700 ವರ್ಷಗಳಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ನಡೆಯುತ್ತಿದ್ದ ಐತಿಹಾಸಿಕ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವಕ್ಕೆ ಬಿಜೆಪಿ ಕಪ್ಪು ಚುಕ್ಕೆಯೊಂದನ್ನು ಇಟ್ಟಿದ್ಯಾಕೆ? ಸಮಿತಿಯಲ್ಲಿ ಮುಸ್ಲಿಮರು ಇರಲಿ, ಇಲ್ಲದಿರಲಿ, 700 ವರ್ಷಗಳಿಂದ ಮುಸ್ಲಿಮರೂ ಸೇರಿಕೊಂಡು ಎಲ್ಲಾ ಧರ್ಮಿಯರು ನಡೆಸುವ ಸಂಭ್ರಮದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ಶಾಂತಿ ಕದಡಿಸಿ ಲಕ್ಷಾಂತರ ಜನರ ಭಾವನೆಗೆ ಘಾಸಿ ಮಾಡಿದ್ದು ಸರಿಯೇ ಎಂಬ ಪ್ರಶ್ನೆಯನ್ನು ಬಿಜೆಪಿಗೆ ಕೇಳಬೇಕಿದೆ–ದಿನೇಶ್ ಕುಮಾರ್ .
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೌನ್ ಕೋಟೆಯಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಸರ್ಕಾರ 12 ಜನರ ಸಮಿತಿ ರಚಿಸಿದ್ದು, ಓರ್ವ ಮುಸ್ಲಿಂ ವ್ಯಕ್ತಿ ನವಾಜ್ ಎಂಬವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಬಿಜೆಪಿ ಪಕ್ಷವು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುತ್ತಿದೆ.
ಬಿಜೆಪಿಯು ಹಿಂದುತ್ವವೆಂದರೆ ವೈದಿಕತೆ ಎಂದು ತಿಳಿದುಕೊಂಡಂತಿದೆ. ಅವಿಮುಕ್ತೇಶ್ವರ ದೇವಸ್ಥಾನದ ಹಿನ್ನಲೆ ಮತ್ತು ಅಲ್ಲಿ ನಡೆಯುವ ಕರಗದ ಇತಿಹಾಸ ಗೊತ್ತಿಲ್ಲದವರು ಮಾತ್ರ ಈ ರೀತಿ ಕೋಮು ಪ್ರಚೋದನೆಗೆ ಪ್ರಯತ್ನಿಸಬಹುದು. ಬೆಂಗಳೂರು ಕರಗದಲ್ಲಿ ಕರಗ ದರ್ಗಾದೊಳಗೆ ಹೋಗುವ ಸಂಪ್ರದಾಯಿಕ ಆಚರಣೆ ಇದೆ. ಕರಗಕ್ಕೆ ಹಿಂದೂ- ಮುಸ್ಲಿಂ ಎಂಬ ಭೇದವಿಲ್ಲ. ಇದು ಕೇವಲ ಬೆಂಗಳೂರಿಗೆ ಸೀಮಿತವಲ್ಲ. ಹೊಸಕೋಟೆಯ ವಿಮುಕ್ತೇಶ್ವರ ಕರಗಕ್ಕೂ ಅನ್ವಯ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಏನೇ ಮಾಡಿದರೂ ಅವಿಮುಕ್ತೇಶ್ವರ ದೇವಸ್ಥಾನದಲ್ಲಿ ಕೋಮು ಅಸಹಿಷ್ಣುತೆಯನ್ನು ತಂದು ಅಶಾಂತಿ ಎಬ್ಬಿಸಲು ಸಾಧ್ಯವಿಲ್ಲ. ಏಕೆಂದರೆ ಈ ದೇಗುಲಕ್ಕೆ 700 ವರ್ಷಗಳ ಭವ್ಯ ಇತಿಹಾಸ ಇದೆ.
ಹೊಸಕೋಟೆಯ ಮೂಲ ಹೆಸರು ನವಸಾಲನಗರಿ. ನವಸಾಲ ನಗರಿ ಎಂದರೆ ಈ ನಗರದ ನವ (9) ಬೀದಿಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ನವಸಾಲ ನಗರದ ವ್ಯಾಪಾರವೇ ಇಡೀ ಬೆಂಗಳೂರು ಮತ್ತು ಸುತ್ತಮುತ್ತಲಿನ ವ್ಯಾಪಾರವನ್ನು ನಿರ್ಧರಿಸುತ್ತಿದ್ದ ಕಾಲವಿತ್ತಂತೆ ! ಅಷ್ಟು ಪ್ರಾಮುಖ್ಯತೆ ಹೊಂದಿದ್ದ ವ್ಯಾಪಾರ ಕೇಂದ್ರದಲ್ಲಿ ಈವರೆಗೂ ಕೋಮು ಸಂಬಂಧಿ ತಕರಾರುಗಳು ಬಂದಿದ್ದೇ ಇಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಶೇಟ್ ಗಳು ಜೊತೆಯಾಗಿ ವ್ಯಾಪಾರ ಮತ್ತು ಬದುಕು ಕಟ್ಟಿಕೊಂಡಿದ್ದಾರೆ. 700 ವರ್ಷಗಳಿಂದ ಈವರೆಗೂ ಈ ಸೌಹಾರ್ದತೆಗೆ ಕಿಂಚಿತ್ತೂ ಧಕ್ಕೆಯಾಗಿಲ್ಲ.
ಇದೇ ಜನರು ಅಂದಿನಿಂದ ಇಂದಿನವರೆಗೂ ನವಸಾಲ ನಗರದ ಹೊಸಕೋಟೆ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಕಾರ್ಯಕ್ರಮ ಮತ್ತು ಕರಗ ಉತ್ಸವವನ್ನು ನಡೆಸಿಕೊಂಡು ಬರುತ್ತಾರೆ. ಈ ಉತ್ಸವದಲ್ಲಿ ಹಿಂದೂಗಳ ತನು-ಮನ-ಧನದ ಪಾಲು ಎಷ್ಟಿದೆಯೋ ಅಷ್ಟೇ ಪಾಲು ಮುಸ್ಲೀಮರು ಮತ್ತು ಸಿಂಗ್, ಶೇಟ್ ಗಳದ್ದೂ ಇದೆ.
ಐತಿಹಾಸಿಕ ಹೊಸಕೋಟೆ ಕರಗಕ್ಕೆ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ನಗರ್ತಪೇಟೆಯ ಶೆಟ್ಟರುಗಳ ಸೇವೆಯ ಭಾಗವಾಗಿ ಅಂಕುರಾರ್ಪಣೆಯೊಂದಿಗೆ ಚಾಲನೆ ಸಿಗುತ್ತದೆ. ಆ ಬಳಿಕ ಹೊಸಕೋಟೆಯ ಪ್ರಮುಖ ವ್ಯಾಪಾರಿ ಬೀದಿಗಳಲ್ಲಿ ಪೋತರಾಜ ಸ್ವಾಮಿಯ ಮೂರ್ತಿಯೊಂದಿಗೆ ವಹ್ನಿಕುಲಸ್ಥರು ಕಾಣಿಕೆ ಸಂಗ್ರಹ ಮಾಡುತ್ತಾರೆ. ಮುಸ್ಲಿಮರೇ ಹೆಚ್ಚಾಗಿರುವ ವ್ಯಾಪಾರಿ ಬೀದಿಯಲ್ಲೂ ಅತೀ ಹೆಚ್ಚಿನ ಕಾಣಿಕೆ ಸಂಗ್ರಹವಾಗುತ್ತದೆ. ಅ ಬಳಿಕ ನಡೆಯುವ ಎಲ್ಲಾ ಸೇವೆಗಳು ವ್ಯಾಪಾರಿ ಸಮುದಾಯದಿಂದ ಜಾತಿಮತ ಬೇಧವಿಲ್ಲದೇ ನಡೆಯುತ್ತದೆ.
ನಗರ್ತಪೇಟೆ ವ್ಯಾಪಾರಸ್ಥರಿಂದ ನಂದಿ ವಾಹನೋತ್ಸವ, ಗೀತಾ ಪ್ರಿಂಟಿಂಗ್ ಪ್ರೆಸ್ ನಿಂದ ಕಾಶಿಯಾತ್ರೆ, ವೀರಶೈವ ಸಮಾಜದ ಸಂಘಟನೆಯಿಂದ ಗಿರಿಜಾ ಕಲ್ಯಾಣ, ಬ್ರಾಹ್ಮಣ ಸಂಘಟನೆಯಿಂದ ಮಡಿ ಉತ್ಸವ ಸೇವೆ, ಪೊಲೀಸ್ ಇಲಾಖೆಯಿಂದ ಪಾರ್ವತೋತ್ಸವ, ರಜಪೂತ ಸಂಘದಿಂದ ವಸಂತೋತ್ಸವ ಸೇವೆ, ಗಾಣಿಗ ಸಂಘಟನೆಯಿಂದ ಹಂಸ ವಾಹನೋತ್ಸವ ಸೇವೆ, ತಾಲೂಕು ಬಲಿಜಿಗ ಸಂಘದಿಂದ ಶಯನೋತ್ಸವ ಸೇವೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗ ಮತ್ತು ಲೋಕೋಪಯೋಗಿ ಇಲಾಖೆಯಿಂದ ಸಿಂಹ ವಾಹನೋತ್ಸವ ಸೇವೆ, ಬೆಸ್ತ ಕುಲಸ್ಥರಿಂದ ತೆಪ್ಪೋತ್ಸವ ಸೇವೆ, ಕಂದಾಯ ಇಲಾಖೆಯಿಂದ ಪಲ್ಲಕ್ಕಿ ಉತ್ಸವ ಸೇವೆ ಪ್ರತೀ ವರ್ಷ ನಡೆಯುತ್ತದೆ. ಇದು 14 ದಿನಗಳ ಕಾಲ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ/ ಕರಗದಲ್ಲಿ ನಡೆಯುವ ಸೇವೆಗಳು! ಈ ಸೇವೆಗಳ ಪೈಕಿ ಜಾತಿ, ಧರ್ಮವನ್ನು ಹೇಗೆ ವಿಂಗಡಿಸುತ್ತೀರಿ ? ವ್ಯಾಪಾರಿ ಸಮುದಾಯ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಜಾತಿ ಎಲ್ಲಿದೆ ?
700 ವರ್ಷಗಳಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ನಡೆಯುತ್ತಿದ್ದ ಐತಿಹಾಸಿಕ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವಕ್ಕೆ ಬಿಜೆಪಿ ಕಪ್ಪು ಚುಕ್ಕೆಯೊಂದನ್ನು ಇಟ್ಟಿದ್ಯಾಕೆ ? ಸಮಿತಿಯಲ್ಲಿ ಮುಸ್ಲಿಮರು ಇರಲಿ, ಇಲ್ಲದಿರಲಿ, 700 ವರ್ಷಗಳಿಂದ ಮುಸ್ಲಿಮರೂ ಸೇರಿಕೊಂಡು ಎಲ್ಲಾ ಧರ್ಮಿಯರು ನಡೆಸುವ ಸಂಭ್ರಮದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ಶಾಂತಿ ಕದಡಿಸಿ ಲಕ್ಷಾಂತರ ಜನರ ಭಾವನೆಗೆ ಘಾಸಿ ಮಾಡಿದ್ದು ಸರಿಯೇ ಎಂಬ ಪ್ರಶ್ನೆಯನ್ನು ಬಿಜೆಪಿಗೆ ಕೇಳಬೇಕಿದೆ.
ರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಹೆಸರು ಇದೆ ಎಂದು ಕೋಮುಪ್ರಚೋದನೆ ನಡೆಸಿದ ಬಿಜೆಪಿ, ತನ್ನ ಸರ್ಕಾರ ಇದ್ದಾಗಲೂ ಅಲ್ಲಿ ಮುಸ್ಲಿಂ ಸದಸ್ಯರನ್ನು ನೇಮಕ ಮಾಡಿರುವುದು ಬೆಳಕಿಗೆ ಬರುತ್ತಿದ್ದಂತೆ, ಪೋಸ್ಟ್ ಡಿಲೀಟ್ ಮಾಡಿದೆ. ಆದರೆ ಹೊಸಕೋಟೆಯಂಥ ಭಾವೈಕ್ಯತೆಯ ಪಟ್ಟಣಕ್ಕೆ ಕೋಮುದ್ವೇಷದ ಬೆಂಕಿ ಹಚ್ಚಲು ಹೊರಟ ಇವರನ್ನು ಕ್ಷಮಿಸಲು ಸಾಧ್ಯವೇ?
ಇದನ್ನೂ ಓದಿ-ಬಿಜೆಪಿ ಅವಧಿಯಲ್ಲೂ ರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಹೆಸರುಗಳು: ಹಿಟ್ ವಿಕೆಟ್ ಆಗಿ ಪೋಸ್ಟ್ ಡಿಲೀಟ್ ಮಾಡಿದ ಕೇಸರಿಪಡೆ