ಬೆಂಗಳೂರು: ಹಲವಾರು ಹೆಣ್ಣುಮಕ್ಕಳ ಅತ್ಯಾಚಾರ ಹಾಗು ಲೈಂಗಿಕ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿಕೊಂಡ ಹೀನ ಆರೋಪ ಎದುರಿಸುತ್ತಿರುವ ಹಾಸನ ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಯಾವಾಗ ಭಾರತಕ್ಕೆ ವಾಪಾಸ್ ಬರುತ್ತಾನೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಕಾಮಕಾಂಡದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಮಾನ ಹತ್ತಿ ಜರ್ಮನಿಗೆ ಪರಾರಿಯಾಗಿದ್ದ ಪ್ರಜ್ವಲ್ ನಂತರ ದುಬೈನಲ್ಲಿದ್ದಾನೆ ಎಂಬ ಮಾಹಿತಿ ಹೊರಗೆ ಬಂದಿತ್ತು. ವಿಚಾರಣೆಗೆ ಹಾಜರಾಗುವಂತೆ SIT ನೀಡಿದ್ದ ನೋಟಿಸ್ ಗೆ ತನ್ನ ವಕೀಲರ ಮೂಲಕ ಉತ್ತರಿಸಿದ್ದ ಪ್ರಜ್ವಲ್ ಒಂದು ವಾರದ ಕಾಲಾವಕಾಶ ಕೋರಿದ್ದ. ವಕೀಲರು ಬರೆದ ಪತ್ರವನ್ನು ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಇಂದಿಗೆ ಆತ ತಾನೇ ಕೇಳಿದ್ದ ಅವಧಿಯೂ ಮುಗಿದಿದ್ದು, ‘ಪ್ರಜ್ವಲ್ ಎಲ್ಲಿದ್ದೀಯಪ್ಪ’ ಎಂಬ ಪ್ರಶ್ನೆ ಉದ್ಭವವಾಗಿದೆ.
ಲೈಂಗಿಕ ಹಗರಣ ಪ್ರಕರಣದಲ್ಲಿ SIT ಗೆ ಬೇಕಾಗಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಬ್ಲೂಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿದ್ದು, ತಲೆಮರೆಸಿಕೊಂಡಿರುವ ಕುರಿತು 196 ದೇಶಗಳಿಗೆ ಇಂಟರ್ ಪೋಲ್ ಮೂಲಕ ಮಾಹಿತಿ ನೀಡಲಾಗಿದೆ.
ಪ್ರಜ್ವಲ್ ಆದಷ್ಟು ಬೇಗನೇ ಭಾರತಕ್ಕೆ ಹಿಂದಿರುಗಿ ವಿಚಾರಣೆ ಎದುರಿಸುವಂತೆ ಆತನ ಕುಟುಂಬಸ್ಥರು ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಇದುವರೆಗೆ ಆತ ಭಾರತಕ್ಕೆ ಬಂದಿಲ್ಲ. ಆತ ಬಂದ ಕೂಡಲೇ ಬಂಧಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ SIT ಸಿಬ್ಬಂದಿ ಕಾದುಕುಳಿತಿದ್ದಾರೆ.
ಈ ನಡುವೆ ಪುತ್ರ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ SIT ಕಸ್ಟಡಿಯಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಮೂರು ದಿನಗಳ SIT ಕಸ್ಟಡಿ ಅವಧಿ ಇಂದು ಮುಕ್ತಾಯವಾಗಲಿದ್ದು, ಆರೋಪಿ ಎಚ್.ಡಿ.ರೇವಣ್ಣ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ರೇವಣ್ಣ ಪರ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ವಾದ ಮಂಡಿಸಲಿದ್ದಾರೆ.