ಮೈಸೂರು: ಸಂಸದ, NDA ಅಭ್ಯರ್ಥಿ ಪ್ರಜ್ವಲ ರೇವಣ್ಣನ ಕಾಮಕಾಂಡದ ತನಿಖೆಯನ್ನು SIT ನಡೆಸುತ್ತಿದೆ. ನಮ್ಮ ಪೊಲೀಸರ ದಕ್ಷತೆಯ ಬಗ್ಗೆ ನಮಗೆ ನಂಬಿಕೆ ಇದೆ, CBI ಗೆ ಪ್ರಕರಣ ವಹಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ನಂತರ ವಿಶ್ರಾಂತಿಗೆಂದು ಊಟಿಗೆ ತೆರಳಿದ್ದ ಅವರು ಇಂದು ಮೈಸೂರಿಗೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿಯವರು ಹಿಂದೆ CBI ಸಂಸ್ಥೆಯನ್ನು ಕರಪ್ಷನ್ ಬ್ಯೂರೋ ಆಫ್ ಇಂಡಿಯಾ ಎನ್ನುತ್ತಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಚೋರ್ ಬಚಾವೋ ಎನ್ನುತ್ತಿದ್ದರು. ಈಗ CBI ಮೇಲೆ ಅಷ್ಟೊಂದು ನಂಬಿಕೆ ಹೇಗೆ ಬಂತು ಎಂದು ಅವರು ಪ್ರಶ್ನಿಸಿದರು.
ನನ್ನ ಅಧಿಕಾರಾವಧಿಯಲ್ಲಿ ಹಲವು ಪ್ರಕರಣಗಳನ್ನು CBI ಗೆ ಒಪ್ಪಿಸಿದೆ. ಯಾರಿಗೂ ಶಿಕ್ಷೆಯಾಗಲಿಲ್ಲ. ಹಾಗಂತ CBI ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. SIT ಸರಿಯಾದ ತನಿಖೆ ನಡೆಸಿ ವರದಿ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದರು.
ಜೆಡಿಎಸ್ ನಾಯಕರ ಆರೋಪಗಳಿಗೆ ಉತ್ತರಿಸಿದ ಅವರು ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಾಗಲೀ, ನನ್ನ ಪಾತ್ರವಾಗಲೀ ಇಲ್ಲ. SIT ಕೆಲಸದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಎಚ್.ಡಿ.ರೇವಣ್ಣ ಮೇಲೆ ಪ್ರಕರಣವೇ ಇರದೇ ಇದ್ದರೂ ರಾಜಕೀಯ ಪ್ರೇರಿತವಾಗಿ ಬಂಧಿಸಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಪ್ರಕರಣವೇ ಇಲ್ಲದೇ ಇದ್ದಿದ್ದರೆ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಯಾಕೆ? ಪ್ರಕರಣವೇ ಇಲ್ಲದಿದ್ದರೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾದ ಮೇಲೇ ಅವರ ಬಂಧನವಾಗಿದೆ ಎಂದು ಸಿದ್ಧರಾಮಯ್ಯ ಹೇಳಿದರು.