ಟೀಕೆಗೆ ಹೆದರಲ್ಲ, ನೇಹಾ ಕೊಲೆ ಆರೋಪಿಗೆ ಶಿಕ್ಷಿಸಲು ಅಗತ್ಯ ಕ್ರಮ ಆಗುತ್ತಿದೆ; ಜಿ.ಪರಮೇಶ್ವರ್

Most read

ಬೆಂಗಳೂರು: ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿ ಇದೆ. ನನಗಾಗಲೀ ಬೇರೆ ಧರ್ಮದವರಿಗಾಗಲೀ ಯಾರಿಗೇ ಆದರೂ ಕಾನೂನು ಚೌಕಟ್ಟು ಮೀರಿ ಏನೂ ಮಾಡಲು ಆಗುವುದಿಲ್ಲ. ನೇಹಾ ಕೊಲೆ ಪ್ರಕರಣ ರಾಜಕೀಯ ಆಗಬಾರದು. ಆ ಹೆಣ್ಣುಮಗಳಿಗೆ ನಿಜವಾದ ನ್ಯಾಯ ಸಿಗಬೇಕು. ಪ್ರಧಾನಿ ಮೋದಿ ಸಹ ಮತಕ್ಕಾಗಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿರುವುದು ಖೇದಕರ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಅವರು ಈ ವಿಚಾರಗಳನ್ನು ಹಂಚಿಕೊಂಡರು.

ಸದ್ಯ ನಮಗಿರುವ ಗ್ರೌಂಡ್ ಲೆವೆಲ್ ಮಾಹಿತಿ ಪ್ರಕಾರ ರಾಜ್ಯದಲ್ಲಿ ನಾವು 20 ಸ್ಥಾನ ಗೆಲ್ಲುತ್ತೇವೆ. ಕಾರ್ಯಕರ್ತರಿಗೆ ಬಂದ ಕ್ಷೇತ್ರದ ಪಲ್ಸ್ ರಿಪೋರ್ಟ್ ಪ್ರಕಾರ ಒಂದಷ್ಟು ಅಚ್ಚರಿ ಫಲಿತಾಂಶ ಕಾದಿದೆ. ಬಿಜೆಪಿ ಹೇಳೊ ರೀತಿ ದೇಶದಲ್ಲಿ ಅವರು 400 ಸ್ಥಾನ ಗೆಲ್ತಾರೆ ಅನ್ನೋದು ಸುಳ್ಳು. ಅವರ ಅಲೆ ಇಲ್ಲ ಈಗ ಕಡಿಮೆ ಆಗಿದೆ ಎಂದರು.

ಚುನಾವಣೆ ಅನ್ನೋದು ಯಾವತ್ತೂ ಈ ಮಟ್ಟಕ್ಕೆ ಹೋಗಬಾರದು. ನಾವು ಇಲ್ಲಿಯವರೆಗೆ ಪರಸ್ಪರ ದ್ವೇಷ ಮಾಡೋದನ್ನ ನೋಡಿರಲಿಲ್ಲ. ‌ಪ್ರಧಾನ ಮಂತ್ರಿಗಳೇ ಧರ್ಮದ ಆಧಾರದ ಮೇಲೆ ಮಾತಾಡುವುದನ್ನು ಎಂದೂ ನೋಡಿರಲಿಲ್ಲ. ಮತಕ್ಕಾಗಿ ಈ ರೀತಿ ದ್ವೇಷ ಭಾಷಣ ಮಾತಾನಾಡಿರೋದು ಸರಿಯಲ್ಲ. ಜನ ಅವರ ಮಾತುಗಳನ್ನು ಯಾವ ರೀತಿ ತೆಗೆದುಕೊಳ್ತಾರೆ ಎನ್ನುವ ಅರಿವು ಅವರಿಗಿರಬೇಕು. ಚುನಾವಣೆ ಫಲಿತಾಂಶದಲ್ಲಿ ಇದರ ಅರಿವು ಅವರಿಗೆ ಆಗಲಿದೆ ಎಂದಿದ್ದಾರೆ.

ನೇಹಾಗಾಗಿ ಮತ ಹಾಕಿ ಅನ್ನೋದು ಆಗಬಾರದು

ನಾನು ಕೆಲವೊಂದು ಪೋಸ್ಟ್ ಗಳನ್ನು ಗಮನಿಸಿದ್ದೇನೆ. ನೇಹಾಗಾಗಿ ಮತ ಹಾಕಿ ಅನ್ನೋ ಪೋಸ್ಟರ್ ಎಲ್ಲೆಡೆ ಹರಿದಾಡುತ್ತಿವೆ. ನೇಹಾ ಕೊಲೆ ವಿಚಾರ ರಾಜಕೀಯ ಆಗಬಾರದು ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಎಲ್ಲವನ್ನೂ ಮಾಡುತ್ತಿದ್ದೇವೆ. ಕಾನೂನು ಮೀರಿ ಯಾರೇ ಆದರೂ ಏನೂ ಮಾಡಲಾಗದು. ಕೊಲೆಗಾರ ಮುಸ್ಲಿಂ ಆಗಿರುವುದಕ್ಕೆ ಕಾಂಗ್ರೆಸ್ ಅವನ ಪರ ಇದೆ ಎನ್ನುತ್ತಿದ್ದಾರೆ. ನನ್ನ ಮತ್ತು ಸಿಎಂ ವಿರುದ್ಧ ಅನೇಕ ಟೀಕೆಗಳನ್ನು ಮಾಡುತ್ತಿದ್ದಾರೆ. ನಾವು ಇದಕ್ಕೆಲ್ಲ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ಆರೋಪಿಗೆ ಶಿಕ್ಷೆ ಆಗಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತಿದ್ದೇವೆ ಎಂದಿದ್ದಾರೆ.

ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸುವ ವಿಚಾರವಾಗಿ ಮಾತನಾಡಿ, ಸಿಬಿಐಗೆ ಹೋಗಬೇಕು ಅಂದ್ರೆ ಅದೇನು ದೊಡ್ಡ ವಿಚಾರ ಅಲ್ಲ. ಅನೇಕ ಪ್ರಕರಣಗಳನ್ನ ನಾವು ಹಿಂದೆಯೂ ಸಿಬಿಐಗೆ ವಹಿಸಿದ್ದೇವೆ. ಅವನು ಸಿಕ್ಕಿದ್ದಾನೆ ಎಲ್ಲೂ ಹೋಗಿಲ್ಲ. ಕೇವಲ ಒಂದೇ ಗಂಟೆಯಲ್ಲಿ ಅವನನ್ನ ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಅವನಿಗೆ ಏನು ಶಿಕ್ಷೆ ಆಗಬೇಕೋ ಅದು ಆಗುತ್ತದೆ.

“ಮೋದಿ ಶನಿ” ಎಂದ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಒಂದೊಂದು ಕಾಲದಲ್ಲಿ ಯಾವ ರೀತಿ ಆಡಳಿತ ಮಾಡಬೇಕೋ ಅದು ಆಗಿದೆ. ಸಾರ್ವಜನಿಕ ವಲಯದಲ್ಲಿ ಇದ್ದಾಗ ನಾವು ಸರಿಯಾಗಿ ಮಾತನಾಡಬೇಕು. ನಾನೇ ಆದರೂ ಕೂಡ ಒಂದು ಹೇಳಿಕೆ ನೀಡಿದ್ರೆ ಅದರ ಮೇಲೆ ನನ್ನನ್ನ ಜನ ಅಳೆಯುತ್ತಾರೆ. ಜೊತೆಗೆ ತಿರುಚುವಂತ ಪ್ರಯತ್ನ ಕೂಡ ಆಗುತ್ತದೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನ ಸಮರ್ಥನೆ ಮಾಡಲು ಆಗಲ್ಲ. ಯಾವುದೇ ಹೇಳಿಕೆ ನೀಡಿದರೂ ಅದರ ಮೇಲೆ ನಮ್ಮನ್ನ ಜನ ಅಳತೆ ಮಾಡ್ತಾರೆ ಎಂದಿದ್ದಾರೆ‌.

More articles

Latest article