ಪ್ರೀತಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಮೇಲ್ಜಾತಿ, ಕೆಳಜಾತಿ ಎಂಬುದು ವಿಷಯವೇ ಆಗದೆ ವಯಸ್ಸಿಗೆ ಬಂದ ಹೆಣ್ಣು ಗಂಡುಗಳು ಪರಸ್ಪರ ಒಪ್ಪಿ ನಿರಾತಂಕವಾಗಿ, ನಿರ್ಭೀತರಾಗಿ ಸಹಜವಾಗಿ ಪ್ರೀತಿಸುವ, ಮದುವೆಯಾಗುವ, ಒಟ್ಟಿಗೆ ಬದುಕುವ ವಾತಾವರಣ ಈ ದೇಶದಲ್ಲಿ ಇದ್ದಿದ್ದರೆ ಪ್ರೀತಿಯ ಹೆಸರಿನಲ್ಲಿ ನೇಹಾ ಎಂಬ ಮುಗ್ಧ ಹೆಣ್ಣುಮಗಳ ಕೊಲೆಯಾಗುತ್ತಿರಲಿಲ್ಲವೇನೋ..!! – MK ಸಾಹೇಬ್ ನಾಗೇಶನಹಳ್ಳಿ
ದೇಶದಲ್ಲಿನ ಕೊಲೆಗಳಿಗೆ ಎಗ್ಗಿಲ್ಲದೆ ಜಾತಿ ಧರ್ಮದ ಹೆಸರನ್ನು ಬಹುಬೇಗ ಬಳಿದು ಬಿಡುತ್ತಾರೆ. ಕೆಲವರಿಗೆ ಅದು ವ್ಯಾಪಾರವಾಗಿದೆ. ಕೆಲವರಿಗೆ ಅದು ಓಟು ಬ್ಯಾಂಕ್ ಆಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯ ಕೊಲೆ ಇಡೀ ಸಮಾಜವೇ ತಲೆತಗ್ಗಿಸಿವಂತದ್ದು.. ಇದನ್ನು ಈಗ ಲವ್ ಜಿಹಾದ್ ಎಂದು ಬಿಂಬಿಸಿ ಕೋಮುವಾದವನ್ನು ಪಸರಿಸಿ ಮತ್ತೆ ಓಟು ಪಡೆಯಲು ದೊಡ್ಡ ಪ್ರಯತ್ನ ನಡೆದಿದೆ.
ಅದೇ ತರಹ ಬೆಂಗಳೂರಿನ 21ವರ್ಷದ ರುಕ್ಸಾನಾಳನ್ನು ನಂಬಿಸಿ ಮದುವೆ ಆಗದೆ ಮಗು ಮಾಡಿ, ಕೊಂದು ಸುಟ್ಟು ಹಾಕಿದ್ದ ಆರೋಪಿ 31 ವರ್ಷದ ಪ್ರದೀಪ್ ಕುಮಾರ್ ನನ್ನು ಪೊಲೀಸರು ಏಪ್ರಿಲ್ 14ರಂದು ಅರೆಸ್ಟ್ ಮಾಡಿದ್ದಾರೆ. ಅಷ್ಟೇ ಯಾಕೆ ಇತ್ತೀಚಿನ ಕೆಲ ತಿಂಗಳ ಹಿಂದೆ ಪ್ರವೀಣ್ ಚೌಗಲೆ ಎಂಬ ವ್ಯಕ್ತಿ ಒಂದೇ ಮನೆಯ ನಾಲ್ಕು ಜನರನ್ನು ಉಡುಪಿಯಲ್ಲಿ ಕೊಂದು ಹಾಕಿದ. ಹಾಗಾದರೆ ಇದು ಯಾವ ಜಿಹಾದ್? ಇವುಗಳನ್ನು ಏನೆಂದು ಕರೆಯಬೇಕು?
ಕೆಲ ವರ್ಷಗಳ ಹಿಂದೆ ಕೇರಳದ ತ್ರಿಶೂರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ನವೀನ್ ಕೆ ರಜಾಕ್ ಮತ್ತು ಜಾನಕಿ ಓಂ ಕುಮಾರ್ ಅವರು ಬೋನಿ ಎಂ ಅವರ ‘ರಾಸ್ಪುಟಿನ್’ ರಾಗಕ್ಕೆ ನೋಡುಗರ ಕಣ್ಣುಗಳು ಕುಕ್ಕುವಂತೆ ಮಾಡಿದ್ದ 30ಸೆಕೆಂಡ್ ನ ನೃತ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೇ ತಡ, ಕೋಮು ಧ್ರುವೀಕರಣದ ಮನಸ್ಸುಗಳು ಒಮ್ಮೆಲೆ ಮುನ್ನಲೆಗೆ ಬಂದು ಇದೊಂದು ಲವ್ ಜಿಹಾದ್ ಎಂದು ಆ ನಿಷ್ಕಲ್ಮಶ ವಿದ್ಯಾರ್ಥಿಗಳ ಧರ್ಮದ ಮೂಲವನ್ನು ಹುಡುಕಿ, ಮಸ್ತಕದಲ್ಲಿ ಲದ್ದಿ ತುಂಬಿದ, ಮೂಳೆ ಇಲ್ಲದ ನಾಲಿಗೆಯಿಂದ ದ್ವೇಷ ಜ್ವಾಲೆಯನ್ನು ಹರಿಬಿಟ್ಟರು.
ಇದನ್ನು ಗಮನಿಸಿದ ಕೂಡಲೆ ನೆನಪಾಗಿದ್ದು ಕೆ.ಪಿ ಪೂರ್ಣ ಚಂದ್ರ ತೇಜಸ್ವಿಯವರ ಚಿದಂಬರ ರಹಸ್ಯ ಪತ್ತೆದಾರಿಯಲ್ಲಿನ ಸಲಿಂ ಮತ್ತು ಕೃಷ್ಣ ಗೌಡನ ಮಗಳಾದ ಜಯಂತಿಯ ಪ್ರೀತಿಗೆ ಕೋಮು ಬಣ್ಣದ ವಿಷ ಬೀಜ ಬಿತ್ತಲು ಹೊರಟಿದ್ದ ಕೆಲ ಆರ್ಚಕರು, ಮುಲ್ಲಾಗಳು, ಗೌಡ್ರು, ರಾಜಕೀಯ ಪುಡಾರಿಗಳು ಇದರಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಸಾಧಿಸಲು ಮುಂದಾಗಿದ್ದೆ ಕೆಸರೂರಿನ ಎಲ್ಲ ಜಟಿಲ ಸಮಸ್ಯೆಗಳ ಕಳೇಬರವಾಗಿತ್ತು.
ಅದರಂತೆ ಇಂದು ಧರ್ಮ ಮತ್ತು ಸಂಸ್ಕೃತಿ ಎಂದು ದೊಡ್ಡದಾಗಿ ಬೊಬ್ಬೆ ಹೊಡೆಯುವವರು ಕೂಡಾ ಇದೇ ಜಾಯಮಾನಕ್ಕೆ ಸೇರಿದವರು. ಕೆಸರೂರಿನ ಯುವ ಕ್ರಾಂತಿಕಾರಿಗಳು ಈ ಎಲ್ಲಾ ರಹಸ್ಯಗಳ ಮೂಲ ತಿಳಿಯುವ ಮೊದಲೇ ರಕ್ತಪಾತ ಸಂಭವಿಸಿ , ಮಕ್ಕಳು ತಬ್ಬಲಿಗಳಾಗಿ, ಅಮಾಯಕ ಬಡ ಮಹಿಳೆಯರು ವಿಧವೆಯರಾಗಿ, ಶೋಷಿತ ವರ್ಗಗಳ ಜನರು ಹೆಣಗಳಾಗಿ ರಸ್ತೆಯಲ್ಲಿ ತಮ್ಮ ಸಣ್ಣ ತನಕ್ಕೆ ಶಿಕ್ಷೆಯೆಂಬಂತೆ ಬಿದ್ದಿದ್ದರು. ಇನ್ನೊಂದೆಡೆ ಜಾತಿ ಧರ್ಮದ ಬಗ್ಗೆ ಬೊಬ್ಬೆ ಹೊಡೆಯುವ ಟೊಳ್ಳು ಧರ್ಮ ರಕ್ಷಕರು ತಮ್ಮ ಲಾಭ ನಷ್ಟದ ಅಂದಾಜು ಕೆಲಸದಲ್ಲಿ ತೊಡಗಿದ್ದರು.
ಇವತ್ತಿನ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ರಕ್ಷಕರಿಗೆ ವಿವೇಕಾನಂದ, ಮೊಹಮದ್, ಯೇಸು ಆದರ್ಶವಾಗಿಲ್ಲ. ಬದಲಿಗೆ ಈ ಸುಳ್ಳು ಪ್ರಚಾರ ಮಾಡುತ್ತ ಜನರ ಬದುಕನ್ನು ಎರಡು ಹಲಿಗೆಯ ಚೂಪಾದ ಕತ್ತಿಯ ಮೇಲೆ ಜೀವನ ಸಾಗಿಸುವಂತೆ ಮಾಡುತ್ತಿರುವ ದ್ವೇಷದ ದುರ್ನಾತ ಬೀರುವ ಕೊಳಕು ರಾಜಕಾರಣಿಗಳು, ಭಕ್ತಿಯ ಹೆಸರಲ್ಲಿ ಮಹಿಳೆಯರ ಮಾನದೊಂದಿಗೆ ಚೆಲ್ಲಾಟ ಆಡುವ ಕಾಮುಕರು ಆದರ್ಶವಾಗುತ್ತಿರುವುದು ಖೇದವೆನಿಸುತ್ತದೆ. ಇವತ್ತಿನ ಯುವ ಪೀಳಿಗೆಯು ಈ ಚಿದಂಬರ ರಹಸ್ಯವನ್ನು ಬೇಗ ಅರಿತು ಕೊಳ್ಳಬೇಕಿದೆ.
ಕೇಂದ್ರದ ಬಿಜೆಪಿ ಸರಕಾರವು ದೇಶದ ಹಲವಾರು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯ ಪ್ರಮುಖ ವಿಷಯಗಳಾಗಿ ಜಾತಿ, ಧರ್ಮ, ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಎಂಬ ಭ್ರಮನಿರಸನ ವಿಚಾರಗಳನ್ನೆ ತಮ್ಮ ಪ್ರಚಾರದ ಮುಖ್ಯ ವಿಷಯಗಳನ್ನಾಗಿಸಿ ಕೊಂಡಿದೆ. ಜನರ ಸಮಸ್ಯೆಗಳಾದ ಬಡತನ, ಹಸಿವು, ನಿರುದ್ಯೋಗ, ಆರೋಗ್ಯ, ಶಿಕ್ಷಣ ಮುಂತಾದ ವಾಸ್ತವ ಅಂಶಗಳನ್ನು ಬಿಟ್ಟು ಈ ಜಿಹಾದ್ ಎಂಬ ಪದವನ್ನು ಹಿಡಿದುಕೊಂಡು ಕೋಮುವಾದಿ ಶಕ್ತಿಗಳು ಬೆನ್ನು ಹತ್ತಿದ್ದಾರೆ. ವಾಸ್ತವವಾಗಿ ಇಸ್ಲಾಂನಲ್ಲಿ ಜಿಹಾದ್ ಎಂದರೆ ಸದುದ್ದೇಶದಿಂದ ಅದಕ್ಕಾಗಿ ಅಕ್ಷರಶಃ ಪ್ರಯತ್ನಿಸುವುದು. ಜಿಹಾದ್ ನಲ್ಲಿನ ಎರಡು ಪ್ರಮುಖವಾದವುಗಳೆಂದರೆ ಜಿಹಾದ್ ಅಲ್-ಅಕ್ಬರ್ ಮತ್ತು ಜಿಹಾದ್ ಅಲ್-ಅಸ್ಗರ್. ಇದರಲ್ಲೂ ಹಲವು ಬಗೆಗಳಿವೆ. ಜಿಹಾದ್ ಅಲ್-ಅಕ್ಬರ್ ಎಂದರೆ ತಮ್ಮೊಳಗಿನ ದುಷ್ಕೃತ್ಯ ಮತ್ತು ಸಮಾಜದಲ್ಲಿನ ದುಷ್ಕೃತ್ಯಗಳಿಗೆ ಅಹಿಂಸಾತ್ಮಕ ಹೋರಾಟ ನಡೆಸುವುದೆಂದು ಅರ್ಥ. ಮುಂದುವರೆದು ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡುವುದು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುವುದು ಹಾಗೂ ಉತ್ತಮ ವಿದ್ಯಾರ್ಥಿಯಾಗಲು, ಉತ್ತಮ ಪಾಲುದಾರನಾಗಿ ಸ್ವಚ್ಚಂದ ವ್ಯವಹಾರ ನಡೆಸಲು ಕೊನೆಗೆ ಕೋಪವನ್ನು ನಿಯಂತ್ರಿಸಲು ಜಿಹಾದ್ ಮಾಡಿ ಎಂದು ಇಸ್ಲಾಂ ಹೇಳುತ್ತದೆ…ಜಿಹಾದ್ ಅಲ್-ಅಸ್ಗರ್ ಅಂದರೆ ಇಸ್ಲಾಂ ಧರ್ಮದ ಅಥವಾ ನೀವು ವಾಸಿಸುವ ದೇಶದ ರಕ್ಷಣೆಗೆ ಸಮಯ ಒದಗಿ ಬಂದರೆ ಜೀವನವನ್ನು ತ್ಯಾಗ ಮಾಡಿ ಎಂದು ಹೇಳುತ್ತೆ. ನೀವಾಗಿ ಬೇರೆ ಧರ್ಮದ ಜನರ ಮೇಲೆ ಅಥವಾ ಬೇರೆ ದೇಶದ ಮೇಲೆ ಜಿಹಾದ್ ಮಾಡಿ ಎಂದು ಇಸ್ಲಾಂ ನಲ್ಲಿ ಎಲ್ಲೂ ಉಲ್ಲೇಖವಿಲ್ಲ.
ವಿಶಾಲಾರ್ಥಲ್ಲಿ ಹೇಳುವುದಾದರೆ, ಆಧುನಿಕತೆಯಲ್ಲಿ ಗಾಂಧೀಜಿ ಮತ್ತು ನೆಲ್ಸನ್ ಮಂಡೇಲರು ಶಾಂತಿ ಮತ್ತು ವರ್ಣಬೇಧ ನೀತಿಯ ವಿರುದ್ಧ ಮಾಡಿದ ಹೋರಾಟವನ್ನು, ಸಮ ಸಮಾಜದ ನಿರ್ಮಾಣಕ್ಕಾಗಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಆಶ್ಫಾಕುಲ್ ಖಾನ್ ರವರು ಮಾಡಿದ ತ್ಯಾಗ ಬಲಿದಾನಗಳನ್ನು ಜಿಹಾದ್ ಎನ್ನಬಹುದು. ಜಿಹಾದ್ ಅಮಾಯಕ ಜನರ ಪ್ರಾಣಹಾನಿ, ಹಾಸ್ತಿಹಾನಿ ಮಾಡುವುದಿಲ್ಲ, ಬದಲಿಗೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕುವೆಂಪು ಸಾರಿದ ವಿಶ್ವ ಮಾನವತೆಯ ಕಡೆಗೆ ಕರೆದುಕೊಂಡು ಹೋದರೆ ಮಾತ್ರ ಅದು ಜಿಹಾದ್ ಆಗುತ್ತೆ ಅನ್ನೋ ಸರಿಯಾದ ಜ್ಞಾನವನ್ನು ವಾಟ್ಸಪ್ ವಿಶ್ವ ವಿದ್ಯಾಲಯದ ಯುವಕರಿಗೆ ತಿಳಿಸುವುದು ಅವಶ್ಯ ಎನಿಸಿತು.
ಲವ್ ಜಿಹಾದ್ ಎಂಬ ಹೆಸರಲ್ಲಿ ಬಿಜೆಪಿ ಸರಕಾರವು ಓಟು ಕೇಳುತ್ತಾ ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ ಬಿಟ್ಟಿದೆ. ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆ ಹಾಕಿದ್ದ ಕೇಂದ್ರ ಸರ್ಕಾರವು ಮಹಿಳೆಯರನ್ನು ಓದಲು ಬಿಡುತ್ತಿಲ್ಲ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಮಹಿಳೆಯರು ಸ್ವಂತ ಆಲೋಚನೆಯ ಮೇಲೆ ಮದುವೆಯಾಗಲು ಸಾಧ್ಯವಿಲ್ಲ. ಸಂವಿಧಾನದ ಆಶಯದಂತೆ ತನ್ನ ಮೂಲಭೂತ ಹಕ್ಕುಗಳನ್ನು ಯಾವ ಧರ್ಮದ ನಾಗರಿಕರು ಕೂಡ ಇವತ್ತು ಅನುಭವಿಸಲು ಕಷ್ಟಸಾಧ್ಯವಾಗಿದೆ..
ಸರಕಾರದ ಶಕ್ತಿಯು ಜನರನ್ನು ಅಜ್ಞಾನಿಗಳಾಗಿ ಮಾಡುವುದರಲ್ಲಿ ಅಡಗಿದೆ ಎಂಬ ಮಾತು ಅಕ್ಷರಶಃ ಸತ್ಯ. ಹಿಂದುಳಿದ ವರ್ಗಗಳ, ಶೋಷಿತ ಸಮುದಾಯಗಳ, ಅಲ್ಪ ಸಂಖ್ಯಾತರನ್ನು ಧರ್ಮ ಯುದ್ಧಕ್ಕೆ ಕಳಿಸಿ ತಮ್ಮ ಮಕ್ಕಳನ್ನು ಆಕ್ಸ್ಫರ್ಢ್, ಕೇಂಬ್ರಿಡ್ಜ್ ಮುಂತಾದ ವಿಶ್ವ ವಿದ್ಯಾಲಯದಲ್ಲಿ ಮೆರೆಯಲು ಬಿಡುವ ಈ ನಾಯಕರು ಹೇಗೆ ಧರ್ಮ ರಕ್ಷಕರು?? ಇವತ್ತಿನ ಯುವಕರು, ವಿದ್ಯಾರ್ಥಿಗಳು ಒಂದನ್ನು ಅರ್ಥ ಮಾಡಿಕೊಳ್ಳ ಬೇಕು- ಜನರನ್ನು ಪ್ರೀತಿಸುವುದೆ ದೇಶ ಪ್ರೇಮವಾಗಿದೆಯೇ ವಿನಃ ರಾಜಕಾರಣಿಗಳನ್ನು ಹಿಂಬಾಲಿಸುವುದಲ್ಲ. ದೇಶದಲ್ಲಿನ ಬಡತನ, ಹಸಿವು, ಆರೋಗ್ಯ, ಶಿಕ್ಷಣ ಈ ಮುಂತಾದ ಜಟಿಲ ಸಮಸ್ಯೆಗಳ ಪರಿಹಾರ ಚಿದಂಬರ ರಹಸ್ಯವಾಗಿದೆ. ಇದನ್ನು ನಾವು ಭೇದಿಸದೆ ಹೋದರೆ ದೇಶದ ಸರ್ವನಾಶಕ್ಕೆ ನಾವೇ ಬುನಾದಿ ಹಾಕಿಕೊಟ್ಟಂತೆ ಆಗುತ್ತೆ.
ಪ್ರೀತಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಮೇಲ್ಜಾತಿ, ಕೆಳಜಾತಿ ಎಂಬುದು ವಿಷಯವೇ ಆಗದೆ ವಯಸ್ಸಿಗೆ ಬಂದ ಹೆಣ್ಣು ಗಂಡುಗಳು ಪರಸ್ಪರ ಒಪ್ಪಿ ನಿರಾತಂಕವಾಗಿ, ನಿರ್ಭೀತರಾಗಿ ಸಹಜವಾಗಿ ಪ್ರೀತಿಸುವ, ಮದುವೆಯಾಗುವ, ಒಟ್ಟಿಗೆ ಬದುಕುವ ವಾತಾವರಣ ಈ ದೇಶದಲ್ಲಿ ಇದ್ದಿದ್ದರೆ ಪ್ರೀತಿಯ ಹೆಸರಿನಲ್ಲಿ ನೇಹಾ ಎಂಬ ಮುಗ್ಧ ಹೆಣ್ಣುಮಗಳ ಕೊಲೆಯಾಗುತ್ತಿರಲಿಲ್ಲವೇನೋ..!! ಇಂಥಹ ಘಟನೆಗಳಿಗೆ ಕೋಮು ಹೆಸರು ಕೊಟ್ಟು ರಾಜ್ಯದ ಸೌಹಾರ್ದ ಕೆಡಿಸುವ ಮೂರ್ಖರ ಮೇಲೆಯೂ ಸರಕಾರ ಕಠಿಣ ಕ್ರಮ ತೆಗೆದು ಕೊಳ್ಳಬೇಕು.
ಕೊಲೆ, ಹಿಂಸೆ, ಅತ್ಯಾಚಾರಗಳು ಯಾಕೆ ಹೆಚ್ಚಾಗುತ್ತಿವೆ ಎಂಬುದರ ಹಿಂದಿನ ಸೈಕಲಾಜಿಕಲ್ ವಸ್ತುನಿಷ್ಠ ಅಧ್ಯಯನ ಮಾಡಿ ಮಾನಸಿಕ ಆರೋಗ್ಯಕ್ಕೆ ಸರಕಾರ ಸಮಾಜ ಒತ್ತು ಕೊಡಬೇಕು .
MK ಸಾಹೇಬ್ ನಾಗೇಶನಹಳ್ಳಿ