ಹೊಸದಿಲ್ಲಿ: ನಿನ್ನೆಯಿಂದ ಸಂಚಲನ ಮೂಡಿಸಿದ್ದ ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ ನಿಜ ಎಂದು ಆಮ್ ಆದ್ಮಿ ಪಾರ್ಟಿ ಒಪ್ಪಿಕೊಂಡಿದೆ.
ಸ್ವಾತಿ ಮಲಿವಾಲ್ ಅವರ ಮೇಲೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಹಾಯಕನೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ವಿಷಯ ನಿನ್ನೆ ಬಹಿರಂಗಗೊಂಡಿತ್ತು.
ಈ ಕುರಿತು ಸ್ಪಷ್ಟನೆ ನೀಡಿದ್ದ ದೆಹಲಿ ಪೊಲೀಸರು, ಬೆಳಿಗ್ಗೆ 9 ಗಂಟೆಯ ವೇಳೆಗೆ ತುರ್ತು ಸಹಾಯಕ್ಕಾಗಿ ಮನವಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಧಾವಿಸಿದ್ದವು. ಆದರೆ ಠಾಣೆಗೂ ಬಂದಿದ್ದ ಸಂಸದೆ ಸ್ವಾತಿ ಮಲಿವಾಲ್ ಯಾವುದೇ ದೂರು ನೀಡದೇ ಹಿಂದಿರುಗಿದರು ಎಂದು ಹೇಳಿದ್ದರು.
ಇದೇ ವಿಷಯವನ್ನು ಇಟ್ಟುಕೊಂಡು ಭಾರತೀಯ ಜನತಾ ಪಕ್ಷ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿತ್ತು. ಘಟನೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದೇ ಇದ್ದಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಇದೀಗ ಎಎಪಿ ಮೌನ ಮುರಿದಿದ್ದು, ಪಕ್ಷದ ಪ್ರಮುಖ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಘಟನೆಯನ್ನು ಒಪ್ಪಿಕೊಂಡಿದ್ದಲ್ಲದೇ, ಇದು ಖಂಡನೀಯವಾಗಿದೆ ಎಂದು ಹೇಳಿದ್ದಾರೆ.
ಸ್ವಾತಿ ಮಲಿವಾಲ್ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು. ಅವರು ಡ್ರಾಯಿಂಗ್ ರೂಮ್ ನಲ್ಲಿ ಕುಳಿತು ನಿರೀಕ್ಷಣೆಯಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಹಾಯಕ ವೈಭವ್ ಕುಮಾರ್ ಎಂಬಾತ ದುರ್ವರ್ತನೆ ತೋರಿದ್ದಾನೆ ಎನ್ನಲಾಗಿದೆ. ಮುಖ್ಯಮಂತ್ರಿಗಳು ಘಟನೆಯ ಮಾಹಿತಿ ಪಡೆದಿದ್ದು, ದುರ್ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.