ಜಾತಿ, ಧರ್ಮ ಮೀರಿದ ಮದುವೆಗಳು ಹೆಚ್ಚಾಗಬೇಕು. ಪ್ರತಿಯೊಂದು ಕಾರ್ಯಕ್ರಮವೂ inclusive ಆಗಿರುವಂತೆ ನೋಡಿಕೊಳ್ಳಬೇಕು. ಪದೇ ಪದೇ ಸಾಮರಸ್ಯ, ಪ್ರೀತಿ, ಸ್ನೇಹ, ಭ್ರಾತೃತ್ವ ದ ಬಗ್ಗೆ ಮಾತಾಡುತ್ತಾ ಪ್ರತಿ ಮನೆ ಮನೆಯ, ಮನಕ್ಕೂ ಪಸರಿಸಬೇಕು. ಆವಾಗ್ಲೇ ಈ ದ್ವೇಷದ ಜ್ವಾಲೆ ಕಡಿಮೆ ಆಗಬಹುದೇನೋ! – M.K ಸಾಹೇಬ್ ನಾಗೇಶನಹಳ್ಳಿ.
ಇತ್ತೀಚಿಗೆ ನನ್ನ ಗೆಳತಿಯೊಬ್ಬಳು ಬಹಳ ದಿನಗಳ ನಂತರ ಫೋನ್ ಮಾಡು ಅಂತ ಮೆಸೇಜ್ ಮಾಡಿದಕ್ಕೆ, ಕಾಲ್ ಮಾಡಿದ್ದೆ. ಅನೇಕ ವಿಷಯಗಳ ಕುರಿತು ದೀರ್ಘ ಚರ್ಚೆ ನಡೆಯಿತು. ನಾನು ಮತ್ತು ಅವಳು ಸ್ನೇಹಿತರು ಅನ್ನೋದು ಅವರ ಮನೆಯವರಿಗೂ ಗೊತ್ತು. ಅವಳು ಮೇಲ್ವರ್ಗದವಳು. ಅವರ ಮನೆಯಲ್ಲಿ ನೇಹಾ ಕೊಲೆ ಪ್ರಕರಣದಲ್ಲಿ ನಡೆದ ದ್ವೇಷ ರಾಜಕೀಯವನ್ನು ನಂಬಿದ್ದರು. ಅಲ್ಲದೆ ಅವಳಿಗೆ ನಿನ್ನ ಸಾಹೇಬ್ ನಿಂದ ಹುಷಾರಾಗಿರು, ನಿನಗೆ ಏನಾದ್ರೂ ಮಾಡಿಬಿಟ್ಟರೆ ಎನ್ ಮಾಡೋದು ಅಂತ ಹೇಳಿದ್ದನ್ನು ಹಂಚಿಕೊಂಡಳು.
ಆ ಕ್ಷಣ ಅವಳು ಎದೆಗೆ ಚೂರಿ ಇರಿದಷ್ಟೇ ನೋವಾಯಿತು. ಅಷ್ಟೇ ಅವಳ ಮೇಲೆ ಕನಿಕರವೂ ಬಂತು. ರಾಜಕಾರಣಿಗಳು, ಕೆಲ ಬಾಡಿಗೆ ಭಾಷಣಕಾರರು ತಮ್ಮ ಸ್ವಾರ್ಥಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತರು ಅಂತ ಬೆಂಕಿ ಹಚ್ಚುವ ಕೆಲಸ ಮಾಡ್ತಾ ಇದ್ದಾಗ ಅದರ ಪರಿಣಾಮ ಸಮಾಜದ ಮೇಲೆ ಗಾಢವಾಗಿ ಬೀಳುತ್ತೆ. ಅದರ ಫಲವೇ ಸ್ನೇಹಿತೆಯ ಮನೆಯವರ ಮನದಲ್ಲಿ ನನ್ನ ಮೇಲೆ ಮೂಡಿದ ಭಾವನೆ.
ಇತ್ತೀಚಿಗೆ ಬಿಜೆಪಿಯ ನಾಯಕರು, ಕೆಲ ಕಾಂಗ್ರೆಸ್ ನಾಯಕರು ತಮ್ಮ ಎಲ್ಲ ಭಾಷಣಗಳಲ್ಲಿ ಮುಸ್ಲಿಂ ದ್ವೇಷದ ಮಾತುಗಳನ್ನೇ ಕಾರುತ್ತಿದ್ದಾರೆ. ಅವು ಸತ್ಯ- ಸುಳ್ಳಿನ ಆಚೆಗೆ ಟಿವಿ ಮಾಧ್ಯಮಗಳಲ್ಲಿ, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಇನ್ನಿತರ ಸೋಷಿಯಲ್ ಮೀಡಿಯಾ ಮೂಲಕ ಪ್ರತಿ ಮನೆಯ ಪ್ರತಿಯೊಬ್ಬರನ್ನೂ ತಲುಪುತ್ತಿದೆ. ಇದರ ಪರಿಣಾಮವಾಗಿ ಒಂದು ಧರ್ಮದ ಜನರ ಮೇಲೆ ಅವರಿಗೆ ಅರಿವಿಲ್ಲದೆ ದ್ವೇಷ, ಅಸೂಯೆ ಹುಟ್ಟುತ್ತಿದೆ.
ಹಿಂದೂ ಮುಸ್ಲಿಂ ಎನ್ನದೆ ಒಂದೇ ತಟ್ಟೆಯಲ್ಲಿ ಉಂಡ ಸ್ನೇಹಿತರಿಗೆ ಈಗ ಮುಸ್ಲಿಮರ ದೇಶಪ್ರೇಮದ ಬಗ್ಗೆ ಪ್ರಶ್ನೆಗಳು ಹುಟ್ಟುತ್ತಿವೆ! ಒಂದೇ ತಂಡದಲ್ಲಿ ಆಟ ಆಡಿದ ಮುಸ್ಲಿಂ ಸ್ನೇಹಿತನ ಮೇಲೆ ನಂಬಿಕೆಯೇ ಮಾಯವಾಗುತ್ತಿದೆ. ಪ್ರತಿ ಬಾರಿ ರಕ್ತದ ಅವಶ್ಯಕತೆ ಬಿದ್ದಾಗ ಎಲ್ಲ ಸ್ನೇಹಿತರಿಗೆ ರಕ್ತವನ್ನು ಆರೆಂಜ್ ಮಾಡಿಕೊಡುವ ಸಾಬರ ಹುಡುಗನ ರಕ್ತದಲ್ಲಿ ಈಗ ಬಣ್ಣವನ್ನು ಹುಡುಕುತ್ತಿದ್ದಾರೆ. ಇಷ್ಟೊಂದು ದ್ವೇಷ ನನ್ನ ಸ್ನೇಹಿತರಲ್ಲಿ, ಸಮಾಜದಲ್ಲಿ ಬರಲು ಕಾರಣ ಯಾರು? ಸಾಬರು ಎನ್ನುವ ಪದ ಒಂದು ಬೈಗುಳವಾಗಿ ಬದಲಾಗಲು ಕಾರಣರು ಯಾರು?
ಇನ್ನೊಂದು ಪ್ರಸಂಗ ನೋಡಿ..
ಇವತ್ತು ಹೆಸರಿನ ಮೇಲೆಯೇ ಅಸ್ಪೃಶ್ಯತೆ ನಡೆಯುತ್ತಿದೆ. ದಲಿತರಂತೆ ಇಂದು ಮುಸ್ಲಿಂ ಸಮುದಾಯದ ಯುವ ಜನರು ಪ್ರತಿ ದಿನ ತಮ್ಮ ಹೆಸರಿನ ಮೇಲೆಯೇ ಅವಮಾನ, ಅಪಮಾನ ಎದುರಿಸುತ್ತಿದ್ದಾರೆ.ಇತ್ತೀಚಿಗೆ ರೈಲ್ವೆಯಲ್ಲಿ ಒಬ್ಬ ಆರ್.ಪಿ.ಎಫ್ ಪೋಲಿಸ್ ಮುಸ್ಲಿಂ ಎನ್ನುವ ಕಾರಣಕ್ಕೆ ಮೂರು ಹುಡುಗರ ಮೇಲೆ ಗುಂಡು ಹಾರಿಸಿದ ಕೊಂದ ಘಟನೆ ಕಣ್ಣ ಮುಂದೆಯೇ ಇದೆ.
ನಾನು ಡಿಗ್ರಿಯಲ್ಲಿ ಓದುವಾಗ ಒಂದು ಹಾಸ್ಟೆಲ್ ಲಿ ಇದ್ದೆ. ಆದರೆ ಓದಲು ಒಂದು ರೂಂ ಹುಡುಕುತ್ತಿದ್ದೆ. ಗರ್ಲ್ಸ್ ಮೈನಾರಟಿ ಹಾಸ್ಟೆಲ್ ನ ವಾರ್ಡನ್ ಒಬ್ಬರು ಹೊಸದಾಗಿ ಮನೆ ಕಟ್ಟಿದ್ದರು. ಅದರ ಮೇಲಿನ ರೂಂ ಖಾಲಿ ಇತ್ತು. ನನ್ನ ಸ್ನೇಹಿತ ರಾಜೇಶ್, ವಾಸು ಮತ್ತು ನಾನು ಹೋಗಿ ಕೇಳಿದೆವು. ಸ್ನೇಹಿತರ ಇಬ್ಬರ ಹೆಸರು ಅವರಿಗೆ ಮೊದಲೇ ತಿಳಿದಿತ್ತು. ರೂಂ ಕೊಡಲು ಒಪ್ಪಿ ದೊಡ್ಡ ದೊಡ್ಡ ಮಾತಾಡಿದರು. ಕೆಳಗೆ ಇಳಿದು ಬರುವಾಗ ನನ್ನ ಹೆಸರು ಕೇಳಿದರು. ನಾನು ಮೌಲಾಸಾಬ (ಇನ್ನೂ ಹೆಸರನ್ನು M.K ಸಾಹೇಬ್ ಎಂದು ಬದಲಾಯಿಸಿರಲಿಲ್ಲ.) ಎಂದೆ. ನನ್ನ ಹೆಸರು ಕೇಳಿದ ತಕ್ಷಣಕ್ಕೆ ʼಅಯ್ಯೋ ನನ್ನ ಮಗನಿಗೆ ಓದಲು ರೂಂ ಬೇಕು, ರೂಂ ಖಾಲಿ ಇಲ್ಲʼ ಅಂತ ಒಂದೇ ಉಸಿರಲ್ಲಿ ಮುಖದ ಮೇಲೆ ಹೊಡೆದ ಹಾಗೇ ಹೇಳಿ ಬಿಟ್ಟರು.. ಆ ತಾಯಿ ನೌಕರಿ ಮಾಡ್ತಾ ಇದ್ದಿದ್ದು ಅಲ್ಪಸಂಖ್ಯಾತರ ಇಲಾಖೆಯಲ್ಲಿ!
ದೇಶದ 14% ದಿಂದ 15% ರಷ್ಟು ಇರುವ ಅಂದ್ರೆ ಸುಮಾರು 19ರಿಂದ 20ಕೋಟಿ ಮುಸ್ಲಿಂ ಸಮುದಾಯ ಪ್ರತಿ ದಿನ ತಮ್ಮ ದೇಶ ಭಕ್ತಿಯನ್ನು ಸಾಬೀತು ಮಾಡ್ಬೇಕು, ಇಲ್ಲದೆ ಹೋದಲ್ಲಿ ದೇಶದ್ರೋಹಿಗಳು ಎಂಬ ಪಟ್ಟ ಸುಲಭವಾಗಿ ಬಿರುದಾಗಿ ಬಿಡುತ್ತೆ. ಭಾರತ, ಪಾಕಿಸ್ತಾನ ಎರಡು ದೇಶಗಳಾದಾಗ ಭಾರತೀಯ ಮುಸ್ಲಿಮರಲ್ಲಿ ಪಾಕಿಸ್ತಾನಕ್ಕೆ ಹೋಗುವ ಆಯ್ಕೆ ಇತ್ತು. ಆದರೆ ಬಹುತೇಕರು ಆಯ್ಕೆ ಮಾಡಿದ್ದು ಕೂಡಿ ಬಾಳುವ ಪ್ರಜಾಪ್ರಭುತ್ವ ಭಾರತವನ್ನು. ಆ ಸಂದರ್ಭದಲ್ಲಿ ಮೌಲಾನ ಆಜಾದ್ ಅವರು “ನನಗೆ ದೇವರ ದೇವದೂತ ಬಂದು ನೀವು ಹಿಂದೂ ಮುಸ್ಲಿಂ ಎಂದು ಬೇರೆಯಾಗಿ ಬಿಡಿ. ನಿಮ್ಮನ್ನು ಸ್ವರ್ಗಕ್ಕೆ ಕಳಿಸುತ್ತೇವೆಂದು ಹೇಳಿದರೆ, ನಾನು ದೆಹಲಿಯ ಜಾಮಿಯಾ ಮಸ್ಜಿದ್ ಮೇಲೆ ನಿಂತು ಹೇಳುವೆ ನನಗೆ ಸ್ವರ್ಗಕ್ಕಿಂತ ಹಿಂದೂ ಮುಸ್ಲಿಂರ ಏಕತೆಯೇ ಮುಖ್ಯ” ಎಂದು ಹೇಳುತ್ತಾರೆ.
ಕೆಲವೊಮ್ಮೆ ನಾವು ಕೊಟ್ಟಿದ್ದೇವೆ, ಇವರನ್ನು ಇಟ್ಟುಕೊಂಡಿದ್ದೇವೆ ಎಂದು ಅನೇಕ ಸ್ನೇಹಿತರು ಹೇಳುತ್ತಿರುತ್ತಾರೆ. ನಾನು ಅವರಿಗೆ ಹೇಳುವುದು ದೇಶದಲ್ಲಿ ಇರಲು ಅಥವಾ ಕೊಡಲು ಇವರ್ಯಾರು?. ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬುದ್ಧಿಸ್ಟ್, ಜೈನ್ ಮುಂತಾದ ಪ್ರತಿಯೊಬ್ಬರಿಗೂ ಏನಾದ್ರೂ ಕೊಟ್ಟಿದ್ದರೆ ಅದು ಭಾರತದ ಸಂವಿಧಾನ ಕೊಟ್ಟಿರುವುದು. ಯಾರ ಭಿಕ್ಷೆಯಲ್ಲೂ ಯಾರೂ ಇಲ್ಲಿಲ್ಲ.
ಚಿಕ್ಕವರು ಇದ್ದಾಗ ಶಂ.ಗು. ಬಿರಾದಾರ ರವರು ಬರೆದ ಕವಿತೆ ನಮ್ಮ ಮೇಲೆ ಪ್ರಭಾವ ಬೀರಿತ್ತು.
ನಾವು ಎಳೆಯರು ನಾವು ಗೆಳೆಯರು,
ಹೃದಯ ಹೂವಿನ ಹಂದರ,
ನಾಳೆ ನಾವೇ ನಾಡ ಹಿರಿಯರು,
ನಮ್ಮ ಕನಸದೊ ಸುಂದರ.
ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿ-
ಗೊಂದೆ ಭಾರತ ಮಂದಿರ
ಶಾಂತಿ ದಾತನು ಗಾಂಧಿ ತಾತನು
ಎದೆಯ ಬಾನಿನ ಚಂದಿರ.
ಜಾತಿ ರೋಗದ ಭೀತಿ ಕಳೆಯುತ
ನೀತಿ ಮಾರ್ಗದಿ ನಡೆವೆವು
ಒಂದೆ ಮಾನವ ಕುಲವು ಎನ್ನುತ
ವಿಶ್ವ ಧರ್ಮವ ಪಡೆವೆವು.
ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು,
ದೇಶ ಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡೆವೆವು.
……….
ಇದು ಸತ್ಯವಾಗಬೇಕಿದ್ದರೆ ದೇಶದ ರಾಜಕಾರಣಿಗಳು, ಶಿಕ್ಷಕರು, ಮಾಧ್ಯಮಗಳು ತಮ್ಮ ಭಾಷಣ, ಚರ್ಚೆ, ಪಾಠಗಳಲ್ಲಿ ಶಾಂತಿ, ಸಾಮರಸ್ಯದ ವಿಶ್ವಪಥದ ಚಿಂತನೆಗಳನ್ನು ಅಪ್ಪಿಕೊಂಡು ಹಬ್ಬಿಸಬೇಕು.
ಜನರು ಕೂಡ ಮಾನವೀಯ ಗುಣಗಳನ್ನು ಅಂತಃಕರಣ ಗೊಳಿಸಿಕೊಳ್ಳಬೇಕು. ಜೊತೆಗೆ ಈ ಸಾಂಸ್ಕೃತಿಕ ಬಿಕ್ಕಟ್ಟಿಗೆ ಪ್ರಗತಿಪರರು ಕೂಡ ಸಕಾರಾತ್ಮಕ ಪ್ರತಿರೋಧಗಳನ್ನು ನೀಡುವ ಪ್ರಯತ್ನ ಮಾಡಬೇಕು. ಜಾತಿ, ಧರ್ಮ ಮೀರಿದ ಮದುವೆಗಳು ಹೆಚ್ಚಾಗಬೇಕು. ಪ್ರತಿಯೊಂದು ಕಾರ್ಯಕ್ರಮವೂ inclusive ಆಗಿರುವಂತೆ ನೋಡಿಕೊಂಡು ಪದೇ ಪದೇ ಸಾಮರಸ್ಯ, ಪ್ರೀತಿ, ಸ್ನೇಹ, ಭಾತೃತ್ವ ದ ಬಗ್ಗೆ ಮಾತಾಡುತ್ತಾ ಪ್ರತಿ ಮನೆ ಮನೆಯ, ಮನಕ್ಕೂ ಪಸರಿಸಬೇಕು. ಆವಾಗ್ಲೇ ಈ ದ್ವೇಷದ ಜ್ವಾಲೆ ಕಡಿಮೆ ಆಗಬಹುದೇನೋ!.
M.K ಸಾಹೇಬ್ ನಾಗೇಶನಹಳ್ಳಿ.