ನಕಲಿ ದೇವಮಾನವರು ಮತ್ತು ಮೋದಿಯ ಧಾರ್ಮಿಕ ಗೆಟಪ್ಪಿನ ಮರ್ಮ

Most read

ಯಾರಿಗೆ ಅತಿ ಹೆಚ್ಚು ಪಾಪ ಪ್ರಜ್ಞೆ ಕಾಡುತ್ತಿರುತ್ತದೆಯೋ ಅವನೇ ಅತಿ ಹೆಚ್ಚು ದೇವರ ಭಕ್ತಿಯ ಬಹಿರಂಗ ಪ್ರದರ್ಶನ ಮಾಡುವುದು!”. ಹಾಗಾದರೆ ಗೋಧ್ರಾ  ಕಾಂಡಕ್ಕೆ ಅಥವಾ ಪುಲ್ವಾಮಾ ದುರಂತಕ್ಕೆ ತಾನು ನೇರ ಹೊಣೆ ಎಂಬ ಪಾಪ ಪ್ರಜ್ಞೆ ಮೋದೀಜಿಗೆ ಚುಚ್ಚುತ್ತಿದೆಯೇ? ಅಥವಾ ಹರೇನ್ ಪಾಂಡ್ಯಾ ಮತ್ತು ಜಸ್ಟಿಸ್ ಲೋಯಾರ ಅನುಮಾನಾಸ್ಪದ ಸಾವು ಮೋದಿಜಿಯ ಆತ್ಮಸಾಕ್ಷಿಯನ್ನು ಕುಕ್ಕುತ್ತಿದೆಯೇಅಥವಾ ಅವರು ಸಾರ್ವಜನಿಕ ಸಭೆಯಲ್ಲಿ ಅನುದಿನ ಹೇಳುತ್ತಿರುವ ಹಸಿ ಸುಳ್ಳುಗಳು ನಿದ್ದೆಯಲ್ಲಿ ಕಾಡುತ್ತಿವೆಯೇ? _ ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು. 

ಬಹಳಷ್ಟು ವಿದ್ಯಾವಂತ ಮಹಿಳೆಯರಿಗೆ, ಹಾಗೂ 50 ವರ್ಷ ವಯಸ್ಸು ದಾಟಿದ ವಿದ್ಯಾವಂತ ಗಂಡಸರಿಗೆ- ಅದೇಕೆ ಮೋದಿ ನಿಮಗೆ ಇಷ್ಟ ಎಂದು ಕೇಳಿದರೆ ಅವರೆಲ್ಲರದೂ ಒಂದೇ ಉತ್ತರ-  ಮೋದಿ ಹಿಂದೂ ಸಂಸ್ಕಾರಗಳನ್ನು ಮತ್ತು ಪೂಜೆ ವೃತ ಉಪವಾಸಗಳನ್ನು ಸರಿಯಾಗಿ ಪಾಲಿಸುತ್ತಾರೆ, ಅವರು ಎಲ್ಲಾ ಪ್ರಸಿದ್ಧ ಹಿಂದೂ ಕ್ಷೇತ್ರಗಳನ್ನು ಭೇಟಿ ಮಾಡಿ ಪೂಜೆ ಸಲ್ಲಿಸುತ್ತಾರೆ.  ಅದನ್ನು ಎಲ್ಲಾ ಟಿ‌ವಿ ಗಳಲ್ಲಿ ತೋರಿಸುವುದರಿಂದ ನಮಗೂ ಎಲ್ಲಾ ದೇವರ ಅಪರೂಪದ ದರ್ಶನ ಆಗುತ್ತಿದೆ. ಮೋದಿಯಂತಹಾ ದೈವಭೀರು ವ್ಯಕ್ತಿ ಪ್ರಧಾನಿ ಆಗಿರದಿದ್ದರೆ ನಮಗೆ ಈ ಪುಣ್ಯ ಕ್ಷೇತ್ರಗಳ ದರ್ಶನ ಎಂದೂ ಆಗುತ್ತಿರಲಿಲ್ಲ.  ಹಿಂದೂ ಪುಣ್ಯ ಕ್ಷೇತ್ರಗಳ ರಕ್ಷಕ ಮೋದಿ. ಇದಕ್ಕಾಗಿ ನಾವು ಮೋದಿಯವರಿಗೆ ಚಿರ ಋಣಿಯಾಗಿದ್ದೇವೆ  ಎಂದು ಹೇಳುತ್ತಾರೆ ಹೆಚ್ಚಿನ ಮಧ್ಯಮ ವರ್ಗದ ಮಹಿಳೆಯರು ಹಾಗೂ ಹಿರಿಯ ವಯಸ್ಸಿನ ವಿದ್ಯಾವಂತ ಗಂಡಸರು. 

ಮಹಿಳೆಯರ ಮತ್ತು ಈ ಹಿರಿಯರ ದೌರ್ಬಲ್ಯ ಮೋದಿಯವರಿಗೆ ಗೊತ್ತಿರುವುದರಿಂದಲೇ, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ,  ಮೋದೀಜಿ ತಮ್ಮ ದೇವಸ್ಥಾನ ದರ್ಶನಗಳ ಹಳೆಯ ವಿಡಿಯೋಗಳನ್ನು ಗೋದಿ ಮೀಡಿಯಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಪ್ರಸಾರ ಮಾಡುತ್ತಿರುವುದು.

ಅತ್ಯಾಚಾರ ಮತ್ತು ಕೊಲೆಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹರಿಯಾಣಾದ ಬಾಬಾ ರಾಮ್ ರಹೀಮ್ ನಿಗೆ ಅಲ್ಲಿಯ ರಾಜ್ಯ ಸರಕಾರವೇ ಮೂರು ತಿಂಗಳಿಗೊಮ್ಮೆ 30 ದಿನಗಳ ಪರೋಲ್ ಕೊಟ್ಟು ಬಿಡುಗಡೆ ಮಾಡುತ್ತದೆ. ಹಾಗಾಗಿ ಅವನಿಗೆ “ಪರೋಲ್ ಬಾಬಾ” ಎಂಬ ಅಡ್ಡ ಹೆಸರು ಬಿದ್ದಿದೆ.  ಪರೋಲ್ ನಲ್ಲಿರುವಾಗ ಅವನ ಆಶ್ರಮದಲ್ಲಿ  ಟಿ‌ವಿ ಮೂಲಕ ಅವನ ‘ವರ್ಚುವಲ್’ ದರ್ಶನಕ್ಕಾಗಿ ಸಂಸದ- ಶಾಸಕರ ಸಹಿತ ಶ್ರೀಮಂತ ಮತ್ತು ಮಧ್ಯಮ ವರ್ಗದ ಮಹಿಳೆಯರು ಮುಗಿಬೀಳುತ್ತಾರೆ.  ಇದರ ಅರ್ಥ ಏನು?  ಆ ಪರೋಲ್-ಬಾಬಾ ನಿಜವಾಗಿ ಪವಾಡ ಪುರುಷನೆಂದೇ?  ತನಗೆ ಪರೋಲ್ ಕೊಟ್ಟ ಬಿ‌ಜೆ‌ಪಿ ಸರಕಾರಕ್ಕೆ ಕೃತಜ್ಞತೆ ತೋರಿಸಲು ಪ್ರತಿ ಸಾರಿ ಈ ಪರೋಲ್ ಬಾಬಾ ಹರಿಯಾಣದ ಮತದಾರರನ್ನು ಉದ್ದೇಶಿಸಿ ಬಿ‌ಜೆ‌ಪಿಗೆ ಮತ ಕೊಡಲು ಬಹಿರಂಗ ಕರೆ ಕೊಡುತ್ತಾನೆ ಹಾಗೂ ಮಹಿಳೆಯರು ಅದನ್ನು ಪಾಲಿಸುತ್ತಾರೆ.  ಭಕ್ತರ ಈ ಮೂಢ ವರ್ತನೆಯನ್ನು ಮನೋವಿಜ್ಞಾನಿಗಳು ಹೇಗೆ ವಿಶ್ಲೇಷಿಸುತ್ತಾರೆ?

ಘೋರ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಯಾಗಿ ಹಲವಾರು ವರ್ಷಗಳಿಂದ ಜೈಲಿನಲ್ಲಿ ಇರುವ ಬಾಬಾ ಸ್ವಾಮಿ ದೇವಮಾನವರುಗಳ ಶಿಷ್ಯವೃಂದ ಕಡಿಮೆಯೇ ಆಗುವುದಿಲ್ಲ ಯಾಕೆ?  ಉದಾ: ಅಸಾರಾಂ ಬಾಪು ಹನ್ನೊಂದು ವರ್ಷಗಳಿಂದ ಜೈಲಿನಲ್ಲಿ ಇದ್ದರೂ ಅವರ ಶಿಷ್ಯರು ಈ ಅಪರಾಧಿ ದೇವಮಾನವರ ದೊಡ್ಡ ಫೋಟೋವನ್ನು ಅವರ ಆಶ್ರಮದಲ್ಲಿ ಬಾಬಾನ ಖಾಲಿ ಆಸನದಲ್ಲಿ ಇಟ್ಟು ದಿನಾಲೂ ಪೂಜೆ ಭಜನೆ ಮಾಡುತ್ತಿದ್ದಾರೆ.  ಈ ಪೂಜೆ ಭಜನೆಗೆ ಬರುವವರಲ್ಲಿ ಹೆಚ್ಚಿನವರು ಮಧ್ಯ ವಯಸ್ಸಿನ ಹೆಂಗಸರು. ಅಂದರೆ ಇವರ ಕುರುಡು ನಂಬಿಕೆ ಎಷ್ಟೆಂದರೆ ಸ್ವತಃ ಉಚ್ಚ ನ್ಯಾಯಾಲಯಗಳೇ ಈ ದೇವಮಾನವರ ಘೋರ ಅಪರಾಧಗಳ ವಿಚಾರಣೆ ನಡೆಸಿ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿಯೇ ಜೀವಾವಧಿ ಶಿಕ್ಷೆ ಕೊಟ್ಟಿದ್ದರೂ  ಈ ಕುರುಡು ಭಕ್ತರಿಗೆ ಉಚ್ಚ ನ್ಯಾಯಾಲಯಗಳ ತೀರ್ಪಿನಲ್ಲಿಯೇ ನಂಬಿಕೆ ಇಲ್ಲ.  ಅದೂ ಈ ಬಾಬಾಗಳಿಗೆ ಮಹಿಳೆಯರ ಲೈಂಗಿಕ ಶೋಷಣೆಗಾಗಿಯೇ ಶಿಕ್ಷೆಯಾಗಿದ್ದರೂ, ಈಗಲೂ ಮೂಢಭಕ್ತ  ಹೆಂಗಸರು ಆ ಅತ್ಯಾಚಾರಿ ದೇವಮಾನವರ, ಬಾಬಾಗಳ, ಸ್ವಾಮೀಜಿಗಳ ಪಾವಿತ್ರ್ಯದಲ್ಲಿ ಅಚಲ ನಂಬಿಕೆ ಇಡುತ್ತಿದ್ದಾರೆ.

ಬಹಳಷ್ಟು ಹಿರಿಯ ವಯಸ್ಸಿನ ಗಂಡಸರಿಗೆ ಹಾಗೂ ಮಧ್ಯ ವಯಸ್ಸು ದಾಟಿದ ಹೆಂಗಸರ ತಲೆಯಲ್ಲಿ ಮೌಢ್ಯಗಳನ್ನು ಬಿತ್ತುವುದು ಸುಲಭ ಎಂಬುದು ನಿಜ.  ಈ ಗುಟ್ಟು ಗೊತ್ತಿರುವ ಮೋದಿಯವರೂ ಬಾಬಾ-ಗುರು-ಸ್ವಾಮೀಜಿಗಳಂತೆ ವೇಷ ಧರಿಸಿ  ಪ್ರಸಿದ್ಧ ದೇವಸ್ಥಾನಗಳಿಗೆ ಹೋಗಿ ಮಡಿ-ಶುದ್ಧಿಯಲ್ಲಿ ಇಲ್ಲದ ಫೋಟೋ ಗ್ರಾಫರ್ ಗಳೊಂದಿಗೆ ನೇರವಾಗಿ ಪವಿತ್ರ ಗರ್ಭಗುಡಿಯೊಳಗೆ ಹೊಕ್ಕು ತಾನು ಪೂಜೆ ಮಾಡುತ್ತಿರುವ ವಿಡಿಯೋ ಮಾಡಿಸಿ ಗೋದಿ ಮೀಡಿಯಾಗಳಲ್ಲಿ ಪ್ರಸಾರ ಮಾಡುತ್ತಾರೆ.  ದ್ವಾರಕೆಯಲ್ಲಿ ನವಿಲು ಗರಿಯೊಂದಿಗೆ ಸ್ಕೂಬಾ ಡೈವಿಂಗ್ ಸಹಾ ಮಾಡಿದ್ದಾರೆ. ಹಾಗಾಗಿ ಬಾಬಾ-ದೇವಮಾನವ-ಗುರೂಜಿಗಳಿಗೆ ಅತ್ಯಂತ ನಿಷ್ಠ ಕುರುಡು ಭಕ್ತರು ಇರುವಂತೆ ತನಗೂ ಮೌಢ್ಯ ಭರಿತ ಮಹಿಳಾ ಮತದಾರರು ಹಾಗೂ ಹಿರಿಯರಿಂದ ವೋಟು ಸಿಗುತ್ತಲೇ ಇರುತ್ತದೆ ಎಂಬ ಗಟ್ಟಿ ನಂಬಿಕೆ ಮೋದೀಜಿಗೆ ಇದೆ.  ಅದಕ್ಕಾಗಿಯೇ ಅರ್ಧ ಕಟ್ಟಿದ ರಾಮ ಮಂದಿರದಲ್ಲಿ ಹಿಂದೂ ಆಗಮ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರಕ್ಕೆ ವಿರುದ್ಧವಾಗಿ ಪ್ರಾಣ ಪ್ರತಿಷ್ಠೆ ಮಾಡಿದ್ದು ಮೋದಿಜಿ.

ಯಾವುದೇ ದೇವಮಾನವನ ಹಿಂದೆ ಬಿಳಿ ಚರ್ಮದ ಯೂರೋಪಿಯನ್ ಭಕ್ತರು ಮಾತ್ರ ಯಾಕಿರುತ್ತಾರೆ ಗೊತ್ತೇ?  ತಮ್ಮ ಜತೆಗೆ ಬಿಳಿ ಚರ್ಮದ ವಿದೇಶಿ ಭಕ್ತರು ಇದ್ದರೆ ಮಾತ್ರ  ಮೂಲ ಭಾರತೀಯ ಭಕ್ತರಿಗೆ ಆ ದೇವಮಾನವನ ಶ್ರೇಷ್ಠತೆ ಕುರಿತು ನಂಬಿಕೆ ಹುಟ್ಟುತ್ತದೆ ಎಂಬ ಗುಟ್ಟು ಎಲ್ಲಾ ಭಾರತೀಯ ಬಾಬಾಗಳಿಗೆ ಗೊತ್ತಿದೆ.  ಹಾಗಾಗಿ ಭಾರತಕ್ಕಿಂತ ಹೆಚ್ಚು ಬಡತನ ಇರುವ ದಕ್ಷಿಣ ಅಮೆರಿಕಾದ ಬಿಳಿ ಚರ್ಮದ ನಿರುದ್ಯೋಗಿ ಯುವಕ ಯುವತಿಯರಿಗೆ ಭಾರಿ ಸಂಭಾವನೆ ಕೊಟ್ಟು ತಮ್ಮ ಭಕ್ತರಂತೆ ಗೆಟಪ್ ಮಾಡಿಸಿ ಭಾರತಕ್ಕೆ ಕರೆತರುತ್ತಾರೆ ಹೆಚ್ಚಿನ ಕಪಟ ದೇವಮಾನವರು. 

ಇಲ್ಲಿ ಒಂದು ವಿಚಿತ್ರ ಗಮನಿಸಿ:  ಯಾವುದೇ ಭಾರತೀಯ ದೇವಮಾನವ-ಬಾಬಾನ ಜತೆ ಒಬ್ಬನೇ ಒಬ್ಬ ಕರಿಯ ವರ್ಣದ ಅಮೆರಿಕನ್, ಆಫ್ರಿಕನ್ ಭಕ್ತರನ್ನು ನೀವು ಎಂದಾದರೂ ನೋಡಿದ್ದೀರಾ?  ಅಥವಾ ಜಪಾನ್, ಕೊರಿಯಾ, ಥೈಲ್ಯಾಂಡಿನ ಸಣ್ಣ ಕಣ್ಣಿನ ಭಕ್ತರನ್ನು ನಮ್ಮ ದೇವಮಾನವರ ಜತೆ ಎಂದಾದರೂ ಕಂಡಿದ್ದೀರಾ? ಇಲ್ಲವಲ್ಲಾ!  ಯಾಕೆ?  ಯಾಕೆಂದರೆ ಮೌಢ್ಯ ಭರಿತ ಭಾರತೀಯ ಭಕ್ತರಿಗೆ ಬಿಳಿ ಚರ್ಮದ ಪಾಶ್ಚಿಮಾತ್ಯ ದೇಶದವರನ್ನು ಕಂಡರೆ ಅಪಾರ ಗೌರವ ಹಾಗೂ ಕರಿಯ ವರ್ಣದವರನ್ನು ಕಂಡರೆ ಉದಾಸೀನ.  ಹಾಗಾಗಿ ಈ ಬಿಳಿ ಚರ್ಮದ ಬಗೆಗೆ ಭಾರತೀಯರಲ್ಲಿರುವ ಗುಲಾಮೀ ಮಾನಸಿಕತೆ ಸರಿಯಾಗಿ ಗೊತ್ತಿರುವ ಹಿಂದೂ ದೇವಮಾನವರು  ಬಿಳಿ ಚರ್ಮದ ವಿದೇಶಿಗಳಿಗೆ ದೊಡ್ಡ ಸಂಭಾವನೆ ಕೊಟ್ಟು ಭಕ್ತರ ವೇಷದಲ್ಲಿ ತಮ್ಮ ಜತೆ ಸಾಕಿ ಇಟ್ಟುಕೊಂಡಿರುತ್ತಾರೆ.  ಸ್ಯಾಂಪಲ್ ಗಾಗಿಯೂ ಒಬ್ಬನೇ ಒಬ್ಬ ಕರಿವರ್ಣದ ನೀಗ್ರೋ ಭಕ್ತ-ಭಕ್ತೆ  ದೇವಮಾನವರ ಹಿಂದೆ ಇರುವುದಿಲ್ಲ.  ಬಹುಶ: ಮೋದಿಜಿಗೂ ಭಾರತೀಯರ ಈ ಬಿಳಿ ಚರ್ಮದ ಶ್ರೇಷ್ಟತೆಯ ವ್ಯಸನ ಗೊತ್ತಿದೆ.

2014 ಕ್ಕೆ ಮುಂಚೆ ಮೋದಿಯವರ ಮುಖದ ಚರ್ಮದ ಬಣ್ಣ ಹೇಗಿತ್ತು ಹಾಗೂ ಈಗ ಅವರ ಮುಖದ ಬಣ್ಣ ಹೇಗಿದೆ ಎಂಬುದನ್ನು  ಹಳೆಯ ವಿಡಿಯೋಗಳಲ್ಲಿ ಸರಿಯಾಗಿ ಎಲ್ಲರೂ ಗಮನಿಸಿ.  ಯಾವುದೇ ಗುಜರಾತಿಗೂ ಇರದ ಕೆಂಪು ವರ್ಣ ಮೋದಿಜಿಯ ಮುಖದಲ್ಲಿ ಹೇಗೆ ಬಂತು? ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆಯೇ? ಅಥವಾ ಲಕ್ಷಾಂತರ ವೆಚ್ಚದ ದುಬಾರಿ “ಡೈಮಂಡ್  ಫೆಷಿಯಲ್” ಅಥವಾ ಕಾರ್ಬನ್ ಫೆಷಿಯಲ್ ಆಗಾಗ ಮಾಡಿಸಿಕೊಳ್ಳುತ್ತಿದ್ದಾರೆಯೇ? ಈ ಎಲ್ಲ ಪ್ರಶ್ನೆ ನಿಮ್ಮ ಮನದಲ್ಲಿ ಬಂದರೆ ಅಚ್ಚರಿಯೇನೂ ಇಲ್ಲ. (ಡೈಮಂಡ್ ಫೇಶಿಯಲ್ & ಕಾರ್ಬನ್ ಫೇಶಿಯಲ್ ಅಂದರೇನು ಹಾಗೂ ಅವುಗಳ ದುಬಾರಿ ವೆಚ್ಚದ ಕುರಿತು ಗೂಗಲ್ ನೋಡಿ).  

ದೇವಮಾನವರು ವಿದೇಶಿ ಬಿಳಿ ಚರ್ಮದ ಪೇಡ್- ಭಕ್ತರನ್ನು ಇರಿಸಿಕೊಳ್ಳುವಂತೆ ಮೋದಿಜಿ ಆಗಾಗ ಬಾಲಿವುಡ್ಡಿನ ಹೀರೋ ಹೀರೋಯಿನ್ ಗಳನ್ನು ಕರೆಸಿ ತಮ್ಮ ಸುತ್ತ ಇರಿಸಿಕೊಂಡು ಫೋಟೋ ತೆಗೆಸಿ ಕೊಳ್ಳುತ್ತಾರೆ, ಅದರಂತೆ ದೇಶದ ಎಲ್ಲಾ ಭಾಗದ ಅಸಲಿ ಪೀಠಾಧೀಶರನ್ನು ವಿಮಾನದಲ್ಲಿ ಕರೆಸಿಕೊಂಡು ತಮ್ಮ ಸುತ್ತ ಇರಿಸಿಕೊಂಡು ಪೂಜೆ-ಯಜ್ಞ ಯಾಗದ ಪ್ರಹಸನ ಮಾಡಿ ವೀಡಿಯೋ ತೆಗೆಸಿ ಟಿವಿ ಗಳಲ್ಲಿ ಪ್ರಸಾರ ಮಾಡಿಸುತ್ತಾರೆ.  ಒಟ್ಟಾರೆ ಎಲ್ಲಾ ನಾಟಕಗಳೂ ಧಾರ್ಮಿಕ ಮೌಢ್ಯ ತುಂಬಿದ ಭಾರತೀಯ ಮತದಾರರ ಮನದಲ್ಲಿ ತಾನೊಬ್ಬ ಅವತಾರ ಪುರುಷ ಎಂಬ ಪರ್ಸೆಪ್ಶನ್‌ ಕ್ರಿಯೆಟ್ ಮಾಡಿ ಅವರ ವೋಟು ಪಡೆದು ಅಧಿಕಾರ ಅನುಭವಿಸುವುದಕ್ಕಾಗಿ.

ದಿವಂಗತ ನರಸಿಂಹ ರಾಯರು ಪ್ರಧಾನಿಯಾಗಿದ್ದಾಗಲೂ ಬೆಳಿಗ್ಗೆ ಒಂದು ಗಂಟೆ ಹಾಗೂ ಸಂಜೆ ಅರ್ಧ ಗಂಟೆ ಏಕಾಂತದಲ್ಲಿ ದೇವರ ಪೂಜೆ ತಪ್ಪದೆ ಮಾಡುತ್ತಿದ್ದರು, ಆದರೆ ಅದರ ಫೋಟೋ ಅವರು ಎಂದೂ ತೆಗೆಸಲಿಲ್ಲ. ನಮ್ಮ ದೇವೇಗೌಡರೂ ತುಂಬಾ ದೈವ ಭೀರು ವ್ಯಕ್ತಿ.  ಅವರೂ ಪ್ರಧಾನಿಯಾಗಿದ್ದಾಗ ದಿನಾಲೂ ಬೆಳಿಗ್ಗೆ ಮತ್ತು ಸಾಯಂಕಾಲ ತಪ್ಪದೆ ಒಂದೊಂದು ಗಂಟೆ ದೇವರ ಪೂಜೆ ಮಾಡುತ್ತಿದ್ದರು.  ಆದರೆ ಅವರೆಂದೂ ತಮ್ಮ ಪೂಜೆಯ ಫೋಟೋ ತೆಗೆಸಿ ಟಿ‌ವಿ ಅಥವಾ ಪತ್ರಿಕೆಗಳಲ್ಲಿ ಹಾಕಿಸಲಿಲ್ಲ. ಆದರೆ ಕೇವಲ ಮೋದಿಜಿ ಮಾತ್ರ ಯಾಕೆ ಇಷ್ಟೊಂದು ದೇವಸ್ಥಾನ ತಿರುಗಿ ಗರ್ಭಗುಡಿಯೊಳಗೆಯೇ ಫೋಟೋ ತೆಗೆಸಿ ಪತ್ರಿಕೆ ಹಾಗೂ ಟಿ‌ವಿ ಗಳಲ್ಲಿ ಹಾಕಿಸಿಕೊಳ್ಳುತ್ತಿದ್ದಾರೆ?

ಈ ಮಾನಸಿಕತೆಗೆ ಮನೋವಿಜ್ಞಾನಿಗಳು ಕೊಡುವ ವಿವರಣೆ ಏನೆಂದರೆ –“ಯಾರಿಗೆ ಅತಿ ಹೆಚ್ಚು ಪಾಪ ಪ್ರಜ್ಞೆ ಕಾಡುತ್ತಿರುತ್ತದೆಯೋ ಅವನೇ ಅತಿ ಹೆಚ್ಚು ದೇವರ ಭಕ್ತಿಯ ಬಹಿರಂಗ ಪ್ರದರ್ಶನ ಮಾಡುವುದು!”. ಹಾಗಾದರೆ ಗೋಧ್ರಾ  ಕಾಂಡಕ್ಕೆ ಅಥವಾ ಪುಲ್ವಾಮಾ ದುರಂತಕ್ಕೆ ತಾನು ನೇರ ಹೊಣೆ ಎಂಬ ಪಾಪ ಪ್ರಜ್ಞೆ ಮೋದೀಜಿಗೆ ಚುಚ್ಚುತ್ತಿದೆಯೇ?  ಅಥವಾ ಹರೇನ್ ಪಾಂಡ್ಯಾ ಮತ್ತು ಜಸ್ಟಿಸ್ ಲೋಯಾರ ಅನುಮಾನಾಸ್ಪದ ಸಾವು ಮೋದಿಜಿಯ ಆತ್ಮಸಾಕ್ಷಿಯನ್ನು ಕುಕ್ಕುತ್ತಿದೆಯೇ?  ಅಥವಾ ಅವರು ಸಾರ್ವಜನಿಕ ಸಭೆಯಲ್ಲಿ ಅನುದಿನ ಹೇಳುತ್ತಿರುವ ಹಸಿ ಸುಳ್ಳುಗಳು ನಿದ್ದೆಯಲ್ಲಿ ಕಾಡುತ್ತಿವೆಯೇ?  ಅಥವಾ 19 ನೇ ವಯಸ್ಸಿನಲ್ಲಿ ತನ್ನ ತಂದೆಯ ಮನೆಬಿಟ್ಟು ಓಡಿ ಹೋದ ಮೇಲೆ ಅವರು ಒಂದು ಗುಜರಾತಿ ನಾಟಕ ಕಂಪನಿಯಲ್ಲಿ ಒಂಬತ್ತು ವರ್ಷ ವಾದ್ಯಗಾರನಾಗಿ ಮತ್ತು ಜೂನಿಯರ್ ನಟನಾಗಿ ದುಡಿಯುತ್ತಿದ್ದಾಗ  ಅವರು ನಾಟಕದಲ್ಲಿ ತೋರಿಸಿದ (ನಕಲಿ) ಭಕ್ತಿರಸ, ಪೂಜಾ ಭಾವ, ಪ್ರಧಾನಿಯಾದ ಮೇಲೂ ಉಕ್ಕಿ ಹರಿಯುತ್ತಿದೆಯೇ? (ಅವರ ದೈಹಿಕ ಭಾಷೆ ಮತ್ತು ಮಾತಿನ ಏರಿಳಿತ ಈಗಲೂ ನಾಟಕೀಯವಾಗಿ ಇರಲು ಕಾರಣ ನಾಟಕ ಕಂಪನಿಯಲ್ಲಿಯ ಅವರ ಒಂಬತ್ತು ವರ್ಷದ ಜೀವನ!  ಗುಜರಾತಿ ನಾಟಕದಲ್ಲಿ ಅವರಿಗೆ ಶಿವಾಜಿಯ ಪಾತ್ರ ಬಹಳ ಇಷ್ಟವಾಗಿತ್ತು ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದರು).

ಮೋದಿಯವರಿಂದ ರಾಮಮಂದಿರ ಉದ್ಘಾಟನೆ

ಇವೆಲ್ಲವುಗಳಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ; ಮೋದಿಯವರ ಈಗಿನ ದೇವರ ಭಕ್ತಿಯೆಲ್ಲಾ ಕೇವಲ ಒಂದು ನಟನೆ. ಅದು ಧರ್ಮಭೀರು ಭಾವುಕ ಮುಗ್ಧ ಮಹಿಳಾ ಮತದಾರರ ಮೇಲೆ ಮಾನಸಿಕ ಪ್ರಭಾವ ಬೀರಿ ತಾನು ಒಬ್ಬ ಮಹಾ ದೈವಾಂಶ ಸಂಭೂತ ಎಂದು ಬಿಂಬಿಸುವುದಕ್ಕೋಸ್ಕರ ಮಾತ್ರ.  ನಾಸ್ತಿಕ ವ್ಯಕ್ತಿ ಮಾತ್ರ ತಾನೊಬ್ಬ ದೇವರ ಅವತಾರ ಎಂದು ಬಿಂಬಿಸಿಕೊಂಡು ದೇವರ ಹೆಸರಲ್ಲಿ ಇತರ ಧರ್ಮಭೀರು ಮುಗ್ಧ ಜನರಿಗೆ ಮೋಸ ಮಾಡುವುದು. ದೇವರನ್ನು ನಿಜವಾಗಿ ನಂಬುವವನು, ಬೇರೆಲ್ಲಾ ರೀತಿಯಲ್ಲಿ ಜನರನ್ನು ಮೋಸ ಮಾಡಬಹುದು. ಆದರೆ ದೇವರ ಹೆಸರಲ್ಲಿ ಯಾರಿಗೂ ಎಂದೂ ಮೋಸ ಮಾಡಲು ಧೈರ್ಯ ತೋರಿಸುವುದಿಲ್ಲ.  ಹಾಗಾಗಿ ನಕಲಿ ಬಾಬಾ- ಗುರೂಜಿ -ದೇವಮಾನವರೆಲ್ಲಾ ಮೂಲದಲ್ಲಿ ನಾಸ್ತಿಕರೆ ಆಗಿರುತ್ತಾರೆ. 

ಮೋದೀಜಿ ಚಿಕ್ಕಂದಿನಿಂದಲೂ ನಾಸ್ತಿಕರಾಗಿದ್ದರು ಎಂದು ಅವರಷ್ಟೇ ವಯಸ್ಸಾಗಿರುವ ಅವರ ಖಾಸಾ ಮಾವನ ಮಗ ಕಲ್ಪೇಶ್ ಭಾಟಿಯಾ ಮೋದಿ ಎಂಬವರು ಬಹಳ ಹಿಂದೆಯೇ ಹೇಳಿದ್ದರು. ಇಂತಹಾ ನಾಸ್ತಿಕ ವ್ಯಕ್ತಿ ಮಾತ್ರವೇ ನಾಲ್ಕೂ ಶಂಕರಾಚಾರ್ಯರ ವಿರೋಧದ ಹೊರತಾಗಿಯೂ ಅರ್ಧ ಕಟ್ಟಿದ ರಾಮ ಮಂದಿರದಲ್ಲಿ ಆಗಮ ಶಾಸ್ತ್ರಕ್ಕೆ ವಿರುದ್ಧವಾಗಿ ಶ್ರೀ ರಾಮನ ಪ್ರತಿಮೆಗೆ ಪ್ರಾಣ ಪ್ರತಿಷ್ಠೆ ಮಾಡಲು ಧಾರ್ಷ್ಟ್ಯ ತೋರಲು ಸಾಧ್ಯ. 

ಕೆಲವು ಧಾರ್ಮಿಕ ಪಂಡಿತರು ಹೇಳುವಂತೆ- ಮೋದಿಯವರು ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಮಾಡಿದ ಆನಂತರ ತಮ್ಮ ಜೀವನದ ಅತ್ಯಂತ ಕಷ್ಟಕರ ತಿರುವು ಎದುರಿಸುತ್ತಿದ್ದಾರೆ,  ಇಡೀ ಭಾರತವನ್ನೇ ನಡುಗಿಸಿರುವ ಚುನಾವಣಾ ಬಾಂಡ್ ಹಗರಣ,  ಅತ್ಯಂತ ಅವಮಾನಕರ ಚಂಡೀಗಢ ಮೇಯರ್ ಚುನಾವಣೆಯ ಅವ್ಯವಹಾರ,  ವಿದೇಶದಲ್ಲಿ 20 ಜನರ ಹತ್ಯೆಗೆ ಸುಪಾರಿ ಕೊಟ್ಟಿರುವ ಆರೋಪ,  ಗಾರ್ಡಿಯನ್ ಪತ್ರಿಕೆಯಲ್ಲಿ ನಮ್ಮ ದೇಶದ ಅತ್ಯುಚ್ಚ ವ್ಯಕ್ತಿಯ ಮೇಲೆ ಬಂದಿರುವುದು, ದೇಶದಲ್ಲಿ ಬಡತನ ಹೆಚ್ಚಿರುವ ಡೇಟಾ, ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದರ ಪುರಾವೆಗಳು  ಹೀಗೆ ಒಂದರ ಮೇಲೆ ಒಂದು ಘೋರ ಆರೋಪಗಳನ್ನು ಮೋದಿ ಸರಕಾರ ಎದುರಿಸುವಂತಾಗಿದೆ.  ಇವಕ್ಕೆಲ್ಲಾ ಕಾರಣ ಅರ್ಧ ಕಟ್ಟಿದ ರಾಮ ಮಂದಿರದಲ್ಲಿ ಶಾಸ್ತ್ರಕ್ಕೆ ವಿರುದ್ಧವಾಗಿ ಪ್ರಾಣ ಪ್ರತಿಷ್ಠೆ ಮಾಡಿ ಅಧರ್ಮ ಆಗಿರುವುದು. 

ಏನೇ ಆಗಲಿ ದೇವರನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ತಕ್ಕಂತೆ ಬಳಸಲು ಸಾಧ್ಯವಿಲ್ಲವಲ್ಲ!  ಕೊನೆಗೂ ಕರ್ಮಾ ರಿಟರ್ನ್ಸ್ !!

ಪ್ರವೀಣ್ ಎಸ್ ಶೆಟ್ಟಿ.

ಚಿಂತಕರು

ಇದನ್ನೂ ಓದಿ- ಸೂತಕದ ಸಮಯದಲಿ ಸಂಘಿಗಳ ರಾಜಕಾರಣ                      

More articles

Latest article