ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಸೋಲಿಸಿ‌

Most read

ಲೋಕಸಭೆಯಲ್ಲಿ ಐದೈದು ವರ್ಷ ಸುಮ್ಮನೆ ಕುಳಿತು ಬಂದ, ಅಗತ್ಯ ಬಿದ್ದಾಗಲೆಲ್ಲ ಮೋದಿ ಜಪ ನಾಮಸ್ಮರಣೆ ಮಾಡುತ್ತ ಜೈಕಾರ ಹಾಕುತ್ತ ಕರ್ನಾಟಕಕ್ಕೆ ಏನೂ ಮಾಡದ ದಂಡಪಿಂಡಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ತಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೆ ಇವರ ಬಗೆಗೆ ಕರುಣೆ ತೋರಿದರೆ ಮುಂದೆ ನಮ್ಮ ಪಾಲಿಗೆ ಪಶ್ಚಾತ್ತಾಪ ಪಡುವುದು ಮಾತ್ರವಲ್ಲ ಸರ್ವನಾಶವೇ ಸಂಭವಿಸುವುದು ನಿಶ್ಚಿತ- ಡಾ. ಬೈರಮಂಗಲ ರಾಮೇಗೌಡ

ಈ ಬಾರಿ ಏನಾದರೂ ಮಾಡಿ ಬಿಜೆಪಿಯನ್ನು ಸೋಲಿಸಿ, ಹತ್ತು ವರ್ಷಗಳ ನರೇಂದ್ರ ಮೋದಿ ಆಡಳಿತಕ್ಕೆ ಮುಕ್ತಿ ದೊರಕಿಸಬೇಕೆಂದು ಸಂಕಲ್ಪಿಸಿ ಛಲದಿಂದ ಹೋರಾಟಕ್ಕಿಳಿದಿರುವ ವಿವಿಧ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಒಕ್ಕೂಟವಾದ `ಇಂಡಿಯಾ’ದ ಘೋಷಣೆ ಮಾತ್ರವಲ್ಲ ನಿಜವಾದ ದೇಶಭಕ್ತರು, ಪ್ರಜಾಪ್ರಭುತ್ವವಾದಿಗಳು, ಪ್ರಜ್ಞಾವಂತರು, ದೇಶ ಅಪಾಯದ ಸುಳಿಯತ್ತ ಸಾಗುತ್ತಿರುವುದನ್ನು ಕಂಡು ಆತಂಕ ಪಟ್ಟುಕೊಂಡವರು ತಮ್ಮ ಮಾತು-ಬರಹಗಳಲ್ಲಿ ಮತಬಾಂಧವರಿಗೆ ಕೊಡುತ್ತಿರುವ ಕರೆಯೂ ಆಗಿದೆ. ಲೋಕಸಭಾ ಚುನಾವಣೆಗಳು ಅತಿ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಹತ್ತು ವರ್ಷಗಳ ಹಿಂದೆ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿಕೊಂಡು ಜನರನ್ನು ಮರುಳು ಗೊಳಿಸುವುದಕ್ಕಾಗಿಯೇ ಸಿದ್ಧಪಡಿಸಲಾಗಿದ್ದ ಆಶ್ವಾಸನೆಗಳ ಮಳೆಯನ್ನು ಮೋಡಿಹಾಕುವ ವರಸೆ ಮಾತುಗಳಲ್ಲಿ ಸುರಿಸಿದ ಹಾಗೂ ಐದು ವರ್ಷಗಳ ಹಿಂದೆ ಮತ್ತೊಂದು ಅವಧಿಗೆ ಮೋದಿ ಎಂದು ಉದ್ಘೋಷಿಸಿಕೊಂಡು ಪ್ರಧಾನಿಯಾಗಿ ಮುಂದುವರಿದು ಈಗ ಮೂರನೇ ಅವಧಿಗೆ ಪಟ್ಟಗಿಟ್ಟಿಸಿಕೊಂಡ ಮೇಲೆ ಎರಡು ಅವಧಿಗಳಲ್ಲಿ ಮಾಡಲಾಗದ ಎಲ್ಲವನ್ನೂ ಮಾಡಿ ಮುಗಿಸಬೇಕೆನ್ನುವ ಲೆಕ್ಕಾಚಾರ ಹಾಕಿಕೊಂಡಿರುವ ಮೋದಿ ಹಿಂದಿನ ಎರಡೂ ಅವಧಿಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತಾಡುವಾಗ ಸಿಡಿಲಬ್ಬರದ ಧ್ವನಿಯಲ್ಲಿ ಕೊಟ್ಟಿದ್ದ ಆಶ್ವಾಸನೆ ಮತ್ತು ಭರವಸೆಗಳೇನು? ಪಕ್ಷದಿಂದ ಬಿಡುಗಡೆ ಮಾಡಲಾಗಿದ್ದ ಪ್ರಣಾಳಿಕೆಗಳೇನು? ಅವುಗಳಲ್ಲಿ ಕೆಲವನ್ನಾದರೂ ಈಡೇರಿಸುವುದಿರಲಿ, ಅತ್ತ ಗಮನವಾದರೂ ಹೋಗಿದೆಯಾ ಎಂದು ಒಂದು ಸಾರಿ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು.

ಈ ಬಗ್ಗೆ ನನ್ನ ವಿಚಾರಗಳನ್ನು ಚರ್ಚೆಗೊಳಪಡಿಸುವ ಮುನ್ನ ಮೋದಿ ಪ್ರಧಾನಮಂತ್ರಿಯಾಗಿದ್ದ ಹತ್ತು ವರ್ಷಗಳಲ್ಲಿ ಆಗಿರುವ ಉದ್ಧಾರದ ಕೆಲಸಗಳಿಗಿಂತ ಹೆಚ್ಚಾಗಿ ಸ್ವಾತಂತ್ರ್ಯ-ಸಮಾನತೆ-ಸೋದರತ್ವ ತಳಹದಿಯ ಮೇಲೆ ನಿಂತಿದ್ದ ಪ್ರಜಾಪ್ರಭುತ್ವದ ಸೊಂಟ ಮುರಿಯುವ ಕೆಲಸವನ್ನು ವ್ಯವಸ್ಥಿತವಾಗಿ ಅಘೋಷಿತ ಕಾರ್ಯಸೂಚಿ ಎಂಬಂತೆ ಮಾಡಿ ಪ್ರಧಾನಮಂತ್ರಿಯನ್ನು ಪ್ರಶ್ನಾತೀತ ನಾಯಕ ಎಂಬಂತೆ ಬಿಂಬಿಸುತ್ತಿರುವುದರ ಘೋರ ಪರಿಣಾಮ ಮುಂದಿನ ದಿನಗಳಲ್ಲಿ ಹೇಗೆ ಆಗಬಹುದು ಎಂದು ಊಹಿಸಿ, ಮತದಾರರನ್ನು ಜಾಗೃತರಾಗಿಸುವ ಉದ್ದೇಶದಿಂದ ಸಮಾನ ಚಿಂತನೆಯ ಹಲವು ಗೆಳೆಯರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಯಾಕೆ ಓಟು ಹಾಕಬಾರದು ಎನ್ನುವುದನ್ನು ಕುರಿತಂತೆ ಸಿದ್ಧಪಡಿಸಲಾಗಿರುವ ಮೂರು ನಿಮಿಷಗಳ ವೀಡಿಯೋವನ್ನು `ಬಂಡಾಯದ ಗೆಳೆಯರ ಬಳಗ’ ಎನ್ನುವ ವಾಟ್ಸಾಪ್ ಗುಂಪಿನಲ್ಲಿ ತೇಲಿಬಿಟ್ಟರು. ಅದರೊಂದಿಗೆ ಸಹಮತ ಹೊಂದಿರುವುದರಿಂದ ನಾನು ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ

ಬಿಜೆಪಿಗೆ ಯಾಕೆ ಓಟು ಹಾಕಬಾರದು ಎನ್ನುವುದಕ್ಕೆ ಕಾರಣಗಳು: “ಅವರು ರಾಜಕೀಯ ವ್ಯವಸ್ಥೆಯನ್ನು ಹಾಳು ಮಾಡಿದರು, ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡಿದರು, ಮಾಧ್ಯಮ ವ್ಯವಸ್ಥೆ, ವರ್ಗಾವಣೆ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ಸರ್ಕಾರಿ ಸಂಸ್ಥೆಗಳನ್ನು, ಶೈಕ್ಷಣಿಕ ವ್ಯವಸ್ಥೆಯನ್ನು, ಆರ್ಥಿಕ ವ್ಯವಸ್ಥೆ, ಧಾರ್ಮಿಕ ಸೌಹಾರ್ದತೆ ಹಾಳು ಮಾಡಿದರು. ಅನ್ನ ಬೆಳೆಯುವ ರೈತರನ್ನು ಬೀದಿಯಲ್ಲಿ ನಿಲ್ಲಿಸಿದರು, ಕಾರ್ಮಿಕರನ್ನು, ಅಂಗನವಾಡಿ ಕಾರ್ಯಕರ್ತೆಯರನ್ನು, ಆರೋಗ್ಯ ಕಾರ್ಯಕರ್ತೆಯರನ್ನು, ಸಾರಿಗೆ ನೌಕರರನ್ನು ಬೀದಿಯಲ್ಲಿ ನಿಲ್ಲಿಸಿದರು. ಬಡವರಿಗೆ ಉಚಿತ ಪಡಿತರ ನಿಲ್ಲಿಸಿದರು, ಅಡುಗೆ ಅನಿಲದ ಬೆಲೆ ಹೆಚ್ಚಿಸಿದರು, ರೈತರ ಸಾಲ ಮನ್ನಾ ನಿಲ್ಲಿಸಿದರು, ಉದ್ಯೋಗ ಸೃಷ್ಟಿ ನಿಲ್ಲಿಸಿದರು, ದಲಿತ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ನಿಲ್ಲಿಸಿದರು. ಮುಸಲ್ಮಾನರ ಮೀಸಲಾತಿ ತೆಗೆದುಹಾಕಿದರು, ಸಣ್ಣಪುಟ್ಟ ಕೈಗಾರಿಕೆಗಳನ್ನು ಮುಚ್ಚಿದರು, ಜಿಎಸ್‍ಟಿ ಜಾಸ್ತಿ ಮಾಡಿ ಜನರನ್ನು ದೋಚಿದರು, ಹೋಟೆಲಿನಲ್ಲಿ ತಿನ್ನುವ ಅನ್ನಕ್ಕೂ ಜಿಎಸ್‍ಟಿ ಹಾಕಿದರು, ಬಡವರ ಆರೋಗ್ಯ ವಿಮೆಯ ಮೇಲೂ ಜಿಎಸ್‍ಟಿ ಹಾಕಿದರು, ಹೆಣ್ಣುಮಕ್ಕಳ ಪ್ಯಾಡ್‍ಗೂ ಜಿಎಸ್‍ಟಿ ಹಾಕಿದರು, ಬಡವರ ಉಳಿತಾಯದ ಹಣಕ್ಕೂ ಜಿಎಸ್‍ಟಿ ಹಾಕಿದರು, ಎಟಿಎಂನಲ್ಲಿ ಹಣ ತೆಗೆದುಕೊಳ್ಳುವುದಕ್ಕೂ ದಂಡ ವಿಧಿಸಿದರು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದಕ್ಕೆ ದಂಡ ವಿಧಿಸಿದರು. ಪುಸ್ತಕ ಪೆನ್ನು ಹಿಡಿಯುವ ವಿದ್ಯಾರ್ಥಿಗಳ ಕೈಗೆ ದೊಣ್ಣೆ, ತ್ರಿಶೂಲ, ಬಂದೂಕು ಕೊಟ್ಟು ವಿದ್ಯಾರ್ಥಿಗಳ ಜೀವನ ಹಾಳು ಮಾಡಿದರು. ಹಲಾಲ್ ಜಟ್ಕಾಕಟ್ ಆಜಾನ್ ಭಜನೆ ಗೋರಕ್ಷಣೆ ಅಂತೆಲ್ಲ ನಾಡಿನ ಸುವ್ಯವಸ್ಥೆಯನ್ನು ಹಾಳು ಮಾಡಿದರು. ವಾಹನಗಳ ವಿಮೆ ದರ ಹೆಚ್ಚಿಸಿದರು. ಟೋಲ್ ದರ ಹೆಚ್ಚಿಸಿದರು, ದನಕರುಗಳ ಮೇವಿನ ಬೆಲೆ ಹೆಚ್ಚಿಸಿದರು, ಪೆಟ್ರೋಲ್, ಜೀವರಕ್ಷಕ ಔಷಧಿಗಳ ಬೆಲೆ ಹೆಚ್ಚಿಸಿದರು. ಅಗತ್ಯ ವಸ್ತುಗಳ ಬೆಲೆಯನ್ನು ಮೇಲಿಂದ ಮೇಲೆ ಏರಿಸಿ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡಿದರು. ಸಮಾಜದ ಮೇಲ್ವರ್ಗದವರಿಗೆ ಹೆಚ್ಚು ಮೀಸಲಾತಿ ತಂದರು. ಊರು ಕೇರಿ ರಸ್ತೆಗಳ ಹೆಸರು ಬದಲಾವಣೆ ಮಾಡಿದರು. ಧರ್ಮ ರಕ್ಷಣೆಯ ಹೆಸರಿನಲ್ಲಿ ಗಲಭೆ ಮಾಡುವ ಪುಡಿ ರೌಡಿಗಳಿಗೆ ಕಾನೂನಿನ ರಕ್ಷಣೆ ನೀಡಿದರು. ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ರಕ್ಷಣೆ ಕೊಟ್ಟರು. ರೌಡಿಶೀಟರ್‌ ಗಳಿಗೆ ಪಕ್ಷದ ಸದಸ್ಯತ್ವ ಕೊಟ್ಟರು, ಪಿಎಸ್‍ಐ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಮಾಡಿದರು, ಮತದಾರರ ಪಟ್ಟಿಯಿಂದ ಹಲವರ ಹೆಸರು ಕೈಬಿಟ್ಟರು, ಕಳಪೆ ಕಾಮಗಾರಿ ಮಾಡಿಸಿ ಶೇ.40 ಕಮಿಷನ್ ಬಾಚಿಕೊಂಡರು. ಕನ್ನಡ ಹೋರಾಟಗಾರರ ಮೇಲೆ ಮೊಕದ್ದಮೆ ಹೂಡಿದರು. ಕನ್ನಡದ ಬಾವುಟಕ್ಕೆ ಅವಮಾನ ಮಾಡಿದರು. ಕನ್ನಡಿಗರು ಕಟ್ಟಿದ ಸಂಸ್ಥೆಗಳನ್ನು ಮಾರಾಟ ಮಾಡಿದರು, ಕನ್ನಡಿಗರ ಉದ್ಯೋಗ ಅನ್ಯರ ಪಾಲು ಮಾಡಿದರು, ಕನ್ನಡಿಗರ ಉಸಿರು ಕಟ್ಟುವಂತೆ ಮಾಡಿದರು, ರಾಜ್ಯವನ್ನು ಪಾತಾಳಕ್ಕೆ ತಳ್ಳಿದರು, ಕರ್ನಾಟಕವನ್ನು ಸರ್ವನಾಶದತ್ತ ಕೊಂಡೊಯ್ದರು’’

ಈ ಬಗ್ಗೆ ನಾವು ನೀವು ಎಲ್ಲ ಆಲೋಚಿಸಬೇಕಾದ ವಿವೇಚಿಸ ಬೇಕಾದ ಮುಗ್ಧರನ್ನು ಎಚ್ಚರಿಸಿ, ಲೋಕಸಭೆಯಲ್ಲಿ ಐದೈದು ವರ್ಷ ಸುಮ್ಮನೆ ಕುಳಿತು ಬಂದ, ಅಗತ್ಯ ಬಿದ್ದಾಗಲೆಲ್ಲ ಮೋದಿ ಜಪ ನಾಮಸ್ಮರಣೆ ಮಾಡುತ್ತ ಜೈಕಾರ ಹಾಕುತ್ತ ಕರ್ನಾಟಕಕ್ಕೆ ಏನೂ ಮಾಡದ ದಂಡಪಿಂಡಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ತಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೆ ಇವರ ಬಗೆಗೆ ಕರುಣೆ ತೋರಿದರೆ ಮುಂದೆ ನಮ್ಮ ಪಾಲಿಗೆ ಪಶ್ಚಾತ್ತಾಪ ಪಡುವುದು ಮಾತ್ರವಲ್ಲ ಸರ್ವನಾಶವೇ ಸಂಭವಿಸುವುದು ನಿಶ್ಚಿತ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ಸೇರಿದ್ದ “ಜಾಗೃತ ನಾಗರಿಕರು ಕರ್ನಾಟಕ’’ ಸಂಘಟನೆಯ ಸದಸ್ಯರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ವಿವೇಚನೆಯಿಂದ ಮತ ಚಲಾಯಿಸಬೇಕು, ಕೋಮುವಾದಿಗಳನ್ನು ಸೋಲಿಸಬೇಕು ಎಂದು ಮನವಿ ಮಾಡಿಕೊಂಡರು. ಕೆ. ಮರುಳಸಿದ್ದಪ್ಪ, ಜಿ. ರಾಮಕೃಷ್ಣ, ಕೆ.ಎಸ್. ವಿಮಲಾ ಅವರ ಮಾತುಗಳ ಸಾರಾಂಶ ಎಂದರೆ – ದ್ವೇಷ ರಾಜಕಾರಣ ಮೆರೆಯುತ್ತಿರುವ ಈ ಹೊತ್ತಿನಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿವೆ. ಬಹುತ್ವ ಭಾರತದ ಸೌಹಾರ್ದಕ್ಕೆ ಧಕ್ಕೆ ಬಂದಿದೆ. ಧರ್ಮ, ಜಾತಿ, ಭಾಷೆಗಳ ಹೆಸರಿನಲ್ಲಿ ಸಮಾಜವನ್ನು ಒಡೆಯಲಾಗುತ್ತಿದೆ. ಬಡವರಿಗೆ ಸೌಲಭ್ಯ ಒದಗಿಸುವುದನ್ನೇ ಪ್ರಧಾನಿ ಮೋದಿ ಗೇಲಿ ಮಾಡಿದ್ದರು. ಕೇಂದ್ರದ ವಶದಲ್ಲಿರುವ ಗೋದಾಮುಗಳಲ್ಲಿ ದವಸ ಧಾನ್ಯ ಕೊಳೆಯುತ್ತಿದ್ದಾಗಲೂ ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಅಕ್ಕಿ ಖರೀದಿಗೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲಿಲ್ಲ, ಇಂಥ ಅನ್ನ ಕಂಟಕರನ್ನು ತಿರಸ್ಕರಿಸಬೇಕು. ನಮ್ಮ ರಾಜ್ಯದ ತೆರಿಗೆ ಪಾಲು ನಮಗೆ ಬರಬೇಕು, ಜಿದ್ದಿನ ರಾಜಕಾರಣದಲ್ಲಿ ನಮ್ಮ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ನಿಲ್ಲಬೇಕು. ದೇಶದ ರೈತರ ಬೆನ್ನುಮೂಳೆ ಮುರಿಯುವ ಕರಾಳ ಕೃಷಿ ಕಾನೂನನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ ರೈತರ ಮೇಲೆ ದಬ್ಬಾಳಿಕೆ ದೌರ್ಜನ್ಯ ನಡೆಸಲಾಯಿತು. ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಿಗೆ ವಿದ್ಯೆ ಕೊಡಿ ಎಂದೆಲ್ಲ ಘೋಷಿಸಿ ಭಾಷಣ ಮಾಡಿದವರು ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದಾಗ, ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿಯ ಸಂಸದರಿಂದಲೇ ಅತ್ಯಾಚಾರದ ಆರೋಪ ಕೇಳಿಬಂದಾಗ ಅವರನ್ನು ರಕ್ಷಿಸುವ ಪ್ರಯತ್ನ ಮಾಡದೆ, ಸಾಂತ್ವನ ಹೇಳದೆ ಅಸಹ್ಯ ಮೌನಕ್ಕೆ ಶರಣಾದರು. ಇಂಥವರು ಅಧಿಕಾರ ಕೇಂದ್ರದ ಹತ್ತಿರ ಬರದಂತೆ ಮಾಡಲು, ಜಾತಿ ಧರ್ಮ ಹೆಂಡ ಹಣದಂಥ ಆಮಿಷಗಳಿಗೆ ಬಲಿಯಾಗದೆ ದೇಶದ ಭವಿಷ್ಯ ಹಾಗೂ ಪ್ರಗತಿಯನ್ನು ಗಮನದಲ್ಲಿ ಇರಿಸಿಕೊಂಡು ಮತ ಎನ್ನುವ ಹಕ್ಕನ್ನು ಚಲಾಯಿಸಬೇಕು. ಚುನಾವಣಾ ಬಾಂಡ್ ಎನ್ನುವ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿಯನ್ನು ಸೋಲಿಸಬೇಕು.

ಇದನ್ನೂ ಓದಿ- ಸೂತಕದ ಸಮಯದಲಿ ಸಂಘಿಗಳ ರಾಜಕಾರಣ

ಲೋಕಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲೂ ಮತದಾರರನ್ನು ಮೂಢನಂಬಿಕೆಗಳಿಂದ ನಿಯಂತ್ರಿಸಲಾಗುತ್ತಿದೆಯೇ ಎನ್ನುವ ಅನುಮಾನ ಬರುತ್ತಿದೆ. ಭಾರತಕ್ಕೆ ಏನೇನೋ ಅಪಾಯ ಇದೆ, ಗಂಭೀರವಾದ ಆಪತ್ತನ್ನು ಎದುರಿಸಬೇಕಾಗಿದೆ. ಅದನ್ನೆಲ್ಲ ಸಮರ್ಥವಾಗಿ ನಿರ್ವಹಿಸುವ ಶಕ್ತಿ ಮೋದಿಗೆ ಮಾತ್ರ ಇದೆ ಎಂದು ಮತ್ತೆಮತ್ತೆ ಹೇಳಿ ನಂಬಿಸಲಾಗಿದೆ. ಅಭಿವೃದ್ಧಿಗಾಗಿ ಮೋದಿಗೆ ಮತ ಹಾಕಿ ಎಂದು ಹೇಳಲಾಗುತ್ತಿದೆ. ಆದರೆ ಮೋದಿ ಮಾಡಿರುವ ಅಭಿವೃದ್ಧಿ ಈ ಹತ್ತು ವರ್ಷಗಳಲ್ಲಿ ಏನೇನು ಆಗಿದೆ ಎನ್ನುವ ನಿಖರ ಅಂಕಿಅಂಶಗಳೇ ಇಲ್ಲ. ಬಿಜೆಪಿಯಿಂದ ಸ್ಪರ್ಧಿಸಿರುವ ಹೆಚ್ಚಿನ ಮಂದಿಗೆ ನಾನು ಮಾಡಿರುವ ಇಂತಿಂಥ ಸಾಧನೆಗಳಿಗೆ, ರೂಪಿಸಲಿರುವ ಅಭಿವೃದ್ಧಿ ಯೋಜನೆಗಳಿಗೆ ಮತ ಕೊಡಿ ಎಂದು ವೈಯಕ್ತಿಕವಾಗಿ ಕೇಳುವ ವಿಶ್ವಾಸವೇ ಇಲ್ಲ. ಮೋದಿಯ ಹೆಸರಿನಲ್ಲಿ ಇವರ ಮುಖಗಳೆಲ್ಲ ಅಡಗಿವೆ. ಅವರಿಗೆ ಸ್ವಂತ ಮುಖಗಳಾಗಲೀ ಅದನ್ನು ಜನರೆದುರು ತೋರಿಸಿಕೊಳ್ಳುವ ವರ್ಚಸ್ಸಾಗಲೀ ಇಲ್ಲವೇ ಇಲ್ಲ. “ನಾನೂ ತಿನ್ನುವುದಿಲ್ಲ, ಬೇರೆಯವರಿಗೆ ತಿನ್ನಲು ಬಿಡುವುದೂ ಇಲ್ಲ’’ ಎನ್ನುವುದು ಮೋದಿಯವರ ಜನಪ್ರಿಯ ಘೋಷಣೆಗಳಲ್ಲಿ ಪ್ರಮುಖವಾದದ್ದು. ಆದರೆ ಚುನಾವಣಾ ಬಾಂಡ್‍ಗಳ ಹಗರಣ ಭ್ರಷ್ಟಾಚಾರದ ಕರಾಳ ಕಥೆಯನ್ನು ನಮ್ಮೆದುರು ಇರಿಸಿದೆ. ಬಾಂಡ್‍ಗಳನ್ನು ಕೊಳ್ಳುವಂತೆ ಮಾಡುವುದಕ್ಕಾಗಿಯೇ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪಕ್ಕೆ ಬಿಜೆಪಿ ಸರ್ಕಾರ ಗುರಿಯಾಗಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕುವುದಕ್ಕೂ ವರ್ಚಸ್ಸು ವರ್ಧಿಸಿಕೊಳ್ಳುತ್ತಿರುವ ವಿರೋಧ ಪಕ್ಷಗಳ ನಾಯಕರನ್ನ ತನ್ನತ್ತ ಸೆಳೆದುಕೊಳ್ಳುವುದಕ್ಕೂ, ದೀರ್ಘಾವಧಿ ತನಿಖೆಯಲ್ಲಿ ಅವರು ನರಳುವಂತಾಗುವುದಕ್ಕೂ, ಸೆರೆಮನೆಗೆ ದೂಡುವುದಕ್ಕೂ ಇದೇ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ. ವಿರೋಧ ಪಕ್ಷಗಳ ಸರ್ಕಾರ ಇರುವ ರಾಜ್ಯಗಳಲ್ಲಿ ಆಡಳಿತ ಸುಗಮವಾಗಿ ನಡೆಯದಂತೆ ಮಾಡುವುದಕ್ಕಾಗಿ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿದೆ. ಅಕ್ರಮವಾಗಿ ಹಣ ಆಸ್ತಿ ಸಂಪಾದಿಸಿ ಮಹಾಭ್ರಷ್ಟರೆನಿಸಿ ಕೊಂಡಿದ್ದವರನ್ನು ನಿಮ್ಮ ಮೇಲೆ ಯಾವ ತನಿಖೆ, ವಿಚಾರಣೆ ಆಗದಿರಬೇಕಾದರೆ, ನಿಮ್ಮ ಸರ್ವ ಪಾಪಗಳೂ ಪುಣ್ಯವಾಗಿ ಪರಿವರ್ತನೆ ಆಗಬೇಕಾದರೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಕೆಂಪು ಹಾಸಿನ ಸ್ವಾಗತ ನೀಡಿ ಅಜಿತ್ ಪವಾರ್, ಸುವೇಂದು ಅಧಿಕಾರಿ, ಅಶೋಕ್ ಚವ್ಹಾಣ್, ಹಿಮಂತ ಬಿಸ್ವ ಶರ್ಮ, ನಾರಾಯಣ ರಾಣೆ, ನವೀನ್ ಜಿಂದಾಲ್, ಜ್ಯೋತಿರಾದಿತ್ಯ ಸಿಂಧಿಯಾ ಮುಂತಾದವರನ್ನು ಬರಮಾಡಿಕೊಂಡಿರುವ, ಅವರಲ್ಲಿ ಕೆಲವರಿಗೆ ಮಂತ್ರಿ ಸ್ಥಾನ ಅಥವಾ ಉನ್ನತ ಹುದ್ದೆಗಳನ್ನು ನೀಡಿರುವ ಬಿಜೆಪಿಯ ಅಧಿನಾಯಕರಿಗೆ, ಮರಿನಾಯಕರಿಗೆ ಬೇರೆ ಪಕ್ಷಗಳ ಭ್ರಷ್ಟಾಚಾರದ ಬಗೆಗೆ ಮಾತಾಡುವ ನೈತಿಕತೆ ಇದೆಯೇ?

ಉಪವಾಸ, ಯೋಗಾಭ್ಯಾಸ, ಸಮುದ್ರದಾಳದಲ್ಲಿ ಪೂಜೆ, ರಾಮ ಮಂದಿರದ ಉದ್ಘಾಟನೆ ಎಲ್ಲ ಮಾಡುವ ಮೋದಿಯವರು ವಿರೋಧ ಪಕ್ಷಗಳ ಬಗೆಗೆ ಮತ್ತು ತಮ್ಮನ್ನು ಸರ್ಕಾರವಾಗಿಯೇ ಟೀಕಿಸುವವರ, ವಿಮರ್ಶಿಸುವವರ ಬಗೆಗೆ ಯಾವ ಮಟ್ಟದ ಅಸಹನೆ ಇರಿಸಿಕೊಂಡಿದ್ದಾರೆಂದರೆ – ಪ್ರಜಾವಾಣಿಯಂಥ ಪತ್ರಿಕೆ ತನ್ನ ಸಂಪಾದಕೀಯದಲ್ಲಿ “ಕೇಜ್ರಿವಾಲ್ ಬಂಧನ : ಕೆಟ್ಟ ಬಗೆಯ ದ್ವೇಷ ರಾಜಕಾರಣ’’, ಇ.ಡಿ.ಯನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಮಾಡುತ್ತಿರುವ ಕೆಲಸ ವಿರೋಧ ಪಕ್ಷ ಮುಕ್ತ ಭಾರದ ನಿರ್ಮಿಸುವ ಪ್ರಯತ್ನದ ಒಂದು ಭಾಗ ಎಂದು ವಾಸ್ತವಾಂಶಗಳನ್ನು ಉಲ್ಲೇಖಿಸಿ ಬರೆದಿದೆ. ಇಂಥದೇ ಕಾರಣಗಳಿಗಾಗಿ ರಾಹುಲ್‍ಗಾಂಧಿ ಮತ್ತು ಮಹುವಾ ಮೊಯಿತ್ರ ಅವರನ್ನು ಲೋಕಸಭೆಯಿಂದ ಹೊರಹಾಕುವ ತಂತ್ರಗಾರಿಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವ ಜೀವವೇ ಆಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ, ಟೀಕೆ-ವಿಮರ್ಶೆ ಮಾಡುವ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಎದುರಾಳಿಗಳೇ ಇಲ್ಲದಂಥ ಸನ್ನಿವೇಶದಲ್ಲಿ ತನಗೆ ಬೇಕೆನಿಸಿದ್ದನ್ನು ಆಡುವ-ಮಾಡುವ ಪರಮಾಧಿಕಾರ ಅಂದರೆ ಸರ್ವಾಧಿಕಾರದ ಕಡೆಗೆ ಮೋದಿಯವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕುದುರೆಯಂತೆ ದೌಡಾಯಿಸುತ್ತಿದ್ದಾರೆಯೇ ಎನ್ನುವ ಪ್ರಬಲ ಅನುಮಾನ ಸಹಜವಾಗಿಯೇ ಬರುತ್ತದೆ.

ಮೋದಿಯವರು ಪ್ರಧಾನಿಯಾದ ಈ ಹತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ರಸ್ತೆಗಳನ್ನು ನೋಡಿ, ಏರ್‌ಪೋರ್ಟ್ ನೋಡಿ, ಸೈನ್ಯ ನೋಡಿ ಎಂದು ಮೋದಿಭಕ್ತರು ಹಾಕಿದ ಬರಹಗಳು ಮತ್ತು ವಿಡಿಯೋಗಳು ಹರಿದಾಡುತ್ತಿರುವುದನ್ನು ಗಮನಿಸಿದ ಮುಕ್ತ ವಿಚಾರ ವೇದಿಕೆಯ ಗೆಳೆಯರೊಬ್ಬರು ಕೊಟ್ಟಿರುವ ಉತ್ತರಗಳು ಮೋದಿಕಾಲದ ಬದಲಾವಣೆಗಳು ಏನೇನು? ಅದರಿಂದ ಯಾರ್ಯಾರಿಗೆ ಏನೇನು ಉಪಯೋಗವಾಗಿದೆ? ಎಂದು ಸ್ಪಷ್ಟೀಕರಣ ಕೊಡುವುದರಿಂದ ಅವುಗಳನ್ನು ಎಚ್ಚರದಿಂದ ಗಮನಿಸಬೇಕು.

•      ಏರ್‌ಪೋರ್ಟ್ ಗಲು ಬದಲಾಗಿವೆ, ಅವುಗಳಲ್ಲಿ ಬಹಳಷ್ಟು ಅದಾನಿ ಕೈಗೆ ಹೋಗಿವೆ, ಪ್ರಯಾಣ ದರ ಮೂರು ಪಟ್ಟು ಹೆಚ್ಚಾಗಿದೆ.

•      ರಸ್ತೆಯ ಹೆಸರಿನಲ್ಲಿ ಬೊಕ್ಕಸದ ಲೂಟಿ ಹೆಚ್ಚಾಗಿದೆ. ಕಿಕ್ ಬ್ಯಾಂಕ್‍ಗಳು ಬಾಂಡ್ ಮೂಲಕ ಸಂದಾಯವಾದ ಮಾಹಿತಿಯಿದೆ. ವಾಹನ ತೆರಿಗೆ, ರಸ್ತೆ ಟೋಲ್ ಹೆಸರಿನ ಲೂಟಿ ಮಿತಿಮೀರಿದೆ.

•      ಲಾಭದಾಯಕವಾದ ಸರ್ಕಾರಿ ಸಂಸ್ಥೆಗಳು ಆಪ್ತರ ಪಾಲಾಗುತ್ತಿವೆ. ರೈಲ್ವೆ ನಿಲ್ದಾಣ, ಬಸ್ ಸ್ಟಾಂಡ್‍ಗಳ ಪರಿಸ್ಥಿತಿಯೂ ಹೀಗೇ ಆಗಿದೆ.

•      ಸೈನಿಕರು ತಮಗೆ ಕೊಟ್ಟ ಕಳಪೆ ಆಹಾರವನ್ನು ವಿಡಿಯೋ ಮಾಡಿ ಕಳಿಸಿದ್ದಾರೆ.

•      ವಿಮಾನದಲ್ಲಿ ಕಳುಹಿಸದೆ ಅಪಾಯಕಾರಿ ರಸ್ತೆಯಲ್ಲಿ ಸಾಗುವಂತೆ ಮಾಡಿದ್ದರಿಂದ ಪುಲ್ವಾಮದಲ್ಲಿ 40 ಸೈನಿಕರು ಪ್ರಾಣ ತೆರುವಂತೆ ಆಯಿತು.

•      ಹುತಾತ್ಮ ಸೈನಿಕರ ಹೆಸರಿನಲ್ಲಿ ಓಟು ಕೇಳಿ ಅಧಿಕಾರ ಗ್ರಹಣ ಮಾಡಲಾಯಿತು.

•      ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸಲಾಯಿತು.

•      ಯಾವುದೇ ಅನುಭವ ಇಲ್ಲದ ಆಪ್ತರಿಗೆ ಸೇನಾ ಸರಬರಾಜಿನ ಗುತ್ತಿಗೆ ಕೊಡಲಾಯಿತು.

•      ಮಾಜಿ ಸೈನಿಕರು ನ್ಯಾಯಯುತ ಪಿಂಚಣಿ ಪಡೆಯಲು ಜಂತರ್ ಮಂತರ್‌ನಲ್ಲಿ ವರ್ಷಗಟ್ಟಲೆ ಸತ್ಯಾಗ್ರಹ ನಡೆಸಬೇಕಾಯಿತು.

•      ಕೊರೊನಾ ಆಕ್ರಮಣ ಕಾಲದಲ್ಲಿ ಬೀದಿಯಲ್ಲಿ ಹೆಣಗಳು ಉರುಳಿದವು. ಆದರೆ ಲಸಿಕೆ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಲೂಟಿ ಹೊಡೆಯಲಾಯಿತು.

•      ದಿಢೀರನೆ ನೋಟು ಅಮಾನ್ಯೀಕರಣ ಘೋಷಿಸಿ ಬಡವರ, ಮಾಧ್ಯಮ ವರ್ಗದವರ, ಸಣ್ಣಪುಟ್ಟ ವ್ಯಾಪಾರಿಗಳ ಬದುಕನ್ನು ಹಾಳು ಮಾಡಲಾಯಿತು. ಕಪ್ಪುಹಣದ ಕುಳಗಳು ಮಾತ್ರ ರಾಜಾರೋಷವಾಗಿ ಕಪ್ಪನ್ನು ಬಿಳಿ ಮಾಡಿಕೊಂಡರು.

•      ಬೇರೆಬೇರೆ ಪಕ್ಷಗಳ ಭ್ರಷ್ಟರನ್ನು ಹೆದರಿಸಿ ಬೆದರಿಸಿ ಸಾರಾಸಗಟಾಗಿ ಬಿಜೆಪಿಯೊಳಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಆದರೆ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ಪುಂಗಿ ಊದುವುದನ್ನು ಮಾತ್ರ ನಿಲ್ಲಿಸಿಲ್ಲ.

•      ರೈತರ, ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಕರಾಳ ಕಾನೂನುಗಳನ್ನೂ ತರಲಾಯಿತು.

•      ಬೆಲೆಯೇರಿಕೆ ನಿಯಂತ್ರಣ ಮಾಡುವುದಾಗಿ ಭರ್ಜರಿ ಭಾಷಣ ಹೊಡೆಯುತ್ತಲೇ ಎರಡು ಮೂರು ಪಟ್ಟು ಏರಿಸಲಾಯಿತು.

•      40 ರೂಪಾಯಿಗೆ ಒಂದು ಡಾಲರ್ ಅಂತ ಹೇಳುತ್ತಲೇ ರೂ. 83ಕ್ಕೆ ಹೋಗುವಂತೆ ಮಾಡಲಾಯಿತು.

•      ದೇಶದ ಬಡವರು, ಮಾಧ್ಯಮ ವರ್ಗದವರು ಆರ್ಥಿಕ ಸಂಕಷ್ಟದಲ್ಲಿ ಒದ್ದಾಡುತ್ತಿರಬೇಕಾದರೆ ಮೋದಿ ಮಿತ್ರರಾದ ಅಂಬಾನಿ, ಅದಾನಿಗಳ ಸಂಪತ್ತು ಲಕ್ಷಾಂತರ ಕೋಟಿಗಳಲ್ಲಿ ಏರಿಕೆಯಾಯಿತು.

•      ನಮ್ಮ ದೇಶದ ಬ್ಯಾಂಕುಗಳ ಸಾವಿರಾರು ಕೋಟಿ ಹಣ ಲೂಟಿ ಮಾಡಿದ ಸಿರಿವಂತರು ವಿದೇಶಗಳಿಗೆ ಹಾರಿದ್ದಾರೆ.

•      ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಪಾಲು ಕೊಡದೆ ವಂಚಿಸಲಾಗುತ್ತಿದೆ.

•      ದೇಶದ ತಲೆಯ ಮೇಲೆ 170 ಲಕ್ಷ ಕೋಟಿ ಸಾಲವನ್ನು ಹೇರಲಾಗಿದೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ಅಲ್ಲವೇ? ಈ ದುರಾಡಳಿತ, ಸರ್ವಾಧಿಕಾರದತ್ತ ಸಾಗುತ್ತಿರುವ ಆಡಳಿತ ಕೊನೆಗೊಳ್ಳಬೇಕು ಎನ್ನುವುದಾದರೆ ರಾಜ್ಯದ ಪ್ರತಿಯೊಬ್ಬ ಮತದಾರರು ಈ ಬಾರಿ ಮತಗಟ್ಟೆಗೆ ಹೋಗುವ ಮುನ್ನ ಈ ಕಟುಸತ್ಯಗಳನ್ನೆಲ್ಲ ನೆನಪು ಮಾಡಿಕೊಂಡು ವಿವೇಕದಿಂದ ಮತ ಚಲಾಯಿಸಬೇಕು.

ಡಾ. ಬೈರಮಂಗಲ ರಾಮೇಗೌಡ

ಹಿರಿಯ ಲೇಖಕರು

More articles

Latest article