ರಾಜ್ಯದಲ್ಲಿ “ಅಧಿಕಾರಕ್ಕೆ ಬಂದರೆ ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದ ಸುತ್ತಮುತ್ತಲೂ 2 ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುತ್ತೇನೆ” ಎಂದು 2018ರಲ್ಲಿ ಹೇಳಿದ್ದ ಎಚ್.ಡಿ ಕುಮಾರಸ್ವಾಮಿ ಈಗ ಕೇಂದ್ರ ಉಕ್ಕು ಸಚಿವರಾದ ಬೆನ್ನಲ್ಲೇ ದೇವದಾರಿ ಕಬ್ಬಿಣನ ಅದಿರು ಗಣಿ ಕಾರ್ಯಾಚರಣೆಗೆ ಸಹಿ ಹಾಕುವ ಮೂಲಕ ತಮ್ಮ ಎರಡು ತಲೆಯ ರಾಜಕಾರಣ ಪ್ರದರ್ಶಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ 2018ರ ಫೆಬ್ರುವರಿ 26ರಂದು ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಬಂದಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಜನಸಂಗ್ರಾಮ ಪರಿಷತ್ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ಭೇಟಿಯಾಗಿದ್ದರು. ‘ಗಣಿಗಾರಿಕೆಯಿಂದ ಕುಮಾರಸ್ವಾಮಿ ದೇವಾಲಯಕ್ಕೆ ಧಕ್ಕೆಯಾಗುತ್ತಿದೆ. ಅದಕ್ಕೆ ದೇವಾಲಯದ ಸುತ್ತಮುತ್ತ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು’ ಎಂದು ಅವರು ಕೋರಿದ್ದರು.
ಜನಸಂಗ್ರಾಮ ಪರಿಷತ್ ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿದ ಕುಮಾರಸ್ವಾಮಿ, ದೇವಾಲಯದ ಸುತ್ತಮುತ್ತಲೂ 2 ರಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಕೋರುತ್ತೇವೆ. 2019ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇವಾಲಯದ ಸುತ್ತಮುತ್ತಲೂ ಗಣಿಗಾರಿಕೆ ನಿಷೇಧಿಸುತ್ತೇವೆ ಎಂದು ಹೇಳಿ ಕುಮಾರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.
2018ರಲ್ಲಿ ಕುಮಾರಸ್ವಾಮಿ ಅವರೇ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ, ಕೇಂದ್ರ ಉಕ್ಕು ಸಚಿವ ಆದ ತಕ್ಷಣ ಇಲ್ಲಿನ ಪರಿಸ್ಥಿತಿಯನ್ನು ಲೆಕ್ಕಿಸದೇ, ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಈಗ ಮತ್ತೆ ಸಂಡೂರಿನಲ್ಲಿ ಗಣಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಜನಸಂಗ್ರಾಮ ಪರಿಷತ್ ಮತ್ತು ನಾಗರಿಕ ಸಂಘಟನೆ ಆರೋಪಿಸಿದೆ.
ಈಗಾಗಲೇ ಗಣಿ ಸ್ಪೋಟದಿಂದ ದೇವಸ್ಥಾನದ ಕಲ್ಲಿನ ಕಂಬಗಳಲ್ಲಿ ಬಿರುಕು ಮೂಡಿದ್ದು, ಗೋಪುರ ವಾಲಿದೆ. ಸ್ಥಳೀಯ ಗ್ರಾಮಗಳ ಕುಡಿಯುವ ನೀರಿನ ಮೂಲ ಕಲುಷಿತವಾಗಿದೆ. ಕಬ್ಬಿಣದ ಅದಿರು ಕಣಗಳಿಂದ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ. ಗಣಿ ಧೂಳಿನಿಂದ ದೇವಸ್ಥಾನ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ಹೀಗಾಗಿ ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸಬೇಕು. ಐತಿಹಾಸಿಕ ಸ್ಮಾರಕವಾದ ದೇವಸ್ಥಾನ ಸಂರಕ್ಷಣೆ ಮಾಡುವಂತೆ ಜನಸಂಗ್ರಾಮ ಪರಿಷತ್ ಮತ್ತು ನಾಗರಿಕ ಸಂಘಟನೆ ಆಗ್ರಹಿಸಿದೆ.
7ನೇ ಶತಮಾನದ ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಕುಮಾರಸ್ವಾಮಿ ದೇವಸ್ಥಾನ ನಿರ್ಮಾಣವಾಗಿದ್ದು, ದೇವಸ್ಥಾನದ ಸುತ್ತಲಿನ ಬೆಟ್ಟದಲ್ಲಿ ಜೀವ ವೈವಿಧ್ಯ ಮತ್ತು ಔಷಧೀಯ ಗುಣವುಳ್ಳ ಸಸ್ಯಗಳನ್ನ ಸ್ವಾಮಿಮಲೈ ಅರಣ್ಯ ಪ್ರದೇಶ ಹೊಂದಿದೆ. ಈ ಬೆಟ್ಟದಲ್ಲಿ 2.5 ಎಕರೆ ಜಾಗದಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ದಕ್ಷಿಣ ಪ್ರಸ್ಥಭೂಮಿಯ ಪಶ್ಚಿಮಘಟ್ಟವೆಂದೇ ಸ್ವಾಮಿಮಲೈ ಅರಣ್ಯ ಪ್ರದೇಶ ಬೆಟ್ಟ ಪ್ರಸಿದ್ದಿ ಪಡೆದಿದೆ.