“ನಿನ್ ಉಪ್ಕಾರ ಸಾಕು.. ಮೊದ್ಲು ಇಲ್ಲಿಂದ ತೊಲಗೋಗು”

Most read

ಪಂಕಜಕ್ಕನ ಮಾತು ಕೇಳಿ ಹುಚ್ಚಿಯಂತಾದ ಗಂಗೆ, ಮೈ ಪರಿವೆ‌ಯನ್ನೆ ಕಳೆದುಕೊಂಡಳು. ಬೆನ್ನು ಬಿಡದ ಭೂತದಂತೆ ಮತ್ತೆ ಮತ್ತೆ ಬಂದು ಅಡರಿಕೊಳ್ಳುತ್ತಿದ್ದ ಹತಾಶೆಗೆ ಸವಾಲನ್ನೆಸೆದು ಎಸೆದು ಅವಳಿಗೂ ಸಾಕಾಗಿ ಹೋಗಿತ್ತು. ಆಕಾಶಕ್ಕೆ ತಲೆ ಎತ್ತಿ ಕಾಣದ ದೇವರಿಗೆ ಹಿಡಿ ಶಾಪ ಹಾಕಿದಳು,ಕ್ಯಾಕರಿಸಿ ಉಗಿದಳು. ಅವಳ ಮನಸ್ಸು ಹಿಡಿತಕ್ಕೆ ಸಿಗದಾಯಿತು. ತನ್ನೆರಡು ಕೈಗಳಿಂದ ಕೂದಲನ್ನು ಕಿತ್ತುಕೊಳ್ಳುತ್ತಾ, ಎದೆ ಹೊಡೆದು ಚೂರಾಗುವಂತೆ ಬಡಿದುಕೊಳ್ಳುತ್ತಾ, ಬಿರುಗಾಳಿಯಂತೆ ಅಪ್ಪನ ಮನೆ ಎದುರು ಬಂದು ” ಅಯ್ಯೋ ಹಟ್ಕಾಳ್ರ ನನ್ನ ಜೀವ್ನಾನ ಮೂರಾ ಬಟ್ಟೆ ಮಾಡ್ಬುಟ್ರಲ್ಲೊ ನಾನೇನ್ ಅನ್ಯಾಯ ಮಾಡಿದ್ದೆ ನಿಮ್ಗೆ. ಮರಿಯಾದಿಲಿ ನನ್ನ ಹಸ ಕರ ತಂದು ವಪ್ಸಿದ್ರೆ ಸರಿ ಇಲ್ಲಂದ್ರೆ ಕತೆ ನೆಟ್ಗಿರಕಿಲ” ಎಂದು  ಚೀರಾಡ ತೊಡಗಿದಳು.

ಅಡುಗೆ ಮನೆಯ ಒಲೆ ಮುಂದೆ ತನ್ನ ಕಜ್ಜಿ ಗಾಯದ ಬೆನ್ನು ಕಾಯಿಸಿ ಕೊಳ್ಳುತ್ತಾ ಕೂತಿದ್ದ ಚಂದ್ರಹಾಸ, ಹೊರಗೆ ಗಂಗೆಯ ಸಿಡಿಲಿನಂತ ದನಿ ಕೇಳಿದ್ದೆ ತಡ ಕಟಕಟನೆ ಹಲ್ಲು ಕಡಿಯುತ್ತಾ ಒಲೆಯ ಮೂಲೆಯಲ್ಲಿದ್ದ ಸೌದೆ ಪಾಲೊಂದನ್ನು ಹಿಡಿದು ಹೊರ ಬಂದ.

ಊರ ಜನರ ನೋಟ ಇತ್ತ  ಹರಿಯುವುದರೊಳಗೆ  ಅವಳನ್ನು ಮನೆಯ ಒಳಗೆಳೆದುಕೊಂಡು ದಡಾರನೆ ಬಾಗಿಲಿಕ್ಕಿದ. ಗಂಗೆಯ ಕೂದಲು ಹಿಡಿದು ಗರಗರನೆ ತಿರುಗಿಸಿ ಒಂದು ಮೂಲೆಗೆ ನೂಕಿದ. ತರಗೆಲೆಯಂತೆ ಮುದುರಿ ಬಿದ್ದ ಅವಳ ಮೇಲೆ “ಬೋಸುಡಿ ಮುಂಡೆ ಬೀದಿಲಿ ನಿಂತು ರಂಪಾಟಮಾಡಿ ನಮ್ಮ ಮರ್ಯಾದಿ ಹರಾಜಾಕ್ತಿಯೆನೇ..” ಎನ್ನುತ್ತಾ ಕೈಲಿಡಿದ  ಸೌದೆ ಪಾಲನ್ನು  ಬೀಸಿ ಒಗೆದ. ತಲೆಬುರುಡೆ ಹೊಡೆದು ಹೋಗಬೇಕಿದ್ದ  ಏಟಿನಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡು ಮೈ ಕೊಡವಿ ನಿಂತಳು ಗಂಗೆ. ಚುರುಗುಟ್ಟುತ್ತಿದ್ದ ತನ್ನ ತಲೆ ಕಟ್ಟಿಕೊಂಡು ಮೇಲೆದ್ದವಳು, ದ್ವೇಷದಿಂದ ಕೆಂಡಕಾರುತ್ತಿದ್ದ ಅವನ ಕಣ್ಣಗುಡ್ಡೆಯನ್ನೆ ದಿಟ್ಟಿಸಿ ನೋಡುತ್ತ” ಜೀವ್ಮಾನ ಪೂರ್ತಿ ನಿಮ್ತವ ಅನ್ನುಸ್ಕೊಂಡು, ಆಡುಸ್ಕೊಂಡು, ಒದ್ದುಸ್ಕೊಂಡು ಸವ್ದಿದ್ದೆ ಆಯ್ತು. ಇವತ್ತು ನಾನು ಸುಮ್ನಿರ ಮಗ್ಳಲ್ಲ ನಿಂಗೊಂದು ಗತಿ ಕಾಣ್ಸೆ ತೀರ್ತಿನಿ ಶಂಡ್ನನ್ಮಗನೆ” ಎನ್ನುತ್ತಾ ಚಂಗನೆ ಹಾರಿ ಅವನ ಕಣ್ಣಗುಡ್ಡೆಗೆ ಕೈ ಹಾಕಿ ಕಿತ್ತಳು.  

ಬೆಂಕಿ ಇಟ್ಟಂತೆ ಉರಿದ ಅವನ ಕಣ್ಣಿನಿಂದ ನೀರು ಬಳ ಬಳನೆ ಸುರಿಯತೊಡಗಿತು. ಅವನ ಪೌರುಷ ರೊಚ್ಚಿಗೆದ್ದು  ಬಿದ್ದಿದ್ದ ಸೌದೆಯ ತುಂಡು‌ ಅವಳ ಮೈಯನ್ನೆಲ್ಲ ಜಜ್ಜಿ ಹೈರಾಣ ಮಾಡಿತು. ಚಂದ್ರಹಾಸನ ಕಾಲ ಕೆಳಗೆ ವಿಲವಿಲ ಒದ್ದಾಡುತ್ತಿದ್ದ ಗಂಗೆಯನ್ನು, ಮನೆಯಲ್ಲಿದ್ದ ಅವ್ವ, ಯಶೋಧೆ, ಶಂಕರ, ಗಿರಿಧರ, ನಂಜಪ್ಪ ಯಾರು ಬಿಡಿಸಿ ಕೊಳ್ಳದಾದರು..ಗಂಗೆಯ ಮೂಗಿನ ಹೊಳ್ಳೆ ಹೊಡೆದು ಚಿಳ್ಳನೆ ರಕ್ತ ಚಿಮ್ಮಿದ್ದೆ ತಡ,  ರಕ್ತ ಕಂಡರೆ ತಲೆ ಸುತ್ತು ಬಂದು ಬವಳಿ ಬೀಳುತ್ತಿದ್ದ  ಚಂದ್ರಹಾಸ, ತಟ್ಟನೆ ತನ್ನ ಕೈಲಿದ್ದ ಸೌದೆಯ ತುಂಡನ್ನೆಸೆದು ದಡಬಡನೆ ಅಗುಳಿ ತೆಗೆದು ಹೊರಗೋಡಿದ.

ಬೀದಿಯಲ್ಲಿ ಜನ ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡ ಗಿರಿಧರ, ನಂಜಪ್ಪ ತಡ ಮಾಡದೆ ಗಂಗೆಯನ್ನೆತ್ತಿ ತಂದು ಅವಳ ಮನೆಯಲ್ಲಿ ಮಲಗಿಸಿ ಹೊರಟು ಹೋದರು. ದುಃಖದ ಕಟ್ಟೆಯೊಡೆದು ಕೂತ ಸಾಕವ್ವ ಕಣ್ಣು ಮೂಗಲ್ಲಿ ನೀರು ತಂದುಕೊಂಡು “ಇದ್ನೆಲ್ಲ ನೋಡ್ಬೇಕು ಅಂತ್ಲೆ ನನ್ನ ಇನ್ನೂ ಬದುಕ್ಸಿದ್ಯೇನೋ  ಭಗವಂತ” ಎಂದು ಹಲುಬಿಕೊಳ್ಳುತ್ತಲೆ ವಾರಗಳ ಕಾಲ ಅಪ್ಪಜ್ಜಣ್ಣ, ಗಂಗೆ, ಮತ್ತು ಮಕ್ಕಳ ಆರೈಕೆಗಿಳಿದಳು…

ಗಂಡು ಮಕ್ಕಳ ಕಡುಮೋಹಿ ಸಾಕವ್ವ, ಗಂಗೆ ಪೊಲೀಸಿನವರಿಗೆ ದೂರು ಕೊಡುವ ಮಾತಾಡಿದಾಗಲೆಲ್ಲ “ಕಳ್ಳು ಬಳ್ಳಿ ಸಂಬಂಧ ಅನ್ನದು ಸುಮ್ನಾದದವ್ವ, ಏನಾದ್ರು ನಿನ್ ಬೆನ್ನಿಗೆ ಹುಟ್ಟಿದೋರುನ್ನ ಹಂಗೆ ಬುಟ್ಕೊಡೊ ಮಾತಾಡ್ಬಾರ್ದು ಕನೆ. ಒಂದ್ಸರಿ ಅವರ ಹೆಂಡ್ತಿ ಮಕ್ಳು ಮಖ ನೋಡು” ಎಂದು ಕಣ್ಣೀರು ಜಿನುಗಿಸುತ್ತಾ ಭಾವನಾತ್ಮಕವಾಗಿ ಗಂಗೆಯನ್ನು ಕಟ್ಟಿ ಹಾಕಿ, ಅವಳು ದೂರಿನ ಮಾತನ್ನೆ ಮರೆಯುವಂತೆ ಮಾಡಿದಳು.

ಬದಲಾಗಿ  ದಿನವೂ ಗಂಗೆಯ ಬಗ್ಗೆಯೆ  ಕೊಂಕಾಡುತ್ತಾ. “ಇನ್ನೂ ನಿನ್ನ ಗಂಡ್ಬೀರಿ ಆಟ ಬುಡ್ಲಿಲ್ವಲ್ಲೇ, ಗಂಡೈಕ್ಲು ತವ ಕಾಲ್ಕೆರ್ದು ನಿಂತ್ರೆ ಸುಮ್ನೆ ಬುಟ್ಟಾರೆನೆ , ಇಷ್ಟು ವಯಸ್ಸಾದ್ರೂ ನಿಂಗೆ ಬುದ್ಧಿ ಅನ್ನದು ಬರ್ಲೆ ಇಲ್ಲ ನೋಡು” ಎನ್ನುತ್ತಾ ಅವಳ  ಮೇಲೆ ಆರೋಪಗಳ ಸುರಿಮಳೆಯನ್ನೇ ಗೈದು, ಇರುವ ಮೈ ಮನಸ್ಸುಗಳ ನೋವಿಗೆ ಮತ್ತಷ್ಟು ಉಪ್ಪು ಸುರಿದು ರಣಮಾಡಿ, ಗಂಗೆಯ ಎದೆಯಲ್ಲಿ ಜ್ವಾಲಾಮುಖಿ ಏಳುವಂತೆ ಮಾಡುತ್ತಿದ್ದಳು. ಒಂಟಿ ಹಾದಿಯ ಎಡರು ತೊಡರುಗಳಲ್ಲಿ ತೊನೆದಾಡುತ್ತಾ ಗುಟುಕು ಜೀವ ಉಳಿಸಿಕೊಳ್ಳಲು, ತನ್ನೊಡಲ ಕುಡಿಗಳಿಗೆ  ಚಂದದ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ  ಗಂಗೆಗೆ, ಅವ್ವನ ಈ ಮಾತುಗಳು ಅಸಹನೀಯವಾಗಿದ್ದವು. ಒಂದು ದಿನ ಅವ್ವನ ವಿರುದ್ಧ ಸಿಡಿದು ನಿಂತ ಗಂಗೆ ” ನೀನು ಹಿಂಗಾಗಿದ್ರಿಂದ್ಲೆಯ ಆ  ಬೆವರ್ಸಿಗಳು ಕೆಟ್ಟು ಕೆರ ಹಿಡ್ದೋಗಿರದು. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆವರ್ದು ನನ್ನ ಬದುಕುನ್ನೆ ಹಾಳ್ಮಾಡ್ದೆ ಇಲ್ಲಿಗಂಟ ನೀನ್ ಮಾಡಿದ್ ಉಪ್ಕಾರ ಸಾಕು ಮೊದ್ಲು ಇಲ್ಲಿಂದ ತೊಲಗೋಗು” ಎಂದು ನಿಷ್ಠುರವಾಗಿ ಹೇಳಿ ಅ‌ವ್ವನನ್ನು ತನ್ನ ಮೊನಚು ಮಾತುಗಳಿಂದ ಸದೆ ಬಡಿದು ವಾಪಾಸು ಕಳುಹಿಸಿದಳು.

70 ನೆಯ ಕಂತು ಓದಿದ್ದೀರಾ? ʼಈ ಹೈಕ್ಳು ತಿಕೆಲ್ಲ ಕೊಬ್ಮಾಡ್ತವಲ್ಲೊ ಶಿವ್ನೆ..ʼ

ಹಾಗೂ ಹೀಗೂ ತಿಂಗಳ ಕಾಲ ಅಪ್ಪಜ್ಜಣ್ಣ, ಗಂಗೆ ಒಬ್ಬರಿಗೊಬ್ಬರು ಇಂಬಾಗಿ ನಿಂತು ಸುಧಾರಿಸಿಕೊಂಡು ಮೇಲೆದ್ದರು. ಜೇನುಕಲ್ಲು ಮಂಟಿಯಲ್ಲಿ ಬಿದ್ದ ಏಟಿನಿಂದ ಅಪ್ಪಜ್ಜಣ್ಣನ ಒಂದು ಕಾಲು ಸುಧಾರಿಸಲೇ ಇಲ್ಲ. ಸುಮ್ಮನೆ ಕೂರಲಾರದ ಅವನು ಗಂಗೆಯ ಬಳಿ ಅದನ್ನು ತೋರಿಸಿಕೊಳ್ಳದೆ, ಆ ಕಾಲನ್ನೆ ಎಳೆದಾಡಿಕೊಂಡು ಹೊಲಗದ್ದೆಗಿಳಿದು ಗೆಯ್ಯತೊಡಗಿದ. ಆದರೆ ಹೆಚ್ಚು ಹೊತ್ತು ನಿಲ್ಲಲು ಬಿಡದ ಕಾಲುನೋವು ಅವ‌ನನ್ನು ಮತ್ತೆ ಮತ್ತೆ ಮನೆಗೆಳೆದು ತರುತ್ತಿತ್ತು. ಕೈ ತುಂಬಾ ಸಂಪಾದನೆಯೂ ಇಲ್ಲದೆ, ಇತ್ತ ಗಂಗೆಯ ಸಂಕಷ್ಟಕ್ಕೆ ಜೊತೆಯಾಗಿ ನಿಲ್ಲಲೂ ಆಗದೆ  ಪರದಾಡುತ್ತಿದ್ದವನಿಗೆ, ತಾನು ಗಂಗೆಗೆ ಹೊರೆಯಾಗುತ್ತಿದ್ದೇನೆ ಅನ್ನಿಸ ತೊಡಗಿತ್ತು. ಹಾಗನ್ನಿಸಿದ್ದೆ ಒಂದು ದಿನ ಇದ್ದಕ್ಕಿದ್ದಂತೆ ಯಾರ ಗಮನಕ್ಕೂ ಬಾರದಂತೆ ತನ್ನ ಬಟ್ಟೆ ಬರೆಗಳ ಗಂಟಿನೊಂದಿಗೆ ಕಣ್ಮರೆಯಾದನು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article