ಬೆಂಗಳೂರು: ವಿವಿಧ ಸಮುದಾಯಗಳಲ್ಲಿ ಜನಸಂಖ್ಯೆ ಏರಿಕೆ, ಇಳಿಕೆಗೆ ಸಂಬಂಧಿಸಿದಂತೆ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುವ ಸಂದರ್ಭದಲ್ಲಿ ಹಿಂದೂಗಳಿಗೆ ಭಾರತದ ತ್ರಿವರ್ಣ ಧ್ವಜದ ಬಾವುಟ, ಮುಸ್ಲಿಮರಿಗೆ ಪಾಕಿಸ್ತಾನದ ಬಾವುಟದ ಗ್ರಾಫಿಕ್ಸ್ ಬಳಸಿದ್ದ ಸುವರ್ಣ ನ್ಯೂಸ್ ಈಗ ವಿಷಾದ ವ್ಯಕ್ತಪಡಿಸಿದೆ.
ಇದು ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ, ಆಕಸ್ಮಿಕವಾಗಿ ಈ ತಪ್ಪು ಜರುಗಿದೆ. ತಪ್ಪು ಗೊತ್ತಾದಕೂಡಲೇ ಗ್ರಾಫಿಕ್ಸ್ ಬದಲಾಯಿಸಲಾಗಿದೆ. ಈ ಅಚಾತುರ್ಯಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸುವರ್ಣ ನ್ಯೂಸ್ ನಲ್ಲಿ ಇಂದು ನಿರೂಪಕಿ ಹೇಳಿದ್ದಾರೆ.
ಜನಸಂಖ್ಯೆ ಏರಿಕೆ ಇಳಿಕೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮುಸ್ಲಿಮರ ಹೆಸರಿನ ಜೊತೆ ಪಾಕಿಸ್ತಾನದ ಬಾವುಟದ ಗ್ರಾಫಿಕ್ಸ್ ಬಳಸಿದ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದು, ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮಹಮದ್ ಜುಬೇರ್ ಸುವರ್ಣ ನ್ಯೂಸ್ ಕಾರ್ಯಕ್ರಮದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಈ ಕುರಿತು ಕಾನೂನು ಕ್ರಮ ಆಗಬೇಕು ಎಂದು ಆಗ್ರಹಿಸಿದ್ದರು.
ನಿನ್ನೆಯಿಂದ ಅನೇಕರು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದು, ಸುವರ್ಣ ನ್ಯೂಸ್ ನಡೆಸಿರುವ ಈ ಕೃತ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಆಕ್ರೋಶ ಹೆಚ್ಚಾಗುತ್ತಿದ್ದಂತೆ ಇದೀಗ ಸುವರ್ಣ ನ್ಯೂಸ್ ವಿಷಾದ ವ್ಯಕ್ತಪಡಿಸಿದೆ.