ಸಂಡೂರು (ಬಳ್ಳಾರಿ): ಈ ಬಾರಿಯ ಲೋಕಸಭಾ ಚುನಾವಣೆ ಶೋಷಿತರ ಉಳಿವಿನ, ಸಂವಿದಾನ ಉಳಿಸುವ ಚುನಾವಣೆಯಾಗಿದೆ. ಬಿಜೆಪಿಯವರು ಸಂವಿಧಾನ ತೆಗಿತೀವಿ, ಬದಲಾಯಿಸುತ್ತೇವೆ ಅಂತಾರೆ. ಶ್ರೀರಾಮುಲು ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಪಕ್ಷದಲ್ಲಿದ್ದಾರೆ. ಅಂಬೇಡ್ಕರ್ ಅನುಯಾಯಿ ಎಂದು ರಾಮುಲು ಭಾಷಣ ಮಾಡುತ್ತಾರೆ. ಇದಕ್ಕೆಲ್ಲ ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಏಕೆ ಮಾತಾಡುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 70 ವರ್ಷಗಳಿಂದ ಏನೂ ಆಗೇ ಇಲ್ಲ ಎಂದು ನರೇಂದ್ರ ಮೋದಿ ಸುಳ್ಳು ಹೇಳ್ತಾರೆ. ಕಳೆದ 10 ವರ್ಷದಿಂದ ಮೋದಿ ಸುಳ್ಳು ಹೇಳಿಕೊಂಡೇ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಭಾರತದ ಯಾವುದೇ ಪ್ರಧಾನಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದು ಬರಲಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಯಾರೂ ಪ್ರಶ್ನೆ ಮಾಡಲ್ಲ. ಆದರೆ ಮೋದಿ ರಾತ್ರೋರಾತ್ರಿ ಪಾಕ್ ಗೆ ಹೋಗಿ ಕೇಕ್ ತಿಂದು ಬಂದರು. ರಾಮಮಂದಿರ ನಿರ್ಮಾಣಕ್ಕಾಗಿ ಹಲವರು ಹೋರಾಟ ಮಾಡಿದ್ದಾರೆ. ಶ್ರೀರಾಮಮಂದಿರಕ್ಕಾಗಿ ಮೋದಿ ಯಾವುದೇ ಹೋರಾಟ ಮಾಡಿಲ್ಲ. ಆದರೆ ಹೆಸರು ಮಾತ್ರ ತಮ್ಮದೇ ಇರಬೇಕು ಎಂದು ತಂತ್ರ ಮಾಡಿದರು ಎಂದರು.
ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನ ಇಟ್ಟಿಗೆ ಕಳಿಸಿದ್ದರು. ಆದರೆ ಕಲ್ಲಿನಿಂದ ರಾಮಮಂದಿರ ನಿರ್ಮಿಸಿದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ಮೋದಿ ಈವರೆಗೆ ಲೆಕ್ಕ ಕೊಟ್ಟಿಲ್ಲ. ರಾಮಮಂದಿರಕ್ಕಾಗಿ ಹೋರಾಟ ಮಾಡಿದವರನ್ನು ಮೋದಿ ಮರೆತರು. ರಾಮಾಯಾಣ ಬರೆದ ಮಹರ್ಷಿ ವಾಲ್ಮೀಕಿಯವರನ್ನೇ ಮರೆತರು. ಇದಕ್ಕೆಲ್ಲ ಈ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ಈ ಬಾರಿಯ ಚುನಾವಣೆ ತುಕಾರಾಂ, ಶ್ರೀರಾಮುಲು ನಡುವಿನ ಚುನಾವಣೆಯಲ್ಲ. ಶೋಷಿತರ ಉಳಿವಿನ ಚುನಾವಣೆ. ಶೋಷಿತ ಸಮುದಾಯಗಳು ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಅವರು ವಿನಂತಿಸಿದರು.