ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ: ಸತ್ತವರ ಸಂಖ್ಯೆ 34ಕ್ಕೆ ಏರಿಕೆ

Most read

ಚೆನ್ನೈ: ಕಲ್ಲಕುರುಚಿ ಜಿಲ್ಲೆಯಲ್ಲಿ ನಡೆದಿರುವ ಕಳ್ಳಭಟ್ಟಿ ದುರಂತದಲ್ಲಿ ಸತ್ತವರ ಸಂಖ್ಯೆ 34ಕ್ಕೆ ಏರಿದ್ದು, ಇನ್ನೂ ಹತ್ತು ಮಂದಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿದೆ.

ಘಟನೆಯ ಕುರಿತು ಮಾಹಿತಿ ಹೊರಬೀಳುತ್ತಿದ್ದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಿಬಿಸಿಐಡಿ (CBCID) ತನಿಖೆಗೆ ಆದೇಶಿಸಿದ್ದಾರೆ. ಬುಧವಾರ ದುರ್ಘಟನೆ ಸಂಭವಿಸಿದ ನಂತರ ಒಟ್ಟು 54 ಮಂದಿಯನ್ನು ಕಲ್ಲಕುರುಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆ ಪೈಕಿ 34 ಮಂದಿ ಮೃತಪಟ್ಟಿದ್ದರು.

ಘಟನೆಯ ತರುವಾಯ ಕಳ್ಳಭಟ್ಟಿಯನ್ನು ಮಾರಾಟ ಮಾಡಿ ದುರಂತಕ್ಕೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, 200 ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ಕಳ್ಳಭಟ್ಟಿ ಸೇವಿಸಿದವರು ಮನೆಗಳಿಗೆ ತೆರಳಿದ ನಂತರ ವಾಂತಿ ಮಾಡಿಕೊಂಡಿದ್ದಾರೆ. ತೀವ್ರ ಸ್ವರೂಪದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತರ ಪ್ರಜ್ಞೆ ತಪ್ಪಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಪಾರ ಪ್ರಮಾಣದ ಸಾವು ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಕಳ್ಳಭಟ್ಟಿಯಲ್ಲಿ ಮೆಥನಾಲ್ (methanol) ಬಳಕೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಕಳೆದ ವರ್ಷ ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಗಳಲ್ಲಿ 22 ಮಂದಿ ಮೃತಪಟ್ಟಿದ್ದರು.  ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.

ಈ ನಡುವೆ ಕಳ್ಳಭಟ್ಟಿ ದುರಂತದ ಹಿನ್ನೆಲೆಯಲ್ಲಿ ಕಲ್ಲಕುರಿಚಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಸಮಯ್ ಸಿಂಗ್ ಮೀನಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಜಿಲ್ಲಾಧಿಕಾರಿ ಎಸ್ ಎಸ್ ಮೀನಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇಂದು ತಮಿಳುನಾಡು ವಿಧಾನಸಭಾ ಅಧಿವೇಶನ ಆರಂಭಗೊಳ್ಳುತ್ತಿದ್ದು, ಕಳ್ಳಭಟ್ಟಿ ದುರಂತ ಸದನದಲ್ಲಿ ಮಾರ್ದನಿಸುವ ಸಾಧ್ಯತೆ ಇದೆ.

More articles

Latest article