ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ

Most read

ಬೆಂಗಳೂರು: ಬಿಜೆಪಿ ಮುಖಂಡ, ಕಲ್ಬುರ್ಗಿ ಭಾಗದ ಪ್ರಭಾವಿ ನಾಯಕ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಕೆ.ಎನ್ ರಾಜಣ್ಣ ಸಮ್ಮುಖದಲ್ಲಿ ಮಾಲೀಕಯ್ಯ ಗುತ್ತೇದಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಗೋವಿಂದರಾಜು, ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಭಾಗಿಯಾಗಿದ್ದರು.

ಸಹೋದರ ನಿತಿನ್ ಗುತ್ತೇದಾರ್ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದರು. ನಂತರ ಬೆಂಬಲಿಗರ ಸಭೆ ನಡೆಸಿದ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ನಿರ್ಧಾರ ಕೈಗೊಂಡಿದ್ದರು.

ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಬಹಳ ವರ್ಷಗಳಿಂದ ಮಾಲೀಕಯ್ಯ ನಮ್ಮ ಜೊತೆ ಇದ್ದರು. ಮಧ್ಯದಲ್ಲಿ ಬಿಜೆಪಿಗೆ ಹೋಗಿದ್ರು. ಬಿಜೆಪಿಯಲ್ಲಿ ಭವಿಷ್ಯ ಇಲ್ಲ ಎನ್ನುವುದು ಗೊತ್ತಾದ ಬಳಿಕ ಮಾಲೀಕಯ್ಯ ಗುತ್ತೇದಾರ್ ಪಕ್ಷಕ್ಕೆ ಬರ್ತಿದ್ದಾರೆ. 30-40 ವರ್ಷಗಳಿಂದ ನಮ್ಮ ಒಡನಾಟ ಇದೆ. ಸಿಎಂ ಜೊತೆಯೂ ಒಳ್ಳೆಯ ಒಡನಾಟ ಇದೆ, ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಯಾವುದೇ ಬೇಡಿಕೆ ಇಡದೆ. ಹಿಂದೆ ಏನೇ ಆಗಿದ್ರು ಮರೆತು ಒಟ್ಟಾಗಿ ಕೆಲಸ ಮಾಡೋಣ. ಗುತ್ತೇದಾರ್ ಜೊತೆ ಹಲವು ನಾಯಕರು ಪಕ್ಷ ಸೇರ್ಪಡೆ ಆಗುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಒಬ್ಬರಾದ ಮೇಲೊಬ್ಬರಂತೆ ಸರಣಿಯಾಗಿ ಬಿಜೆಪಿ, ಜೆಡಿಎಸ್ ನಾಯಕರು ಬಿಟ್ಟು ಬರ್ತಿದ್ದಾರೆ. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಇದೆ. ಜನರಿಗೆ ಒಳ್ಳೆ ಸರ್ಕಾರ ಕೊಟ್ಡಿದ್ದಾರೆ ಎಂಬ ಭಾವನೆಯಿಂದ ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಬಿಜೆಪಿಗೆ ಧ್ವನಿಯಿಲ್ಲ ಎಂಬುದು ಗೊತ್ತಾಗಿದೆ. ಯಾರೇ ಪಕ್ಷಕ್ಕೆ ಬರೋದಾದ್ರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ರಾಜ್ಯದ ನಾಯಕರಿಗೆ ಕರೆ ಕೊಟ್ಟ ಡಿಕೆಶಿ ಪಕ್ಷದ ಬಾಗಿಲು ತೆರೆದೇ ಇರುತ್ತದೆ ಎಂದು ಹೇಳಿದರು.

ಹರ್ಯಾಣದಲ್ಲಿ ಬಿಜೆಪಿಯ ಹಾಲಿ ಲೋಕಸಭಾ ಸದಸ್ಯರೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದ ಅವರು ಬಿಜೆಪಿಯ 400+ ಗುರಿ ದೊಡ್ಡ ಭ್ರಮೆ. ದೇಶದಲ್ಲಿ ಬಿಜೆಪಿಗೆ 200 ಸೀಟುಗಳೂ ಬರುವುದಿಲ್ಲ. ಕರ್ನಾಟಕದಲ್ಲಿ 20 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ದಕ್ಷಿಣ ಭಾಗದಲ್ಲಿ ಬಿಜೆಪಿ ಎರಡಂಕಿ ದಾಟುವುದಿಲ್ಲ ಎಂದು ಅವರು ಹೇಳಿದರು.

More articles

Latest article