ದೇಶದಲ್ಲಿ ಬಿಸಿಗಾಳಿ​ಗೆ 4 ತಿಂಗಳಲ್ಲಿ 114 ಸಾವು, 41,000 ಹೀಟ್​ಸ್ಟ್ರೋಕ್

Most read

ದೇಶದ ಬಹುತೇಕ ಭಾಗಗಳಲ್ಲಿ ನಿರಂತರ ಬಿಸಿಗಾಳಿಯಿಂದಾಗಿ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈ ವರ್ಷ ಮಾರ್ಚ್​ 1ರಿಂದ ಜೂನ್​ 18ರವರೆಗೆ ಕನಿಷ್ಠ 114 ಜನರು ಬಿಸಿಗಾಳಿಗೆ ಬಲಿಯಾಗಿದ್ದು, 40,984 ಕ್ಕೂ ಹೆಚ್ಚು ಜನರು ಶಂಕಿತ ಹೀಟ್​ಸ್ಟ್ರೋಕ್​ ಹೊಡೆತದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ರಾಜ್ಯಗಳಿಂದ ಬಂದಿರುವ ಅಂಕಿ – ಅಂಶಗಳು ಅಂತಿಮವಾಗಿಲ್ಲದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ರಾಷ್ಟ್ರೀಯ ಶಾಖ – ಸಂಬಂಧಿತ ಅನಾರೋಗ್ಯ ಮತ್ತು ಸಾವಿನ ಕಣ್ಗಾವಲು ಅಡಿಯಲ್ಲಿ ಸಂಗ್ರಹಿಸಿದ ಅಂಕಿ – ಅಂಶಗಳ ಪ್ರಕಾರ, 37 ಸಾವುಗಳು ಸಂಭವಿಸಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಕ್ರಮವಾಗಿ ಬಿಹಾರ, ರಾಜಸ್ಥಾನ ಮತ್ತು ಒಡಿಶಾ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿರುವುದು ವರದಿಯಾಗಿದೆ.

ಬಿಸಿಗಾಳಿ ಪೀಡಿತ ರೋಗಿಗಳಿಗೆ ನಿಯಮಿತವಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಂಕಿ – ಅಂಶಗಳ ಪ್ರಕಾರ, ಜೂನ್ 19 ರಂದು, ಹೀಟ್​ಸ್ಟ್ರೋಕ್​ನಿಂದ ನಾಲ್ಕು ಸಾವುಗಳು ದೃಢಪಟ್ಟಿದ್ದು, ಏಳು ಶಂಕಿತ ಹೀಟ್​ಸ್ಟ್ರೋಕ್​ ಸಾವುಗಳು ಸಂಭವಿಸಿವೆ. ಉತ್ತರ ಮತ್ತು ಪೂರ್ವ ಭಾರತದ ಭಾಗಗಳಲ್ಲಿ ಶಾಖದ ಹೊಡೆತದಿಂದ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿವೆ. ಹೀಟ್​ಸ್ಟ್ರೋಕ್​ನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರಿಗೆ ಆರೋಗ್ಯ ಸೇವೆ ನೀಡಲು, ಎಲ್ಲ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸುವಂತೆ ನಡ್ಡಾ ಬುಧವಾರ ನಿರ್ದೇಶನ ನೀಡಿದ್ದರು.

More articles

Latest article