ಹಾವೇರಿ: ಹಾಸನದಲ್ಲಿ ವಿಕೃತ ಕಾಮಿ ಇದ್ದಾನೆ. 2800 ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಇಂಥವರ ಸಂಗದಲ್ಲಿರುವ ಮಹಾಪ್ರಭುವನ್ನು ಈ ಚುನಾವಣೆಯಲ್ಲಿ ಕೆಳಗಡೆ ಇಳಿಸಬೇಕು. ನಾನು ಯಾವ ಪಕ್ಷದವನು ಅಲ್ಲ. ನಾನು ನಿಮ್ಮ ಪಕ್ಷದವನು. ಯಾವುದೇ ಸರ್ಕಾರ ಇದ್ದರೂ, ನಾವು ವಿರೋಧ ಪಕ್ಷದವರು ಎಂದು ಪ್ರಖ್ಯಾತ ಚಿತ್ರನಟ, ರಂಗಕರ್ಮಿ ಪ್ರಕಾಶ್ ರೈ ಹೇಳಿದ್ದಾರೆ.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಾಸನದ ಕಾಮಕಾಂಡ ಪ್ರಸ್ತಾಪಿಸಿ ಇಂಥ ಜನಪ್ರತಿನಿಧಿಗಳು ನಮಗೆ ಬೇಕೆ ಎಂದು ಪ್ರಶ್ನಿಸಿದರು.
ಆತಂಕವಾದಿಗಳ ಸರ್ಕಾರ ಕೇಂದ್ರದಲ್ಲಿ ಇದೆ. ಉದ್ಯೋಗದ ಗ್ಯಾರಂಟಿ ಇಲ್ಲ. ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ. ಎಲ್ಲಾ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಹಚ್ಚಲಾಗುತ್ತಿದೆ. ಆಗಾಗ್ಗೆ ಬಿಟ್ಟಿ ಭಾಗ್ಯ ಕೊಡುವುದು, ಮುಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ನಾಯಕರು ರಾಜರಂತೆ ಓಡಾಡುತ್ತಿದ್ದಾರೆ. ಈಗಿನ ಮಹಾಪ್ರಭು ಪುಷ್ಪಕ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಮ್ಮನ್ನು ಸ್ಪರ್ಶಿಸದ ವ್ಯಕ್ತಿ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಾರಾ..? ಎಂದು ಅವರು ಪ್ರಶ್ನಿಸಿದರು.
ಉದ್ಯೋಗ ಸೃಷ್ಟಿ ಮಾಡುತ್ತಿದ್ದೀರಾ ಮಹಾಪ್ರಭುಗಳೇ ಎಂದು ಕೇಳಿದರೆ ಧರ್ಮ, ಜಾತಿ, ಮಂದಿರ, ಮಾಂಗಲ್ಯದ ಬಗ್ಗೆ ಮಾತಾಡುತ್ತಿದ್ದಾರೆ. ರೈತರು ತಮ್ಮ ಬೆಳೆಗೆ ಬೆಂಬಲ ಬೆಲೆ ಕೇಳಿದರೆ, ರಸ್ತೆ ಅಗೆದು , ವಾಟರ್ ಗನ್ ನಿಂದ ದಾಳಿ ಮಾಡಿ ತುಕಡೆ ತುಕಡೆ ಗ್ಯಾಂಗ್ ಅಂತಾರೆ. ಈ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಡೆ ಇಳಿಸಬೇಕು ಎಂದು ಅವರು ಕರೆ ನೀಡಿದರು.