ಪ್ರಧಾನಿಯವರೇ, ಈ ದೇಶವು ನಿಮಗೆ ಎರಡು ಅವಧಿಯ ಸಂಪೂರ್ಣ ಅಧಿಕಾರವನ್ನು ನೀಡಿದೆ, ನಿಮಗೆ ತುಂಬಾ ಪ್ರೀತಿ, ಗೌರವ ಮತ್ತು ಜನಪ್ರಿಯತೆಯನ್ನು ನೀಡಿದೆ. ಯಾಕಿಷ್ಟು ಅಸಹಾಯಕರಾಗಿ ನಿಮ್ಮ ಭಾಷಣದಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷವನ್ನು ಹರಡುತ್ತಿದ್ದೀರಿ? ಎಂಥ ಅಭದ್ರತೆ ನಿಮ್ಮದು? ದಯವಿಟ್ಟು ಪ್ರೀತಿಯನ್ನು ಹರಡಿ, ಸಮುದಾಯಗಳನ್ನು ಒಗ್ಗೂಡಿಸಿ. ಇತಿಹಾಸವು ನಿಮ್ಮನ್ನು ನೆನಪಿಕೊಳ್ಳುತ್ತದೆ. ದಯವಿಟ್ಟು!
-ಸತೀಶ್ ಆಚಾರ್ಯ
ಪ್ರಖ್ಯಾತ ವ್ಯಂಗ್ಯಚಿತ್ರಕಾರ
ಹೊಸದಿಲ್ಲಿ: ʻʻಕಾಂಗ್ರೆಸ್ ಪಕ್ಷ ಹೆಣ್ಣುಮಕ್ಕಳ ತಾಳಿಯ ಸಮೇತ ಎಲ್ಲ ಸಂಪತ್ತನ್ನು ನುಸುಳುಕೋರರಿಗೆ, ಉಗ್ರಗಾಮಿಗಳಿಗೆ ನೀಡಲು ಹೊರಟಿದೆʼʼ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಇತಿಹಾಸದಲ್ಲಿ ಹಿಂದೆಂದೂ ರಾಜಕಾರಣ ಇಂಥ ಕೆಳಹಂತಕ್ಕೆ ತಲುಪಿರಲಿಲ್ಲ. ಇದು ಮತ್ತೆಂದೂ ಆಗಕೂಡದು. ಮೋದಿ ವಿರುದ್ಧ ಯಾಕೆ ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ನಾನು ಕೇಳಬಯಸುತ್ತೇನೆ. ಚುನಾವಣಾ ಆಯೋಗ ಮೋದಿ ಭಾಷಣವನ್ನು ಖಂಡಿಸಬೇಕು, ಕೂಡಲೇ ನೋಟಿಸ್ ನೀಡಬೇಕು ಎಂದು ಸಮಾಜವಾದಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ತಾನದ ಬಿಲ್ಸ್ವಾರಾದಲ್ಲಿ ಮಾಡಿದ ಪ್ರಚಾರ ಭಾಷಣದಲ್ಲಿ ಮೋದಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದರ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಚುನಾವಣಾ ಆಯೋಗ ಮಲಗಿ ನಿದ್ರಿಸುತ್ತಿದೆಯೇ ಎಂದು ರಾಜಕಾರಣಿಗಳು, ಸಾಮಾಜಿಕ ಚಿಂತಕರು ಪ್ರಶ್ನಿಸುತ್ತಿದ್ದಾರೆ.
ಆಲ್ಟ್ ನ್ಯೂಸ್ ಸಹಸಂಪಾದಕ ಮಹಮದ್ ಜುಬೇರ್ ಪ್ರಧಾನಿ ಭಾಷಣದ ವಿಡಿಯೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪ್ರಧಾನಿಯವರ ಈ ಭಾಷಣ ಆತಂಕಕಾರಿ, ಇಸ್ಲಾಮೋಫೋಬಿಕ್ ಮತ್ತು ಸುಳ್ಳುಗಳಿಂದ ಕೂಡಿದೆ. ಅವರು ಇಡೀ ಮುಸ್ಲಿಂ ಸಮುದಾಯನ್ನು ನುಸುಳುಕೋರರು ಎಂದು ಕರೆದಿದ್ದಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುವವರು ಎಂದು ಆರೋಪಿಸಿದ್ದಾರೆ. ದೇಶದ ಪ್ರಧಾನಿಯೇ 20 ಕೋಟಿ ಜನಸಂಖ್ಯೆಯ ಒಂದು ಸಮುದಾಯದ ಬಗ್ಗೆ ಈ ರೀತಿಯ ಭಾಷೆ ಬಳಕೆ ಮಾಡುತ್ತಿದ್ದರೆ ಅವರ ಪಕ್ಷದ ಪ್ರಜ್ಞಾ ಠಾಕೂರ್, ಟಿ ರಾಜಾ ಅಂಥವರಿಗೆ ಮುಸ್ಲಿಂ ಸಮುದಾಯದವರ ವಿರುದ್ಧ ಕೆಟ್ಟದಾಗಿ ಮಾತನಾಡಲು ಪರವಾನಗಿ ಸಿಕ್ಕ ಹೇಗೆ ಎಂದು ಹೇಳಿದ್ದಾರೆ.
ʻಅಯ್ಯೋ ದೇವರೇ! ಇವರೇನು ಮಾತನಾಡುತ್ತಿದ್ದಾರೆ. ಮುಸ್ಲಿಮರ ವಿರುದ್ಧ ಈ ಪ್ರಮಾಣದ ದ್ವೇಷ? ಇವರೇ ಹತ್ತು ವರ್ಷದ ಪ್ರಧಾನಿ. ನಾಚಿಕೆಗೇಡು. ನಿಮಗೆ ದ್ವೇಷ ಬಿಟ್ಟು ಹೇಳಲು ಬೇರೇನೂ ಇಲ್ಲದೇ ಇದ್ದಾಗ ʻʻತಾಳಿಯನ್ನು ಮಾರುತ್ತಾರೆʼʼ ಎಂಬ ಸಾಲು ಬರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ರಾಖಿ ತ್ರಿಪಾಠಿ ಕಿಡಿಕಾರಿದ್ದಾರೆ.
ಭಾರತೀಯನಾಗಿರಲು ನನಗೆ ಹೆಮ್ಮೆಯಿದೆ, ಆದರೆ ನನ್ನ ಪ್ರಧಾನಿ ಇವರು ಎಂದು ಕೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಅತ್ಯಂತ ಕೊಳಕಾದ ಇಸ್ಲಾಮೋಫೋಬಿಕ್ ಭಾಷೆಯಲ್ಲಿ ಈತ ಮತ ಭಿಕ್ಷೆ ಬೇಡುತ್ತಿದ್ದಾರೆ. ಇವರಿಗೆ ಮತ ಹಾಕಿದ ಎಲ್ಲರಿಗೂ ನಾಚಿಕೆಯಾಗಬೇಕು ಎಂದು ಪ್ರಖ್ಯಾತ ವೈದ್ಯ ಡಾ. ಸಿ ವರುಣ್ ಹೇಳಿದ್ದಾರೆ.
ಪ್ರಧಾನಿಯ ಆ ವಿಡಿಯೋ ಕ್ಲಿಪ್ ನಾನು ಶೇರ್ ಮಾಡುತ್ತಿಲ್ಲ. ಅದು ಇನ್ನಷ್ಟು ವೈರಲ್ ಆಗುವುದು ನನಗೆ ಇಷ್ಟವಿಲ್ಲ. ಅವರ ಭಾಷಣ ದಾರಿತಪ್ಪಿಸುವಂಥದ್ದು, ದ್ವೇಷಮಯವಾದ್ದು ಮತ್ತು ವಿಭಜಕ ನೀತಿಯನ್ನು ಹೊಂದಿದೆ. ಅದು ಎರಡು ವಿಷಯಗಳನ್ನು ಸ್ಪಷ್ಟಪಡಿಸುತ್ತದೆ. ಮೂರನೇ ಬಾರಿ ಅಧಿಕಾರ ಬಯಸುತ್ತಿರುವ ಪಕ್ಷ ಹತಾಶೆಗೆ ಒಳಗಾಗದೆ ಹೀಗೆಲ್ಲ ಮಾತನಾಡಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಇಂಥ ದ್ವೇಷದ ರಾಜಕಾರಣದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದೆ ಎಂದು ಶಿವಸೇನೆ ಮುಖಂಡರಾದ ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.
ಮೋದಿಯವರಿಗೆ ಅವರ ಗ್ಯಾರೆಂಟಿಗಳಿಗೆ ಜನ ಮರುಳಾಗುತ್ತಿಲ್ಲ ಎಂಬುದು ಗೊತ್ತಾಗಿದೆ. ಯಾಕೆಂದರೆ ಅವರ ಗ್ಯಾರೆಂಟಿ ಕಸದಂತಿದೆ ಮತ್ತು ಅವರು ಸುಳ್ಳುಗಾರ ಎಂಬುದು ಜನರ ಅರಿವಿಗೆ ಬಂದಿದೆ. ಹೀಗಾಗಿ ಮೋದಿ ಈಗ ಅವರಿಗೆ ಗೊತ್ತಿರುವ ದ್ವೇಷ ಉಗುಳುವ ಹಳೆಯ ಭಾಷಣಗಳಿಗೆ ಹಿಂದಿರುಗಿದ್ದಾರೆ. ಚುನಾವಣಾ ಆಯೋಗ ಎಂದಿನಂತೆ ನಿದ್ದೆ ಮಾಡುತ್ತಿದೆ. ಅದು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ ಸತ್ಯ ಏನೆಂದರೆ ಮೋದಿ ನಮ್ಮೆಲ್ಲರ ಕಲ್ಪನೆಗೂ ಮೀರಿ ಗರ ಬಡಿದಂತಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸಾಕೇತ್ ಗೋಕಲೆ ಹೇಳಿದ್ದಾರೆ