ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಪ್ರಚಾರ ಕೊನೆಯಾಗುತ್ತಿದೆ. ಅದಕ್ಕೂ ಮುನ್ನ ರಾಜ್ಯದ ಜನತೆಗೆ ದೊಡ್ಡ ಸಂದೇಶ ಕಳಿಸುವ ಅವಕಾಶ ಬಂದಿದೆ. ಒಬಿಸಿ ನಾಯಕ, ಸಂಘಟನಾ ಚತುರ, ವಿಶ್ವಕರ್ಮ ಸಮುದಾಯದ ಮುಖಂಡ, ಒನ್ ಮ್ಯಾನ್ ಆರ್ಮಿ ಕೆ.ಪಿ ನಂಜುಂಡಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು, ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ನಂಜುಂಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮೊದಲಿನಿಂದಲೂ ನಂಜುಂಡಿಯನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆದಿತ್ತು. ಈ ಚುನಾವಣೆ ಸಂದರ್ಭದಲ್ಲಿ ಅದು ಸಾಧ್ಯವಾಯಿತು. ಅವರು ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸುರ್ಜೆವಾಲಾ ನೇತೃತ್ವದಲ್ಲಿ ಈ ಮಹತ್ವದ ಕೆಲಸ ನಡೆದಿದೆ ಎಂದರು.
ಮೋದಿ ಪಿಎಂ ಆದಾಗ 8 ಸಾವಿರ ರೂ. ಇದ್ದ ಚಿನ್ನದ ಬೆಲೆ ಇಂದು 75 ಸಾವಿರ ರೂ. ಆಗಿದೆ. ಒಂದು ಮಾಂಗಲ್ಯ ಸರ ಮಾಡಲು ನಮ್ಮ ಕೈಯಲ್ಲಿ ಆಗುತ್ತಿಲ್ಲ. ಬಡವರ ಗೋಳು ನೋಡಲು ಆಗದೆ ಬೇಸತ್ತು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎನ್ನುತ್ತಿದ್ದಾರೆ ನಂಜುಂಡಿ. ನನ್ನ ರಾಜಕೀಯ ಅನುಭವದಲ್ಲಿ ಸಿದ್ದರಾಮಯ್ಯ ನಂತರ, ಒಂದು ಸಮಾಜದ ಸಂಘಟನೆ ಮಾಡಿದ ಮತ್ತೊಬ್ಬ ನಾಯಕ ನಂಜುಂಡಿ. ನಂಜುಂಡಿ ಬಳಿ ಬಹಳ ದೊಡ್ಡ ಪ್ರತಿಭೆ ಇದೆ. ನಾನು ಅಧ್ಯಕ್ಷ ಆಗುವುದಕ್ಕೂ ಮೊದಲಿನಿಂದಲೂ ಸಹಾಯ ಮಾಡ್ತಾ ಇದ್ರು. ಖರ್ಗೆ ಅವರ ಸೂಚನೆ ಮೇರೆಗೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯದ ಅನೇಕ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದರು.