ಹಿಂದೂ-ಮುಸ್ಲಿಂ, ತುಘಲಕ್, ತಾಲಿಬಾನ್, ಮತಾಂತರ, ಪಾಕಿಸ್ತಾನ… ಬಿಜೆಪಿಯಿಂದ ಅದೇ ರಾಗ, ಅದೇ ಹಾಡು

Most read

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಂದಿನಂತೆ ತನ್ನ ಕೋಮುಧ್ರುವೀಕರಣದ ಅಸ್ತ್ರಗಳನ್ನು ಹೊರತೆಗೆದಿರುವ ಭಾರತೀಯ ಜನತಾ ಪಕ್ಷದ ನಾಯಕರು ಜನರ ಸಮಸ್ಯೆಗಳು, ಅಭಿವೃದ್ಧಿ, ನಿರುದ್ಯೋಗ, ಬೆಲೆ ಏರಿಕೆ, ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಮಾತನಾಡದೆ ಕೋಮು ಸಂಘರ್ಷದ ಮಾತುಗಳನ್ನು ಆಡುತ್ತಿದ್ದಾರೆ.

ಹಿಂದೂ-ಮುಸ್ಲಿಂ, ತುಘಲಕ್, ತಾಲಿಬಾನ್, ಮತಾಂತರ, ಪಾಕಿಸ್ತಾನ ಇತ್ಯಾದಿ ಶಬ್ದಗಳೇ ಬಿಜೆಪಿ ನಾಯಕರ ಬಾಯಿಗಳಿಂದ ಹೊರಬರುತ್ತಿದ್ದು, ಚುನಾವಣಾ ಸಂದರ್ಭದಲ್ಲಿ ನಡೆಯಬೇಕಾದ ಅಭಿವೃದ್ಧಿಯ ಚರ್ಚೆಯನ್ನು ಮೂಲೆಗುಂಪು ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿಂದ ಪತ್ರಿಕಾ ಗೋಷ್ಠಿ ನಡೆಸಿದ ಬಿಜೆಪಿ ನಾಯಕರುಗಳು ಧರ್ಮ, ಜಾತಿಯ ನೆಲೆಯಲ್ಲಿ ಮತ ಯಾಚಿಸಬಾರದು ಎಂಬ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಾರಾಸಗಟಾಗಿ ಮೂಲೆಗೆಸೆದು ಕೋಮುಭಾವನೆ ಕೆರಳಲಿಸುವ ಮಾತುಗಳನ್ನು ಆಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಹಾ ಹತ್ಯೆ, ಬಿಜೆಪಿ ಕಾರ್ಯಕರ್ತನ ಸಾವು ಇತ್ಯಾದಿಗಳನ್ನು ಪ್ರಸ್ತಾಪಿಸಿ, ಸಿದ್ದರಾಮಯ್ಯ ಸರ್ಕಾರ ಮತಾಂಧ ಶಕ್ತಿಯನ್ನು ಬೆಳೆಸುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವನ್ನು ಬದಲಾಯಿಸಿದ್ದಾರೆ. ರಾಜ್ಯವನ್ನು ಮತಾಂಧ ಯುದ್ಧಭೂಮಿಯಾಗಿ ಮಾಡಿಬಿಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಂಡ್ಯದಲ್ಲಿ ಹನುಮ ಧ್ವಜ ಹಾಕಿದವರ ಮೇಲೆ ಕ್ರಮ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರೈತರ ಬದುಕಿಗೆ ಗ್ಯಾರಂಟಿಯೇ ಇಲ್ಲದಂತಾಗಿದೆ. ಭಯೋತ್ಪಾದಕರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ರಕ್ಷಣೆ ಸಿಗುತ್ತಿದೆ ಎಂದರು.
ಮತ್ತೋರ್ವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂಗಳು 3ನೇ ದರ್ಜೆಯ ನಾಗರಿಕೆಂತಾಗಿದ್ದಾರೆ. ರಾಜ್ಯದಲ್ಲಿ ಮುಸ್ಲಿಮರಿಗೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ. ಮುಸ್ಲಿಮರ ಪರವಾಗಿ ಸಿಎಂ, ಡಿಸಿಎಂ ನಿಂತಿದ್ದಾರೆ. ಮುಸ್ಲಿಂ ಗೂಂಡಾ, ಭಯೋತ್ಪಾದಕರ ಪರವಾಗಿದ್ದಾರೆ ಎಂದೆಲ್ಲ ನಾಲಿಗೆ ಹರಿಬಿಟ್ಟು ಮಾತನಾಡಿದರು.

ಹಿಂದೂಗಳನ್ನು ಹೆದರಿಸುವ ವಾತಾವರಣ ಸೃಷ್ಟಿಸಿದ್ದಾರೆ. ಹಿಂದೂಗಳು ಮನೆಯಿಂದ ಹೊರಬರದಂತೆ ಮಾಡುತ್ತಿದ್ದಾರೆ. ಮತಾಂಧತೆ ಪರಾಕಾಷ್ಠೆ ಮರೆಯುವವರಿಗೆ ಗ್ಯಾರಂಟಿ ನೀಡಲಾಗಿದೆ. ಹಿಂದೂಗಳನ್ನು ತುಳಿಯುವವರಿಗೆ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಅವರು ಗ್ಯಾರೆಂಟಿ ಫಲಾನುಭವಿಗಳನ್ನೇ ನಿಂದಿಸಿ ಮಾತನಾಡಿದರು.

ಇತ್ತ ಶಾಸಕ ಮುನಿರತ್ನ, ಮಮತಾ ಎಂಬ ಹುಡುಗಿಯನ್ನು ಕನ್ವರ್ಟ್ ಮಾಡಿದ್ದಾರೆ. ಮಮತಾಳನ್ನು ಮುಮ್ತಾಜ್ ಎಂದು ಬದಲಿಸಿದ್ದಾರೆ. 15 ವರ್ಷದ ಅಪ್ರಾಪ್ತೆಯನ್ನು ರೇಪ್ ಮಾಡಿದ್ದಾರೆ. ಆರೋಪಿಗಳೆಲ್ಲ ಕಾಂಗ್ರೆಸ್ ಬೆಂಬಲಿಗರು. ಕಾಂಗ್ರೆಸ್ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ. ಶೀಘ್ರದಲ್ಲೇ ಆರೋಪಿಗಳ ಮುಖವಾಡ ಕಳಚುತ್ತೇನೆ ಎಂದು ಹೇಳಿದ್ದಾರೆ. ಅವರ ಆರೋಪಗಳಿಗೆ ಯಾವುದೇ ಆಧಾರ ಇನ್ನೂ ನೀಡಲಿಲ್ಲ.

ತಾಲಿಬಾನ್ ಸರ್ಕಾರಕ್ಕೆ ಮೋದಿ ಸರ್ಕಾರ ಸಹಾಯ ಮಾಡಿರುವುದನ್ನು ಮರೆತಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರವಿದೆ ಎಂದು ಜರಿದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಹಿಂದೂಗಳ ಜೀವಕ್ಕೆ ಬೆಲೆ ಇಲ್ಲ. ಮತಾಂಧರು ಏನೇ ಮಾಡಿದ್ರು ನೆರವು ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರ ಅವರಿಗೆ ಭರವಸೆ ನೀಡಿದೆ. ಜೈ ಶ್ರೀರಾಮ್ ಅಂದ್ರೆ ಹಲ್ಲೆ ಮಾಡುತ್ತಿದ್ದಾರೆ ಎಂದು ಪುಂಖಾನುಪುಂಖ ಹಿಂದೂ-ಮುಸ್ಲಿಂ ನರೇಟಿವ್ ಗಳನ್ನು ಪ್ರತಿಪಾದಿಸಿದ್ದಾರೆ.

ಚುನಾವಣೆಗಳನ್ನು ಜನರ ಸಮಸ್ಯೆಗಳು, ಅಭಿವೃದ್ಧಿ, ಬೆಲೆ ಏರಿಕೆ, ನಿರುದ್ಯೋಗ ಇಂಥ ವಿಷಯಗಳನ್ನು ಮುಂದಿಟ್ಟು ಎದುರಿಸಬೇಕಾದ ರಾಜಕೀಯ ಪಕ್ಷಗಳು, ಹಿಂದೂ-ಮುಸ್ಲಿಂ ವಿಷಯ ಎಳೆತಂದು ಕೋಮುಸಂಘರ್ಷದ ವಾತಾವರಣ ನಿರ್ಮಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಈ ಕುರಿತು ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಚೊಂಬು ಕೊಟ್ಟ ದರಿದ್ರ ಸರ್ಕಾರ ಕಾಂಗ್ರೆಸ್. ಕಾಂಗ್ರೆಸ್ ಬಂತು ನಕ್ಸಲ್ ಬಂತು. ಕಾಂಗ್ರೆಸ್ ಬಂತು ಟೆರರಿಸಂ ತಂತು. ಬಾಂಬ್ ಬ್ಲಾಸ್ಟ್ ಗೆ ಮುಕ್ತ ಅವಕಾಶ ಕೊಡ್ತು. ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಆಕ್ರೋಶ.

More articles

Latest article