ಕಲ್ಬುರ್ಗಿ: ʻಕಾಂಗ್ರೆಸ್ ನವರು ನಿಮ್ಮ ಮಂಗಳಸೂತ್ರವನ್ನೂ ಕಿತ್ತುಕೊಳ್ಳುತ್ತಾರೆʼ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕೀಳು ಅಭಿರುಚಿಯ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಮೋದಿಯವರಿಗೆ ಮಂಗಳ ಸೂತ್ರದ ಬೆಲೆ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಮೋದಿ ಜಾರಿಗೆ ತಂದ ಡೀಮಾನಿಟೈಸೇಷನ್ ನಂಥ ಮಾಸ್ಟರ್ ಸ್ಟ್ರೋಕ್ ಗಳಿಂದ ದೇಶದ ಜನತೆ ಒಡವೆ, ಆಸ್ತಿ ಮಾರಾಟ ಮಾಡುವಂತಾಯಿತು. ನೀವು ಮಂಗಳ ಸೂತ್ರದ ಬಗ್ಗೆ ಹೇಗೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ಕಳೆದ ನಾಲ್ಕು ದಶಕಗಳಲ್ಲಿ ಕಂಡುಕೇಳರಿಯದಷ್ಟು ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಖಾಲಿ ಚೊಂಬನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದೆ. ರಾಜ್ಯ ಬಿಜೆಪಿ ನಾಯಕರು ಭಂಡರಾಗಿಹೋಗಿದ್ದಾರೆ. ಸುಪ್ರೀಂ ಕೋರ್ಟ್ ನಿಂದ ಹೇಳಿಸಿಕೊಂಡ ಮೇಲೆ ಕೇಂದ್ರ ಸರ್ಕಾರ ಬರಪರಿಹಾರ ಕೊಡುವುದಾಗಿ ಹೇಳುತ್ತದೆ. ಪ್ರಧಾನಿ ಮೋದಿ ರಾಜ್ಯದ ಹಿತ ಕಾಪಾಡಿದ್ದಾರೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡುತ್ತದೆ. ಇದು ಭಂಡತನವಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಮುಸ್ಲಿಂ, ಶ್ರೀರಾಮ್, ಮೊಗಲ್, ಪಾಕಿಸ್ತಾನ, ಲವ್ ಜಿಹಾದ್ ಇಂಥ ಎಂಟು ಹತ್ತು ಪದ ಬಿಟ್ಟರೆ ಮಾತಾಡಲು ಏನೂ ಇರುವುದಿಲ್ಲ. ಈ ಪದಗಳನ್ನು ತೆಗೆದುಬಿಟ್ಟರೆ ಇವರಿಂದ ಮಾತಾಡಲು ಸಾಧ್ಯವೇ ಇಲ್ಲ ಎಂದು ಪ್ರಿಯಾಂಕ್ ಲೇವಡಿ ಮಾಡಿದರು.
ಮೋದಿ ಅವರು ಮಂಗಳ ಸೂತ್ರವನ್ನು ಬಿಡುತ್ತಿಲ್ಲ. ಮೋದಿ ಸಹ ಕರಿಮಣಿ ಮಾಲೀಕರಾಗಿದ್ದಾರಲ್ಲ. ಮೋದಿಗೆ ಮಂಗಳ ಸೂತ್ರದ ಬೆಲೆ ಗೊತ್ತಾ..? ದೇಶಕ್ಕಾಗಿ ಸೋನಿಯಾ ಮಂಗಳಸೂತ್ರ ಬಲಿ ಕೊಟ್ಟರು ಎಂದು ಅವರು ಹೇಳಿದರು.