ಹಾಸನ: ನನ್ನ ಬಳಿ 2900 ಕ್ಕೂ ಹೆಚ್ಚು ವಿಡಿಯೋಗಳಿವೆ. ತಡೆಯಾಜ್ಞೆ ತೆರವುಗೊಳಿಸಿದರೆ ಎಲ್ ಇಡಿ ಪರದೆ ಹಾಕಿ ತೋರಿಸ್ತೀನಿ ಎಂದು ತೊಡೆತಟ್ಟಿದ್ದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಈಗ ಉಲ್ಟಾ ಹೊಡೆದಿದ್ದು, ಮೊನ್ನೆ ವಿಡಿಯೋಗಳು ಬಿಡುಗಡೆಯಾಗಿರುವುದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಜಿ. ದೇವರಾಜೇಗೌಡ, ತಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಹಸ್ಯ ಪತ್ರವೊಂದನ್ನು ಬರೆದು ಜೆಡಿಎಸ್ ಜೊತೆ ಮೈತ್ರಿಬೇಡ, ತಮ್ಮ ಬಳಿ ಲೈಂಗಿಕ ಹಗರಣದ ವಿಡಿಯೋಗಳು ಇವೆ, ಬಿಡುಗಡೆ ಮಾಡಿದರೆ ಮೈತ್ರಿ ಪಕ್ಷಗಳು ಸೋಲಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ʻರಹಸ್ಯಪತ್ರʼವನ್ನು ತಾವೇ ಮಾಧ್ಯಮಗಳಿಗೆ ಬಹಿರಂಗವಾಗಿ ಬಿಡುಗಡೆ ಮಾಡಿದ್ದರು.
ತಮ್ಮ ಬಳಿ ವಿಡಿಯೋಗಳಿವೆ, ಬೇಕಿದ್ದರೆ ಬಿಜೆಪಿ ವರಿಷ್ಠರಿಗೆ ತೋರಿಸಲು ಸಿದ್ಧ ಎಂದು ಹೇಳಿದ್ದ ದೇವರಾಜೇಗೌಡ, ನಂತರ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದರಿಂದ ವಿಡಿಯೋಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ತಾಕತ್ತಿದ್ದರೆ ತಡೆಯಾಜ್ಞೆ ತೆರವುಗೊಳಿಸಲಿ. ಎಲ್ ಇಡಿ ಸ್ಕ್ರೀನ್ ಹಾಕಿ ವಿಡಿಯೋಗಳನ್ನು ಪ್ರದರ್ಶಿಸುತ್ತೇನೆ ಎಂದು ತೊಡೆತಟ್ಟಿದ್ದರು.
ಮೊನ್ನೆ ವಿಡಿಯೋಗಳು ಬಿಡುಗಡೆಯಾಗುತ್ತಿದ್ದಂತೆ ಜಿ. ದೇವರಾಜೇಗೌಡ ಹೊಸ ವರಸೆ ಪ್ರದರ್ಶಿಸಿದ್ದು, ನಿನ್ನೆ ಪತ್ರಿಕಾಗೋಷ್ಠಿಯೊಂದನ್ನು ಕರೆದು ಕಾಂಗ್ರೆಸ್ ಪಕ್ಷದ ಮುಖಂಡರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಯಾರನ್ನೋ ಗೆಲ್ಲಿಸಲು, ಯಾರನ್ನೋ ಸೋಲಿಸಲು ಹಾಸನದ ಮಾನ ಹರಾಜು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ಹಲವು ಹೆಣ್ಣುಮಕ್ಕಳನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿರುವ ದೃಶ್ಯಗಳಿರುವ ವಿಡಿಯೋಗಳು ಹಾಸನ ಜಿಲ್ಲೆಯಾದ್ಯಂತ ಓಡಾಡುತ್ತಿದ್ದು, ಜಿಲ್ಲೆಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಈ ಕುರಿತು ದೇವರಾಜೇಗೌಡ ಅವರನ್ನು ಕನ್ನಡ ಪ್ಲಾನೆಟ್ ವಿಡಿಯೋ ಸಿಕ್ಕಾಗ ನೀವು ಯಾಕೆ ಪೊಲೀಸ್ ಕಂಪ್ಲೇಂಟ್ ಕೊಡಲಿಲ್ಲ ಎಂದು ಪ್ರಶ್ನಿಸಿದಾಗ, ಅದು ನನ್ನ ಕೆಲಸವಲ್ಲ, ಪಕ್ಷದ ಮರ್ಯಾದೆ ಉಳಿಸುವುದಷ್ಟೆ ನನ್ನ ಕೆಲಸ ಎಂದು ಹೇಳಿಕೊಂಡಿದ್ದರು. ಹೆಣ್ಣುಮಕ್ಕಳ ಮಾನದ ಪ್ರಶ್ನೆ ಇತ್ತಲ್ಲವೇ ಎಂದು ಪ್ರಶ್ನಿಸಿದಾಗ ಅದಕ್ಕೂ ನನಗೂ ಸಂಬಂಧವಿಲ್ಲ. ಆ ಹೆಣ್ಣುಮಕ್ಕಳು ಏನಾದರೂ ಮಾಡಿಕೊಳ್ಳಲಿ ಎಂದು ಉತ್ತರಿಸಿದ್ದರು. ಇದೀಗ ವಿಡಿಯೋಗಳು ಬಿಡುಗಡೆಯಾದ ಹಿನ್ನೆಲೆಯಲ್ಲಿ ಹಾಸನದ ಹೆಣ್ಣುಮಕ್ಕಳ ಮರ್ಯಾದೆ ಹರಾಜಾಗುತ್ತಿದೆ ಎಂದು ದೇವರಾಜೇಗೌಡ ಪ್ರತಿಪಾದಿಸುತಿದ್ದಾರೆ.