ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹಾಗೂ ಒಂಬತ್ತು ಬಾರಿ ಶಾಸಕರಾದ ಅವಧೇಶ್ ಪ್ರಸಾದ್, ರಾಮನ ನಾಡು ಅಯೋಧ್ಯೆಯ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ, ಪ್ರಸಕ್ತ ಚುನಾವಣೆಯಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.
ದೇಶದಲ್ಲಿ ನಿರುದ್ಯೋಗ ಹೆಚ್ಚಾಯಿತು, ಬಡತನ ಏರಿಕೆಯಾಯಿತು, ಬೆಲೆಗಳು ಗಗನಕ್ಕೇರಿದವು, ಹಣದುಬ್ಬರ ಹೆಚ್ಚಾಯಿತು. ಎಲ್ಲದಕ್ಕೂ ರಾಮರಾಮ ಎಂದು ಬಿಜೆಪಿಯವರು ಉತ್ತರ ಕೊಡಲಾರಂಭಿಸಿದರು. ಪ್ರಭು ಶ್ರೀರಾಮಚಂದ್ರನ ಆದರ್ಶವನ್ನು ಬಿಜೆಪಿಯವರು ಮಣ್ಣುಪಾಲು ಮಾಡಿದರು ಎಂದು ಅವಧೇಶ್ ಪ್ರಸಾದ್ ಕಿಡಿಕಾರಿದ್ದಾರೆ.
ಬಿಜೆಪಿಯು ಈ ದೇಶದಲ್ಲಿ ಬರೀ ಸುಳ್ಳನ್ನು ಬಿತ್ತರಿಸುತ್ತಿದೆ, ಶ್ರೀರಾಮಚಂದ್ರನನ್ನು ತಂದವರು ನಾವೇ ಎಂದು ಬಿಜೆಪಿ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ರಾಮನ ಹೆಸರಿನಲ್ಲಿ ಮೋಸವನ್ನು ಮಾಡಿ, ಅದರಲ್ಲಿ ವ್ಯಾಪಾರವನ್ನು ಬಿಜೆಪಿಯವರು ಮಾಡಿದರು ಎಂದು ಹಾಲೀ ಶಾಸಕರೂ ಆಗಿರುವ ಪ್ರಸಾದ್ ಹೇಳಿದ್ದಾರೆ.
ನನ್ನ ಎದುರಾಳಿ ಲಲ್ಲು ಸಿಂಗ್, ಸಂವಿಧಾನದಲ್ಲಿ ಬದಲಾವಣೆಯನ್ನು ತರಲು ಬಿಜೆಪಿಗೆ 400 ಸೀಟ್ ಬೇಕು ಎಂದು ಹೇಳಿದರು. ಈ ಮಾತನ್ನು ಪ್ರಚಾರದ ವೇಳೆ ಅವರು ಹೇಳಬಾರದಾಗಿತ್ತು. ಬಿಜೆಪಿ ಅಭ್ಯರ್ಥಿಯ ಈ ಮಾತು ಮತದಾರರಿಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು 54,567 ಮತಗಳ ಅಂತರದಿಂದ ಸೋಲಿಸಿ, ಸಂಸತ್ತಿಗೆ ಆಯ್ಕೆಯಾಗಿದ್ದಾರೆ.