಾರಗಳು ತಮ್ಮ ಸೈದ್ಧಾಂತಿಕ-ತಾತ್ವಿಕ ನೆಲೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತವೆ. ಈ ಆಯ್ಕೆ ಪ್ರಕ್ರಿಯೆಯ ಹಿಂದೆ, ತೆರೆಮರೆಯಲ್ಲಿರುವ ಪ್ರಭಾವಿ ವಲಯವನ್ನು ಸಂಪರ್ಕಿಸದ ಹೊರತು, ಯಾವುದೇ ಸಂಸ್ಕೃತಿ-ಚಿಂತಕ ವ್ಯಕ್ತಿಗಳಿಗೆ, ಸಾಂಸ್ಥಿಕ ಚೌಕಟ್ಟಿನೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ತನ್ನ ಪ್ರವೇಶಕ್ಕೆ ಅವಕಾಶವಿಲ್ಲದ ಸಾಂಸ್ಥಿಕ ಜಗತ್ತಿನಲ್ಲಿ ಅಧಿಕಾರ ರಾಜಕಾರಣವು ತನ್ನ ಪರಿಚಾರಕರ ಮೂಲಕ ಒಳಪ್ರವೇಶ ಪಡೆಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸ್ವತಂತ್ರ ಸಂಸ್ಥೆ ಇದರ ಒಂದು ಜ್ವಲಂತ ನಿದರ್ಶನ .

ವರ್ತಮಾನ ಭಾರತದ ಯುವ ತಲೆಮಾರು ಸಾಂಸ್ಕೃತಿಕ ಸ್ವಂತಿಕೆ, ಸ್ವಾತಂತ್ರ್ಯ, ಸ್ವಾಯತ್ತತೆ ಹಾಗೂ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದರೆ ಈ ಎಲ್ಲ ವಿದ್ಯಮಾನಗಳು ಸವಾಲಾಗಿ ನಿಲ್ಲುತ್ತವೆ. ಇದನ್ನು ಎದುರಿಸುವ ಕ್ಷಮತೆಯನ್ನು ಮಿಲೆನಿಯಂ ಮಕ್ಕಳಲ್ಲಾದರೂ ಬೆಳೆಸುವ ನೈತಿಕ ಜವಾಬ್ದಾರಿ ಹಿರಿಯ-ವಯಸ್ಕ ತಲೆಮಾರಿನ ಸಾಂಸ್ಕೃತಿಕ ಚಿಂತಕರ ಮೇಲಿದೆ. ಅಸ್ಮಿತೆಗಳಿಂದಾಚೆ ನಿಂತು ಯೋಚಿಸಬಹುದಾದರೆ ಇದು ಅಸಾಧ್ಯವೇನಲ್ಲ.

ನಾ ದಿವಾಕರ

ಚಿಂತಕರು

More articles

Latest article