24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ: ರೇವಣ್ಣ ಮತ್ತು ಪ್ರಜ್ವಲ್ ಗೆ SIT ನೋಟಿಸ್

Most read

ಬೆಂಗಳೂರು: ನೂರಾರು ಹೆಣ್ಣುಮಕ್ಕಳೊಂದಿಗೆ ನಡೆದಿರುವ ಕಾಮಕಾಂಡದ ಕುರಿತು ತನಿಖೆ ಆರಂಭಿಸಿರುವ ವಿಶೇಷ ತನಿಖಾ ತಂಡ ( SIT) ಇಪ್ಪತ್ನಾಲ್ಕು ಗಂಟೆಗಳೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಸಿಆರ್ ಪಿಸಿ ಸೆಕ್ಷನ್ 41(ಎ) ಅಡಿ ನೋಟಿಸ್ ಜಾರಿ ಮಾಡಿರುವ ಎಸ್ ಐಟಿ, ನೋಟಿಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.

ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಸಂತ್ರಸ್ಥೆಯ ದೂರಿನ ವಿಚಾರಣೆ ಆರಂಭಗೊಂಡಿದ್ದು, ಹಾಸನ ಜಿಲ್ಲೆ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಈ ನಡುವೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆಯರ ಮೇಲೆ ದೌರ್ಜನ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ರಾಜ್ಯ ಮಕ್ಕಳ ಆಯೋಗ ಎಸ್ ಐಟಿ ಮುಖ್ಯಸ್ಥರಿಗೆ ಆಯೋಗ ಪತ್ರ ಬರೆದಿದ್ದು, ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮನವಿ ಮಾಡಿದೆ.

ಪ್ರಜ್ವಲ್ ಕಾಮಕಾಂಡದ ಪ್ರಕರಣದ ತನಿಖೆ ಚುರುಕಾಗಿದ್ದು, ಎಸ್ ಐಟಿ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಮೂರು ತಂಡಗಳು ಪ್ರತ್ಯೇಕವಾಗಿ ವಿಚಾರಣೆಗಳನ್ನು ನಡೆಸುತ್ತಿದೆ. ವಿಶೇಷ ತಂಡಕ್ಕೆ ಸಿಐಡಿಯಿಂದ 18 ಸಿಬ್ಬಂದಿ ನೇಮಕ ಮಾಡಲಾಗಿದೆ.

ಈ ನಡುವೆ ಪ್ರಕರಣದ ಪ್ರಮುಖ ಸಾಕ್ಷಿ ಆಗಲಿರುವ ಪ್ರಜ್ವಲ್ ಕಾರ್ ಡ್ರೈವರ್ ಕಾರ್ತಿಕ್ SIT ಮುಂದೆ ವಿಚಾರಣೆಗೆ ಹಾಜರಾಗಿದ್ದು, ವಿಡಿಯೋ ನನ್ನ ಬಳಿ ಇತ್ತು, ನನ್ನ ಹೊರತಾಗಿ ಇದನ್ನು ಬಿಜೆಪಿ ನಾಯಕ ದೇವರಾಜೇಗೌಡ ಅವರ ಬಳಿ ಮಾತ್ರ ಇತ್ತು. ಇದನ್ನು ಯಾರು ಹರಿಬಿಟ್ಟಿದ್ಯಾರೋ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

More articles

Latest article