ಮಂಗಳ ಸೂತ್ರದ ಬಗ್ಗೆ ಮಾತಾಡಿ ನೆಟ್ಟಿಗರಿಂದ ಬೈಸಿಕೊಂಡ ಚಕ್ರವರ್ತಿ ಸೂಲಿಬೆಲೆ

Most read

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕುಚೇಷ್ಟೆಯ ಪೋಸ್ಟ್‌ ಗಳನ್ನು ಹಾಕಿ ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಳ್ಳುವುದು ಬಿಜೆಪಿ ಬೆಂಬಲಿಗ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯವರಿಗೆ ಅಭ್ಯಾಸವಾಗಿ ಹೋಗಿದೆ. ಇದೀಗ ಮಂಗಳ ಸೂತ್ರ (ತಾಳಿ) ಕುರಿತು ಅವರು ಹಾಕಿರುವ ಪೋಸ್ಟ್‌ ಒಂದು ಜನರ ಕೋಪಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ನಿನ್ನೆ ಕರ್ನಾಟಕಕ್ಕೆ ಆಗಮಿಸಿದ್ದ ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ದೇಶದ ಹೆಣ್ಣುಮಕ್ಕಳಿಂದ ಮಂಗಳ ಸೂತ್ರ (ತಾಳಿ) ಕಿತ್ತುಕೊಳ್ಳಲು ಕಾಂಗ್ರೆಸ್‌ ಪಕ್ಷ ಹವಣಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು. ಯುದ್ಧ ಸಂದರ್ಭದಲ್ಲಿ ಇಂದಿರಾಗಾಂಧಿ ತಮ್ಮ ಎಲ್ಲ ಒಡವೆಗಳನ್ನು ದೇಶದ ಖಜಾನೆ ಅರ್ಪಿಸಿದ್ದರು. ನನ್ನ ತಾಯಿ ಸೋನಿಯಾಗಾಂಧಿ ದೇಶಕ್ಕಾಗಿ ಮಂಗಳ ಸೂತ್ರವನ್ನೇ ಕಳೆದುಕೊಂಡರು ಎಂದು ಪ್ರಿಯಾಂಕ ಗಾಂಧಿ ಹೇಳಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಫೊಟೋ ಲಗತ್ತಿಸಿ, ಮಂಗಳ ಸೂತ್ರ ಹಾಕೇ ಇರಲಿಲ್ಲ ಇನ್ನು ತ್ಯಾಗದ ಮಾತು ಎಲ್ಲಿಂದ ಬಂತವ್ವಾ ಪ್ರಿಯಾಂಕ ಗಾಂಧಿ? ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದರು.

ಈ ಕುಚೋದ್ಯದ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೀಳುಮಟ್ಟದ ರಾಜಕೀಯ ಮಾಡೋದನ್ನು ಬಿಡಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೊಬ್ಬರ ಮಂಗಳ ಸೂತ್ರದ ಬಗ್ಗೆ ಮಾತನಾಡುವ ಮೊದಲು ಆ ಪವಿತ್ರ ಬಂಧದ ಬಗ್ಗೆ ಮಾತನಾಡುವ ಅರ್ಹತೆಯೂ ನಿಮಗೆ ಇಲ್ವೇ? ಮೊದಲು ಮದುವೆ ಮಾಡಿಕೊಳ್ಳಿ, ಕುಟುಂಬದ ಜವಾಬ್ದಾರಿಯ ವಹಿಸಿಕೊಳ್ಳಿ ಸಾಂಸಾರಿಕ ಮೌಲ್ಯ ತಿಳಿದುಕೊಳ್ಳಿ ನಂತರ ಆ ಪವಿತ್ರ ಬಾಂಧವ್ಯದ ಬಗ್ಗೆ ಗೊತ್ತಾಗುತ್ತದೆ ಇಲ್ಲಾಂದ್ರೆ ಎಷ್ಟೇ ನೀವು ಹೇಳಿದರೂ ಪುಸ್ತಕದ ಬದನೇಕಾಯಿ ತರಹವೇ ಇರುತ್ತೆ ಎಂದು ಸುರೇಶ್‌ ರಾವ್‌ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಸುಚಿ ಎಸ್.‌ಎ ಪ್ರತಿಕ್ರಿಯೆ ನೀಡಿದ್ದು, ಹೆಂಗಸರ ಕುತ್ತಿಗೆ ನೋಡುವ ಚಪಲ ಬಿಡಿ. ನಿಮ್ಮ ಗುಜರಾತಿ ಕಸಿನ್ ಅಕ್ಕ ಹೇಳಲಿಲ್ಲವೇ – ಎಲ್ಲ ಕಡೆನೂ ಹೆಂಗಸರು ಮಂಗಳಸೂತ್ರ ಹಾಕೊಳ್ಳೋದಿಲ್ಲ ಅಂತ ಎಂದು ಪಾಠ ಹೇಳಿದ್ದಾರೆ.

ಮಂಗಳಸೂತ್ರ ಅಂದರೆ ಜಶೋದಾ ಬೇನ್ ಕುತ್ತಿಗೆಯಲ್ಲಿರುವ ಸರದ ತರಹ ಒಂದು ಸರ ಮಾತ್ರ ಅಂತ ತಿಳ್ಕೊಂಡಿಯಾ ಬೆಪ್ಪು ತಕ್ಕಡಿ ? ಎಂದು ಅಬ್ದುಲ್ಲಾ ಮಾದುಮೂಲೆ ಪ್ರಶ್ನಿಸಿದ್ದಾರೆ.

ನಮ್ಮ ದೇಶ ಭಾರತದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ, ಗೌರವ ಇದೆ. ಅದು ನಿಮಗೂ ಗೊತ್ತಿದೆ. ಈ ರೀತಿ ಅವಮಾನಿಸುವುದು ಸರಿನಾ, ಇದುವೇನಾ ಸಂಸ್ಕೃತಿ, ಇದುವೇನಾ ಹಿರಿಯರು ಕಲಿಸಿದ್ದು. ರಾಜಕೀಯದ ನಡುವೆ ಪವಿತ್ರವಾದ ಮಂಗಳಸೂತ್ರದ ವಿಷಯವನ್ನು ತರಬೇಡಿ ಎಂದು ಪ್ರಭಾಕರ್‌ ಎಂಬುವವರು ತಾಕೀತು ಮಾಡಿದ್ದಾರೆ.

ಮಂಗಳಸೂತ್ರ ಹಾಕಿದವನು ಕಿಸಿಯೋಕೆ ಆಗದೆ ಹೆಂಡತಿಯನ್ನು ನಡುನೀರಲ್ಲಿ ಬಿಟ್ಟು ಹೋಗಿ ಮಂಗಳಸೂತ್ರದ ಬಗ್ಗೆ ಮಾತನಾಡೋದು ಕಾಮಿಡಿ ಅನಿಸಲ್ವ ಎಂದು ಮಂಜು ಮಧುಗಿರಿ ಪ್ರಶ್ನಿಸಿದ್ದಾರೆ.

ಅಯ್ಯೋ ಧಡ್ದೇ, ರೀಜನಿಂಗೇ ಇಲ್ವಲ್ಲಾ ಹಿಂದಿ ಅರ್ಥ ಆಗಲಿಲ್ವ? ಅಥ್ವಾ, ನಿಂ ನಾಗ್ಪೂರ್ ಸಾಲಿ ಇದ್ಯೆ ಸೆನ್ಸ್ ಆಫ್ ಹ್ಯೂಮರನ್ನೇ ಕೊಂದಾಕಿ ಜಡತ್ವಕ್ಕೊಳಿಸಿರುತ್ತೋ? ಸೋನಿಯಾ ಗಾಂಧಿಯ ಮಂಗಳ ಸೂತ್ರ ಅಂದ್ರೆ ಭೌತಿಕ ಬಂಗಾರ ಅಲ್ಲ. ಬಂಗಾರಕ್ಕಿಂತಲೂ ಹೆಚ್ಚು ಪ್ರೀತಿಪಾತ್ರ ಆದ ರಾಜೀವ್ ಗಾಂಧಿ. ಈ ಮಂಗಳ ಸೂತ್ರ ದೇಶಕ್ಕಾಗಿ ಬಲಿದಾನ ಆಯ್ತು ಅಂತ ಎಂದು ಪಾಶಾ ಮೂಲಿಮನಿ ಬರೆದಿದ್ದಾರೆ.

More articles

Latest article