ಪುಣೆ (ಮಹಾರಾಷ್ಟ್ರ): ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಖುಲಾಸೆ ಮಾಡಿರುವ ನ್ಯಾಯಾಲಯ, ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಚಿನ್ ಅಂದುರೆ, ಶರದ್ ಕಲಸ್ಕರ್ ಅವರುಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ತಲಾ ಐದು ಲಕ್ಷ ರೂ. ಜುಲ್ಮಾನೆ ವಿಧಿಸಲಾಗಿದೆ.
ಡಾ. ವೀರೇಂದ್ರ ಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಲೇಕರ್ ಎಂಬ ಇತರ ಮೂವರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ.
ಪುಣೆಯ ಸೆಷನ್ಸ್ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ಇಂದು ನ್ಯಾಯಮೂರ್ತಿ ಪಿ.ಪಿ.ಜಾದವ್ ಇಂದು ತೀರ್ಪು ಪ್ರಕಟಿಸಿದರು.
2013ರಲ್ಲಿ ಪುಣೆಯಲ್ಲಿ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದ ಮಹಾರಾಷ್ಟ್ರ ಅಂಧಶದ್ಧೆ ನಿರ್ಮೂಲನಾ ಸಮಿತಿಯ ಸ್ಥಾಪಕ, ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರನ್ನು ಇಬ್ಬರು ಹಂತಕರು ಗುಂಡಿಟ್ಟು ಕೊಂದಿದ್ದರು.
ಭಯೋತ್ಪಾದಕ ಚಟುವಟಿಕೆ ನಡೆಸುವ ಸನಾತನ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲ ಆರೋಪಿಗಳನ್ನು ಪ್ರಕರಣದ ತನಿಖೆ ನಡೆಸುತ್ತಿದ್ದ CBI ಸಂಸ್ಥೆ 2016ರಿಂದ 2019ರ ಅವಧಿಯಲ್ಲಿ ಬಂಧಿಸಿತ್ತು.
ಆರಂಭದಲ್ಲಿ ಪುಣೆ ಪೊಲೀಸರೇ ಪ್ರಕರಣದ ತನಿಖೆ ನಡೆಸುತ್ತಿದ್ದರು. 2014ರಲ್ಲಿ ಇದನ್ನು CBI ಗೆ ವಹಿಸಲಾಗಿತ್ತು. CBI ಐವರು ಆರೋಪಿಗಳನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಆರೋಪಿಗಳ ವಿರುದ್ಧ ಕೊಲೆ ಆರೋಪದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 302 ಮತ್ತು ಕ್ರಿಮಿನಲ್ ಪಿತೂರಿಗಾಗಿ 120 B ಸೆಕ್ಷನ್ ಗಳಡಿ ಕೇಸು ದಾಖಲಿಸಲಾಗಿತ್ತು. ಜೊತೆಗೆ UAPA ಅಡಿಯಲ್ಲೂ ಕೇಸು ದಾಖಲಿಸಲಾಗಿತ್ತು.
ವಕೀಲನೂ ಆಗಿರುವ ಆರೋಪಿ ಸಂಜೀವ್ ಪೂನಾಲೆಕರ್ ಮೇಲೆ IPC ಸೆಕ್ಷನ್ 201ರ ಅನ್ವಯ ಸಾಕ್ಷ್ಯನಾಶದ ಪ್ರಕರಣವನ್ನೂ ದಾಖಲಿಸಲಾಗಿತ್ತು. ಬಾವೆ ಮತ್ತು ಪುನಾಲೆಕರ್ ಈಗಾಗಲೇ ಜಾಮೀನಿನ ಮೇಲೆ ಹೊರಗೆ ಇದ್ದರೆ ಉಳಿದ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದೀಗ ಜೀವಾವಧಿ ಶಿಕ್ಷೆಗೊಳಗಾಗಿರುವ ಅಂದುರೆ ಮತ್ತು ಕಲಸ್ಕರ್ ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲೂ ಆರೋಪಿತರಾಗಿದ್ದಾರೆ.