ಕೇಜ್ರಿವಾಲ್ ಮಾವಿನ ಹಣ್ಣು, ಸ್ವೀಟ್ಸ್ ತಿಂದು ಡಯಾಬಿಟಿಸ್‌ ಹೆಚ್ಚಿಸಿಕೊಳ್ಳುತ್ತಿದ್ದಾರೆ, ಈ ಮೂಲಕ ಜಾಮೀನು ಪಡೆಯುವುದು ಅವರ ಉದ್ದೇಶ: ಇಡಿ ಆರೋಪ

Most read

ಹೊಸದಿಲ್ಲಿ: ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಮತ್ತು ಎಎಪಿ ಪಕ್ಷದ ಸರ್ವೋಚ್ಛ ನಾಯಕ ಅರವಿಂದ ಕೇಜ್ರಿವಾಲ್ ಮಾವಿನಹಣ್ಣುಗಳು, ಸಿಹಿ ಪದಾರ್ಥಗಳನ್ನು ಉದ್ದೇಶಪೂರ್ವಕವಾಗಿ ತಿನ್ನುತ್ತಿದ್ದಾರೆ. ಸಕ್ಕರೆ ಹಾಕಿದ ಟೀ ಕುಡಿಯುತ್ತಿದ್ದಾರೆ. ಇದರ ಮೂಲಕ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಅವರ ಉದ್ದೇಶ. ನಂತರ ಅನಾರೋಗ್ಯದ ಕಾರಣವೊಡ್ಡಿ ಜಾಮೀನು ಪಡೆಯುವುದು ಅವರ ಗುರಿ ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದೆ.

ತಮಗೆ ಪ್ರತಿನಿತ್ಯ ಶುಗರ್‌ ಟೆಸ್ಟ್‌ ಮಾಡಿಸಬೇಕು ಮತ್ತು ತಮ್ಮ ಖಾಸಗಿ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಕೋರಿ ಅರವಿಂದ ಕೇಜ್ರಿವಾಲ್‌ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ನ್ಯಾಯಾಲಯದಲ್ಲಿ ಇಡಿ ತನ್ನ ಹೇಳಿಕೆ ದಾಖಲಿಸಿತು.

ಇಡಿ ಪರ ವಕೀಲ ಜೊಹೇಬ್‌ ಹುಸೇನ್, ʻಇವತ್ತು ಕೇಜ್ರಿವಾಲ್‌ ಅವರು ನ್ಯಾಯಾಂಗದ ಕಸ್ಟಡಿಯಲ್ಲಿದ್ದಾರೆ. ನಾವು ದಾಖಲಿಸಿರುವ ಪ್ರಕರಣದಿಂದ ಅವರು ಜೈಲಿನಲ್ಲಿದ್ದಾರೆ. ಅವರಿಗೆ ಮನೆಯಿಂದ ಊಟ ತರಿಸಿಕೊಳ್ಳಲು ನಾವು ಯಾಕೆ ಒಪ್ಪಿದ್ದೇವೆಂದರೆ ಡಯಾಬಿಟಿಕ್‌ ಆಗಿರುವ ಅವರ ಆರೋಗ್ಯದ ದೃಷ್ಟಿಯಿಂದ. ಆದರೆ ಅವರು ಮಾವಿನ ಹಣ್ಣುಗಳನ್ನು ತಿನ್ನುತ್ತಿದ್ದಾರೆ. ಸಿಹಿ ಪದಾರ್ಥಗಳನ್ನು ತಿನ್ನುತ್ತಿದ್ದಾರೆ. ಸಕ್ಕರೆ ಹಾಕಿ ಟೀ ಕುಡಿಯುತ್ತಿದ್ದಾರೆ. ಜಾಮೀನು ಪಡೆಯಲು ಅರ್ಹತೆ ಪಡೆಯಲು ಅವರು ಹೀಗೆಲ್ಲ ಮಾಡುತ್ತಿದ್ದಾರೆʼ ಎಂದು ಆರೋಪಿಸಿದರು.

ಕೇಜ್ರಿವಾಲ್‌ ಅವರ ಡಯಟ್‌ ಮತ್ತು ಔಷಧ ಸೇವನೆ ಕುರಿತು ತಿಹಾರ್‌ ಜೈಲು ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಇಡಿ ಪರ ವಕೀಲರ ಪ್ರತಿಪಾದನೆಯನ್ನು ತೀವ್ರವಾಗಿ ವಿರೋಧಿಸಿದ ಕೇಜ್ರಿವಾಲ್‌ ಪರ ವಕೀಲ ವಿವೇಕ್‌ ಜೈನ್, ಇಡಿ ಸಂಸ್ಥೆ ಮೀಡಿಯಾಗಳಿಗಾಗಿ ಇಂಥ ಆರೋಪಗಳನ್ನು ಮಾಡುತ್ತಿದೆ ಎಂದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ಬಂಧಿತರಾಗಿ ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

More articles

Latest article