ತರೀಕೆರೆಯ (Tarikere) ಹೆಬ್ಬೆ ಜಲಪಾತದ (Hebbe Falls) ಬಳಿ ಪೋಟೋ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತನನ್ನು ಹೈದರಾಬಾದ್ (Hyderabad) ಮೂಲದ ಶ್ರವಣ್ (25) ಎಂದು ಗುರುತಿಸಲಾಗಿದೆ. ಮೃತ ಶ್ರವಣ್ ತನ್ನ ಸ್ನೇಹಿತನ ಜೊತೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ, ಗಾಳಿಕೆರೆ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಪ್ರವಾಸಕ್ಕೆ ಬಂದಿದ್ದ. ಇಬ್ಬರೂ ಸೋಮವಾರ ಹೆಬ್ಬೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಕಾಲು ಜಾರಿ ನೀರಿನೊಳಕ್ಕೆ ಬಿದ್ದಿದ್ದಾನೆ. ಕೂಡಲೇ ಆತನ ಸ್ನೇಹಿತ ಹಾಗೂ ಇತರೆ ಪ್ರವಾಸಿಗರು ಆತನನ್ನ ಮೇಲಕ್ಕೆತ್ತಿದ್ದಾರೆ. ನಂತರ ಚಿಕಿತ್ಸೆಗಾಗಿ ತರಿಕೆರೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಆಸ್ಪತ್ರೆ ಆವರಣದಲ್ಲೇ ಯುವಕ ಸಾವನ್ನಪಿದ್ದಾನೆ.
ಹೆಬ್ಬೆ ಜಲಪಾತ ಕಾಡಿನೊಳಗಿದ್ದು, ಕೆಮ್ಮಣ್ಣುಗುಂಡಿಯಿಂದ ಸುಮಾರು 7 ಕಿ.ಮೀ ಕಾಫಿ ತೋಟದ ಒಳಗೆ ಜೀಪ್ನಲ್ಲೇ ಹೋಗಬೇಕು. ಹೆಬ್ಬೆ ಜಲಪಾತ ತರೀಕೆರೆಯಿಂದ ಸುಮಾರು 35-40 ಕಿಮೀ ಮೀಟರ್ ದೂರದಲ್ಲಿದೆ. ಅಲ್ಲಿಂದ ಶ್ರವಣ್ನನ್ನು ಆಸ್ಪತ್ರೆಗೆ ಕರೆತರುವುದು ಬಹಳ ತಡವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.