ಕಲ್ಬುರ್ಗಿ: ಸೋಲಿನ ಭೀತಿಯಿಂದ ಕಲ್ಬುರ್ಗಿಗೆ ಪದೇ ಪದೇ ಬರುತ್ತಿದ್ದಾರೆ ಎಂಬ ಬಿಜೆಪಿ ಮುಖಂಡರ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನನ್ನೂರು, ನನ್ನ ಭೂಮಿಗೆ ಬರಬಾರದು ಅಂದ್ರೆ ಹೇಗೆ? ಮೋದಿಯವರು ಎಷ್ಟು ಸಾರಿ ಬಂದು ಹೋದ್ರು. ಬಿಜೆಪಿ ನಾಯಕರು ಎಷ್ಟು ಜನ ಬಂದು ಹೋಗಿದ್ದಾರೆ. ಅವರಿಗೂ ಸೋಲಿನ ಭೀತಿ ಇದೆಯೇ ಎಂದು ತಿರುಗೇಟು ನೀಡಿದ್ದಾರೆ.
ನಾನು ಎಲ್ಲಿ ಓಡಾಡಿದ್ದೀನಿ. ಯಾವ ಮೀಟಿಂಗ್ ಮಾಡಿದ್ದೀನಿ ಹೇಳಿ. ಎರಡೇ ಎರಡು ಸಭೆಯಲ್ಲಿ ಭಾಗವಹಿಸಿದೇನೆ. ಇಲ್ಲಿ ನಾನು ಇದೇ ನೆಲದಲ್ಲಿ 53 ವರ್ಷ ಕಳೆದಿದ್ದೇನೆ. ಇಲ್ಲಿಗೆ ಬರಬಾರದಾ? ನನ್ನೂರು, ನನ್ನ ಭೂಮಿ, ನಮ್ಮ ನೀರು. ಇಲ್ಲಿಗೆ ಬರಬಾರದು ಅಂದ್ರೆ ಹೇಗೆ. ಆರ್. ಎಸ್. ಎಸ್ ನವರು ಇಲ್ಲೆ ಠಿಕಾಣಿ ಹೂಡಿದ್ದಾರೆ. ಅದೆಲ್ಲಾ ಬಿಟ್ಟು ನನಗೆ ಯಾಕೆ ಇಲ್ಲಿ ಬಂದಿದ್ದೇನೆ ಎಂದು ಕೇಳಿದರೆ ಏನು ಹೇಳಲಿ ಎಂದು ಅವರು ಪ್ರಶ್ನಿಸಿದರು.
ಶಾಸಕ ಎಚ್ ಡಿ ರೇವಣ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, SIT ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ. ನೊಂದ ಮಹಿಳೆಯರ ಕುಟುಂಬಗಳಿಗೆ ನ್ಯಾಯ ಸಿಗಬೇಕು. ಯಾರು ಇಂತಹ ಕೆಲಸ ಮಾಡ್ತಾರೋ ಅವರಿಗೆ ಬುದ್ದಿ ಬರಬೇಕು ಎಂದು ಹೇಳಿದರು.
ಎಲ್ಲರೂ ದೇಶದ ಕಾನೂನಿಗೆ ಬದ್ಧರಾಗಿರಬೇಕು. ನಾವು ಇದರಲ್ಲಿ ರಾಜಕೀಯ ಮಾಡ್ತಾ ಇಲ್ಲ. ಇದು ಹತ್ತಾರು ವರ್ಷದಿಂದ ನಡೆದಿದೆ ಅಂತಾ ಹೇಳ್ತಿದ್ದಾರೆ. ಇದು ರಾಜಕೀಯವಾಗಿ ಯಾರು ಬಳಸಿಕೊಳ್ಳಬಾರದು. ಪ್ರಜ್ವಲ್ ಬಗ್ಗೆ ನಾನು ಮಾತಾಡಲಾರೆ. ದೇಶದಲ್ಲಿ ಈ ಬಾರಿ ಒಳ್ಳೆಯ ವಾತಾವರಣ ಇದೆ. ಈ ಬಾರಿ ಬಿಜೆಪಿಯವರಿಗೆ ತಡೆ ಹಿಡಿಯಬಹುದು ಅನ್ನೋ ವಾತಾವರಣ ಇದೆ ಎಂದಿದ್ದಾರೆ.