ಬೆಂಗಳೂರು: ಅಕಾಡೆಮಿ, ಪ್ರಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳೇ ಹೊರತು ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಲ್ಲ. ಸರ್ಕಾರದ ಈ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಆಗತ್ಯ. ಈ ಸೂಕ್ಷತೆಯ ಅರಿವು ಸಂಬಂಧಪಟ್ಟವರಿಗೆ ಇರಬೇಕು ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಕಾಡೆಮಿ, ಪ್ರಾಧಿಕಾರಗಳ ಸ್ವಾಯತ್ತತೆಯ ವಿಷಯ ಈಗ ಮುನ್ನಲೆಗೆ ಬಂದಿದೆ. ಈ ಸಂಸ್ಥೆಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸರಕಾರವೇ ನಾಮ ನಿರ್ದೇಶನ ಮಾಡುತ್ತದೆ. ಆದರೆ ಈ ನಾಮ ನಿರ್ದೇಶನವು ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.
ಅಕಾಡೆಮಿ ಮತ್ತು ಪ್ರಾಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳೇ ಹೊರತು ರಾಜಕೀಯ ಪಕ್ಷದ ಅಂಗ ಸಂಸ್ಥೆಗಳಲ್ಲ. ನಿಗಮ ಮಂಡಳಿಗಳಂತೆ ಅಲ್ಲವೇ ಅಲ್ಲ. ನಿಗಮ ಮಂಡಳಿಗಳಿಗೆ ಸಾಮಾನ್ಯವಾಗಿ ಸರ್ಕಾರಗಳು ಪಕ್ಷದ ಕಾರ್ಯಕರ್ತರು ಮುಖಂಡರನ್ನು ನಾಮ ನಿರ್ದೇಶನ ಮಾಡುತ್ತವೆ. ಅಕಾಡೆಮಿ ಪ್ರಾಧಿಕಾರಗಳ ನಾಮ ನಿರ್ದೇಶನಕ್ಕೆ ಪಕ್ಷನಿಷ್ಠೆ ಪ್ರಮುಖ ಮಾನದಂಡವಲ್ಲ ಹೀಗಾಗಿ ಸರ್ಕಾರದ ಈ ಸಾಂಸ್ಕೃತಿಕ ಸಂಸ್ಥೆಗಳಿಗೆ ಸ್ವಾಯತ್ತತೆ ಆಗತ್ಯ. ಈ ಸೂಕ್ಷತೆಯ ಅರಿವು ಸಂಬಂಧಪಟ್ಟವರಿಗೆ ಇರಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಆರಂಭದಲ್ಲಿ ‘ಅಕಾಡೆಮಿಗಳ ಸನ್ನದು’ ಎಂಬ ನಿಯಮಾವಳಿಯಿತ್ತು. ಸರ್ಕಾರದ ಮಧ್ಯ ಪ್ರವೇಶ ಕಡಿಮೆಯಿತ್ತು. ಆನಂತರ ೧೪.೩.೨೦೦೫ರಲ್ಲಿ ಈ ಸನ್ನದುವನ್ನು ಪರಿಷ್ಕರಿಸಿ ‘ಅಕಾಡೆಮಿಗಳ ನಿಯಾಮವಳಿ’ಯನ್ನು ಮರು ರಚನೆ ಮಾಡಲಾಯಿತು. ಕೆಲವು ಅಂಶಗಳಲ್ಲಿ ಅಧಿಕಾರಿಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸಲಾಯಿತು ಎಂದು ಅವರು ವಿವರಿಸಿದ್ದಾರೆ.
ಸಾಂಸ್ಕೃತಿಕ ನಿಯಂತ್ರಣದ ಬದಲು ಸಂಪೂರ್ಣ ಸಾಂಸ್ಕೃತಿಕ ಸ್ವಾಯತ್ತತೆ ನೀಡಬೇಕೆಂದು ನನ್ನ ನೇತೃತ್ವದ ಸಾಂಸ್ಕೃತಿಕ ನೀತಿಯಲ್ಲಿ ಶಿಫಾರಸು ಮಾಡಲಾಗಿತ್ತು. ಈ ಹಿಂದೆ ಇದ್ದ ಇದೇ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಸಚಿವ ಸಂಪುಟದಲ್ಲಿ ಚರ್ಚಿಸಿ, ಸಂಪುಟ ಉಪ ಸಮಿತಿಯ ಪರಿಶೀಲನೆಗೆ ಒಪ್ಪಿಸಿ, ಅನಂತರ ನಮ್ಮ ಸಮಿತಿಯ ಅನೇಕ ಶಿಫಾರಸುಗಳನ್ನು ಒಪ್ಪಿ ಆದೇಶವನ್ನು ಹೊರಡಿಸಿತು. ದಿನಾಂಕ ೧೦.೧೦.೨೦೧೭ರ ಈ ಆದೇಶದಲ್ಲಿ “ಅಕಾಡೆಮಿಯ ಅಂಗರಚನೆ/ ನಿಯಮಾವಳಿ ಮತ್ತು ಹಣಕಾಸಿನ ನರ್ವಹಣೆಯಲ್ಲಿ ನಿಯಾಮಾನುಸಾರ ಕಾರ್ಯ ಕ್ರಮಗಳನ್ನು ರೂಪಿಸುವ ಮತ್ತು ಅನುಷ್ಠಾನ ಮಾಡುವ ಸ್ವಾಯತ್ತತೆಯನ್ನು ಅಕಾಡೆಮಿಗಳಿಗೆ ಒದಗಿಸುವುದು” ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ. ಪ್ರಾಧಿಕಾರಗಳಿಗೆ ಶಾಸನ ಬದ್ಧ ಅಧಿಕಾರವಿದೆ. ಆದ್ದರಿಂದ ಸ್ವಾಯತ್ತತೆಯು ಅಕಾಡೆಮಿ ಮತ್ತು ಪ್ರಾಧಿಕಾರಗಳ ಅವಿಭಾಜ್ಯ ಅಂಗ ಎನ್ನುವುದನ್ನು ಸರ್ಕಾರ, ಪಕ್ಷ ಮತ್ತು ಈ ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸ್ವಾಯತ್ತತೆ ವಿಷಯದಲ್ಲಿ ರಾಜಿ ಸಲ್ಲದು ಎಂದು ಅವರು ಹೇಳಿದ್ದಾರೆ.