ಕುಮಟಾ: ವೈದ್ಯೆಯೂ ಆಗಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲೇಬೇಕೆಂಬ ಸಂಕಲ್ಪ ಮಾಡಿದ್ದಾರೆ. ಇದನ್ನು ನಮ್ಮ ಪ್ರಣಾಳಿಕೆಯಲ್ಲೂ ಹೇಳಿದ್ದೇವೆ. ಕುಮಟಾದಲ್ಲಿ ಆಸ್ಪತ್ರೆ ಮಾಡೇ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಕುಮಟಾದಲ್ಲಿ ನಡೆದ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿದ ಅವರು, ಮಾರ್ಗರೇಟ್ ಆಳ್ವಾ ನಂತರ ಮತ್ತೊಬ್ಬ ಮಹಿಳೆಯನ್ನು ನಿಮ್ಮ ಕ್ಷೇತ್ರ ಆರಿಸಿ ಕಳಿಸುತ್ತೀರಿ ಎನ್ನುವ ನಂಬಿಕೆ ಇದೆ. ನಿಮ್ಮ ಸಮಸ್ಯೆಗಳನ್ನು ನಾವು ಅರಿತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಜನರ ಬದುಕನ್ನು ಕಾಂಗ್ರೆಸ್ ಹಸನಾಗಿಸಿದೆ ಎಂದು ಬಿಜೆಪಿಗೆ ಮತ ಹಾಕಿದವರಿಗೆ ಇಂದು ತಿಳಿಸಲೇಬೇಕು. ಕಾಂಗ್ರೆಸ್ ನ ಆಚಾರ ವಿಚಾರ ಪ್ರಚಾರ ಮಾಡೋಕೆ ಬಂದಿದ್ದೇವೆ. ನೀವು ಈ ಬಾರಿ ಇತಿಹಾಸ ನಿರ್ಮಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಟ್ಟ ಮಾತನ್ನ ಬಿಜೆಪಿ ಉಳಿಸಿಕೊಂಡಿಲ್ಲ. ಜಾತಿ, ಧರ್ಮ ಒಡೆಯೋ ಕೆಲಸ ಮಾಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ನಾವು ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೇವೆ. ನಾವು ಯಾರೂ ಮೋಸ ಮಾಡಿಲ್ಲ. ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನ ಜಾತಿ ಧರ್ಮದ ಮೇಲೆ ನೀಡಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ನೀಡುತ್ತಿದ್ದೇವೆ. ವರ್ಷಕ್ಕೆ 1 ಲಕ್ಷ ಮಹಿಳೆಯರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.