ಕೊಚ್ಚೆಯಲ್ಲಿ  ಮೀನು ಹಿಡಿಯೋದು..

Most read

ಪಶ್ಚಿಮ ಬಂಗಾಳದ ಬ್ರಾಹ್ಮಣ ಸಮುದಾಯದಲ್ಲಿ ಮೀನಿನ ಖಾದ್ಯ ಸೇವನೆ ತೀರಾ ಸಾಮಾನ್ಯ. ಮೀನು ಕೇವಲ ಒಂದು ಆಹಾರವಷ್ಟೇ ಹೊರತು ಮೈಲಿಗೆ ಅಲ್ಲ. ಸಸ್ಯಾಹಾರಿ ಮಾಂಸಾಹಾರಿ ಎಂದೆಣಿಸದೇ ಹೃದಯ ಸಂಬಂಧಿ ರೋಗಿಗಳಿಗೆ ನೀಡುವ ಕಾಡ್ ಲಿವರ್ ಆಯಿಲ್ ಮಾತ್ರೆ ಪಕ್ಕಾ ಮೀನಿನದೇ ಉತ್ಪನ್ನ. ಇದನ್ನು ಸೇವಿಸುವಾತ ಯಾವತ್ತಾದರೂ ಶ್ರಾವಣ, ವಸಂತ, ಶಿಶಿರಗಳನ್ನು ಯಾವತ್ತಾದರೂ ಲೆಕ್ಕಹಾಕಿದ್ದಾನೆಯೇ? _ ಶಂಕರ್‌ ಸೂರ್ನಳ್ಳಿ

ಭಾರತದ ಸಾವಿರಾರು ರಾಜಕಾರಣಿಗಳ ಮಧ್ಯೆ ತಮ್ಮ ವಿಶಿಷ್ಟ ಮ್ಯಾನರಿಸಮ್ ಗಳ ಕಾರಣ ಬಿಹಾರದ ಮಾಜಿ ಮುಖ್ಯ ಮಂತ್ರಿ ಲಾಲೂ ಪ್ರಸಾದ್ ಯಾದವ್ ರವರು ಭಾರತದ ಒಳಗೆ ಹಾಗು ಹೊರಗೂ ಕೂಡ ಖ್ಯಾತರು. ಅವರೊಮ್ಮೆ ಪಾಕ್ ಭೇಟಿ ನೀಡಿದ್ದಾಗ ಅಲ್ಲಿನ ಜನ ಅವರನ್ನ ಮುತ್ತಿಕೊಂಡಿದ್ದರು. ಯಾರು ನೋಡ್ತಾರೆ ಏನು ಹೇಳ್ತಾರೆ ಎನ್ನುವ ಬಗ್ಗೆ ತೀರಾ ತಲೆ ಕೆಡಿಸಿಕೊಳ್ಳದೇ ಗ್ರಾಮ್ಯ ಭಾಷೆಯಲ್ಲಿ ತಮ್ಮದೇ ಶೈಲಿಯಲ್ಲಿ ಜವಾಬು ನೀಡುವ ಲಾಲೂ ಪ್ರಸಾದ್ ರವರು ಹಿಂದೆ ರಾಜಕಾರಣಿಗಳಲ್ಲೇ ಸೆಲೆಬ್ರಿಟಿ ತರಹ ವಿಶೇಷವಾಗಿ ಮಿಂಚಿದ್ದರು. ಈ ಬಗ್ಗೆ ಅವರೇ ಒಮ್ಮೆ “ಜಬ್ ತಕ್ ಸಮೋಸಾ ಮೆ ಹೈ ಆಲೂ.. ತಬ್ ತಕ್ ರಹೇಗಾ ಲಾಲೂ..” ಎಂದು ತಮ್ಮ ಬಗ್ಗೆಯೇ ಹೇಳಿಕೊಂಡಿದ್ದರು. ಲಾಲೂ ಅವರ ಹಾಸ್ಯ ಪ್ರಜ್ಞೆ ಅವರ ಮಕ್ಕಳಲ್ಲೂ ಬಂದಿದೆಯೋ ಗೊತ್ತಿಲ್ಲ. ಬಂದಿದ್ದರೂ ಕೂಡ ಅದು ಲಾಲೂ ಅವರಷ್ಟಂತೂ ಖಂಡಿತಾ ಇದ್ದಿರಲಾರದು.

This image has an empty alt attribute; its file name is rajnath-singh-slams-tejashwi-yadavs-recent-video-on-eating-fish-109288632.webp
ತೇಜಸ್ವಿ ಯಾದವ್

ಆದರೂ, ಮೊನ್ನೆ ಲಾಲೂ ಪ್ರಸಾದರ ಪುತ್ರ ತೇಜಸ್ವಿ ಯಾದವ್ ಅವರು ಸ್ಪಷ್ಟವಾಗಿ ಈ ಎಲೆಕ್ಷನ್ ಪ್ರಚಾರದ ಗೌಜಲ್ಲಿ ನಮಗೆ ಊಟ ಮಾಡಲೂ ಕೂಡ ಟೈಮಿಲ್ಲ ಎಂಬುದನ್ನು ಜಾಲತಾಣದ ಮೂಲಕ ಹೇಳಿಕೊಳ್ಳಲು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಈ ಹತ್ತು ಹದಿನೈದು ನಿಮಿಷವಷ್ಟೇ ಇದಕ್ಕೆ ಸಿಗುವ ಸಮಯ ಎಂದು ತೋರಿಸಿದ್ದು ಸುದ್ದಿಯಾಗಿತ್ತು. ಈ ವೇಳೆಯಲ್ಲಿ ಅವರು ತಮ್ಮ ಊಟವನ್ನು ವಿವರಿಸುವಾಗ ತಟ್ಟೆಯಲ್ಲಿದ್ದ ಊಟದ ಐಟಂ ತೋರಿಸಿ ಅದರಲ್ಲಿದ್ದ ಮೀನನ್ನು ಹಾಗು ತಾನು ಆಗ ತಾನೇ ತಿಂದು ಹಾಕಿದ ಮೀನು ಮುಳ್ಳನ್ನು ಹಿಡಿದು ಇದು ಆ ಜಾತಿಯ ಮೀನಿನ ಹಾಗೆ ಎಂದಂತಹ ವಿಚಾರವೇ ಕೆಲವರ ಗಂಟಲಲ್ಲಿ ಮೀನಿನ ಮುಳ್ಳು ಸಿಕ್ಕಂತಹ ಅನುಭವನ್ನು ತರಿಸಿದ್ದು ವಿಶೇಷ. ಅಂದರೆ, ಮೀನು ತಿಂದದ್ದು ಯಾರೋ ಗಂಟಲಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡದ್ದು ಮಾತ್ರ ಇನ್ಯಾರಿಗೋ..

ಭಾವನಾತ್ಮಕ ವಿಚಾರವನ್ನು ಕೆದಕಿ ಅದರಿಂದ ಏನಾದರೂ ಗಿಟ್ಟಬಹುದಾ ಎಂದು ನೋಡುವ ತಂತ್ರ ಇದು ಎಂಬುದರಲ್ಲಿ ಅನುಮಾನವಿಲ್ಲ. ಸಹಜ ಹಸಿವು ನೀಗಲು ಯಾರೋ ತಿಂದ ಹಾಗು ತಿನ್ನುವ ಆಹಾರವನ್ನೇ ಸೀದಾ ಓಟಿನ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಇಂತಹ ತಂತ್ರಕ್ಕೆ ಬೇರೆ ಸಾಟಿಯೇ ಇದೆಯೇ!? ಇದೇ ದಾಟಿಯಲ್ಲಿ ರಾಹುಲ್ ಗಾಂಧಿ ಯಾವತ್ತೋ ನವರಾತ್ರಿ ಸಮಯದಲ್ಲಿ ಕುರಿ ತಿಂದ ವಿಚಾರವೂ ಪ್ರಸ್ತಾಪಿಸಲ್ಪಟ್ಟಿತು. ಅಂದಹಾಗೆ, ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡ ಬೇಕಾದಂತವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದಂತವರು ಯಾರೋ ಶ್ರಾವಣದಲ್ಲಿ ಕೋಳಿ ತಿಂದರು, ನವರಾತ್ರಿಯಲ್ಲಿ ಕುರಿ ತಿಂದರು ಎಂದು ಕೋವಿಡ್ ಕಾಲದ ಪರೀಕ್ಷೆಯಂತೆ ಪ್ರತಿಯೊಬ್ಬರ ಗಂಟಲೊಳಗೆ ಇಣುಕಿ ನೋಡುವುದರಿಂದ ದೇಶಕ್ಕೇನು  ಲಾಭವೋ? ಜನರಿಗೇನು ಉಪಯೋಗವೋ? ಇದರಿಂದ ದೇಶದ ಸರ್ವ ಸಮಸ್ಯೆಗಳೆಲ್ಲಕ್ಕೂ ಪರಿಹಾರ ಸಿಗಬಹುದೋ? ಬಲ್ಲವರೇ ಹೇಳಬೇಕು. ಅಂದಹಾಗೆ, ಶ್ರಾವಣದಲ್ಲಿ ಮೀನು ತಿಂದ ತೇಜಸ್ವಿ ಯಾದವ್ ಅವರಿಗೆ ಆಹಾರ ಒದಗಿಸಿದಾತ ಅಲ್ಲಿನ ಸ್ಥಳೀಯ ಸಿಹಿ ತಿಂಡಿ ರಾಬ್ಡಿಯನ್ನು ಆವತ್ತು ತಾರದೇ ಒಳ್ಳೇ ಕೆಲಸವನ್ನೇ ಮಾಡಿದ್ದ. ಇಲ್ಲವಾದಲ್ಲಿ ತಾಯಿಯನ್ನೇ ತಿಂದಂತ ಸಂಸ್ಕೃತಿ ಹೀನರು, ಅದೂ ಇದೂ ಎಂದು ಕೆಲವರು ಹುಯಿಲೆಬ್ಬಿಸುತ್ತಿದ್ದರೇನೋ..(ಲಾಲೂ ಅವರ ಪತ್ನಿ ಹೆಸರು ರಾಬ್ಡಿ ದೇವಿ)

ಹೇಳಿ ಕೇಳಿ ನಮ್ಮೀ ಭಾರತ ಮೂರೂ ಕಡೆ ಸಮುದ್ರದಿಂದ ಆವೃತವಾದ ಪರ್ಯಾಯ ದ್ವೀಪ. ಒಳನಾಡಿನ ಸಿಹಿ ನೀರಿನ ಮೀನು ತಿನ್ನುವವರಿಗಿಂತ ಉಪ್ಪುನೀರಿನ ಮೀನು ತಿನ್ನುವವರ ಸಂಖ್ಯೆ ಇಲ್ಲಿ ದೊಡ್ಡದು. ಯಾಕೆಂದರೆ, ಇಂದಿನ ಶೀತಲೀಕರಣ, ಸಾಗಾಣಿಕಾ ಸೌಲಭ್ಯ ಮೊದಲಾದ ಆಧುನಿಕ ವ್ಯವಸ್ಥೆಗಳ ಕಾರಣಕ್ಕೆ ಮಂಗಳೂರಿನಲ್ಲಿ ಸಿಗುವಂತಹ ತಾಜಾ ಮೀನು ದೂರದಲ್ಲಿರುವ ಬೆಂಗಳೂರಿನಲ್ಲಿ ಕೂಡ ದೊರೆಯುವಂತಾಗಿದೆ. ಮೀನು ಒಂದು ಅತ್ಯುತ್ತಮ ಪೌಷ್ಟಿಕ ಆಹಾರ ಎಂದು ಪರಿಗಣಿತವಾಗಿದೆ. ರೆಡ್ ಮೀಟ್ ಎಂದು ವರ್ಗೀಕರಿಸಲ್ಪಟ್ಟ ಮಾಂಸಕ್ಕಿಂತಲೂ ಈ ಮತ್ಸ್ಯಾಹಾರವೇ ಉತ್ತಮವಾದುದು ಮತ್ತು ಸುರಕ್ಷಿತವಾದುದೆಂದು ಹೇಳಲಾಗುತ್ತಿದೆ. ಯಾವುದೋ ರಾಜಕೀಯ ಮೇಲಾಟದ ನೆಪದಲ್ಲಿ ಕೋಟ್ಯಂತರ ಜನರು ಸೇವಿಸುವಂತಹ ಆಹಾರವೊಂದನ್ನು ಹೀಗಳೆಯುವುದು, ಶ್ರಾವಣ ಭಾದ್ರಪದಗಳ ನೆಪದಲ್ಲಿ ಇವ್ಯಾವುದರ ಗೋಜಿಲ್ಲದೇ ಸಹಜವಾಗಿ ತಿನ್ನುವ ಕೋಟ್ಯಂತರ ಮಂದಿಯನ್ನು ಸಂಸ್ಕೃತಿ ಹೀನರು ದುರುಳರು ಎಂದೆಲ್ಲ ಪರೋಕ್ಷವಾಗಿ ಬಿಂಬಿಸ ಹೋಗುವುದು ಯಾವತ್ತೂ ಸರಿಯಲ್ಲ.

ದೇವಿಗೆ 400 ಗ್ರಾಂ ತೂಕದ ಬಂಗಾರದ ಬಂಗುಡೆ ಮೀನಿನ ಮಾಲೆ ಅರ್ಪಿಸಿದ ಮಂಗಳೂರಿನ ಮೀನುಗಾರರು

ನಮ್ಮ ಕರ್ನಾಟಕ ಕರಾವಳಿಯನ್ನೇ ನೋಡುವುದಾದರೆ ಇಲ್ಲಿ ಮತ್ಸ್ಯೋದ್ಯಮ ಬೆಳೆದು ನಿಂತ ಹಾದಿ ದೊಡ್ಡದು. ಲಕ್ಷಾಂತರ ಜನ ಹಾಗು ಕುಟುಂಬ ಇದೇ ಮತ್ಸ್ಯೋದ್ಯಮದ ಹೆಸರಿನಲ್ಲಿ ಬದುಕನ್ನ ಸಾಗಿಸುತ್ತಿದ್ದಾರೆ. ಕಳೆದ ವರ್ಷ ಇದೇ ಮೀನುಗಾರ ಸಮುದಾಯದವರು ಕಟ್ಟಿದ  ಭವ್ಯ ದೇಗುಲದ ವೈದಿಕ ದೇವಿಗೆ ಬರೀ ಮೀನುಗಳ ಚಿತ್ರವನ್ನೇ ಪೋಣಿಸಿರುವ ಐವತ್ತು ಪವನಿನ ದೊಡ್ಡ ಬಂಗಾರದ ಮಾಲೆಯನ್ನು ಸಮರ್ಪಿಸಲಾಗಿತ್ತು. (ಇಂತದೇ ಚಿನ್ನದ ಮೀನುಸರದ ಕಾಣಿಕೆ ಬೇರೆಯೂ ಇದ್ದವು).

ಹಿಂದಿನ ಇತಿಹಾಸದ ಅರಿವಿಲ್ಲದವರಿಗೆ ಈ ಮತ್ಸ್ಯೋದ್ಯಮದ ಹಿಂದೆ ಧಾರ್ಮಿಕ ಸೌಹಾರ್ದದ ಕೊಂಡಿಯಂತೆ ಬೆಸೆದಿದ್ದ ವಿಚಾರ ಗೊತ್ತಿರಲಾರದು. ಹಿಂದೆ ಸಾಮಾನ್ಯ ಮನೆಗಳಲ್ಲಿ ಸೈಕಲ್ಲಿಗೂ ಗತಿಯಿಲ್ಲದ ಕಾಲವಿತ್ತು. ಇನ್ನು ವಾರಗಟ್ಟಲೆ ಮೀನು ಮಾಂಸ ಕಾಪಿಡುವ ಫ್ರಿಡ್ಜುಗಳ ಮಾತು ಬೇರೆಯೇ. ಐಸ್ ಫ್ಯಾಕ್ಟರಿ, ಕೋಲ್ಡ್ ಸ್ಟೋರೇಜ್ ಗಳು ಇನ್ನೂ ತಲೆಯೆತ್ತದಂತ ಕಾಲವದು. ಆವತ್ತು ಮೀನುಗಾರರ ಬಲೆಗೆ ಭರ್ಜರಿ ಮೀನು ರಾಶಿಯೇ ಬಿತ್ತೆಂದರೆ ಅದು ಖುಷಿಯ ಸಂಗತಿಯೇನೂ ಆಗಿರಲಿಲ್ಲ. ಹಿಡಿದ ಮೀನು ಸಂಜೆಯೊಳಗೆ ಖಾಲಿಯಾಗದಿದ್ದರೆ ಬಹುತೇಕ ಗೊಬ್ಬರ ಗುಂಡಿಯೇ ಗತಿ. ದಿನದೊಳಗೇ ಅದು ವಾಸನೆ ಹೊಡೆಯುತ್ತದಲ್ಲದೇ “ಫ್ರೆಶ್ ಮೀನು” ನೋಡಿದ ಕರಾವಳಿಗರು ಅದರತ್ತ ಕಣ್ಣೆತ್ತಿಯೂ ಕೂಡ ನೋಡರು. 

 ಹಿಂದೂ ಮೀನುಗಾರ ಸಮುದಾಯ ಹಿಡಿದಂತಹ ಮೀನನ್ನು ಮುಸಲ್ಮಾನ ವ್ಯಾಪಾರಸ್ಥರು ಕೊಂಡು ಊರೂರು ಸುತ್ತಿ ಸೈಕಲಲ್ಲಿ ಮನೆ ಮನೆ ತಲುಪಿಸಿ ಮಾರಾಟ ಮಾಡಿ ಬರುತ್ತಿದ್ದರು. ಅವರಿಂದ ಇವರಿಗೆ ಆಸರೆ, ಇವರಿಂದ ಅವರಿಗೆ ಬದುಕು. ಒಂದಕ್ಕೊಂದು ಹೊಂದಿಕೊಂಡಿದ್ದಂತಹ ಸಹಜೀವನ ಅದು. ಆದರೀಗ ಯಾಂತ್ರೀಕೃತ ದೋಣಿಗಳಿಂದ ಎಷ್ಟೇ ಪ್ರಮಾಣದ ಮೀನು ಬಿದ್ದರೂ ಕೂಡ ಅದನ್ನು ಕಾಪಿಡುವಂತಹ ವ್ಯವಸ್ಥೆಯಿದೆ. ದೂರದೂರಿಗೂ ಬೇಕಾದರೆ ವಿದೇಶಗಳಿಗೂ ಕೂಡ ಹಾಳಾಗದಂತೆ ಕಳುಹಿಸುವಂತಹ  ವ್ಯವಸ್ಥೆಯೂ ಇದೆ.  ಹಾಗಾಗಿ ಇವತ್ತು ಯಾರು ಯಾರಿಗೂ ಕೂಡ ಅನಿವಾರ್ಯರಲ್ಲ.

ಹಿಂದೂಗಳ ಪವಿತ್ರ ದಶಾವತಾರದ ಕಥೆಯಲ್ಲೂ ಮಹಾ ವಿಷ್ಣು ರಾಕ್ಷಸ ಕದ್ದೊಯ್ದ ವೇದದ ರಕ್ಷಣೆಗೆ ಮೊತ್ತ ಮೊದಲ ಅವತಾರವಾಗಿ ಮೀನಿನ ರೂಪವನ್ನೇ ತಾಳಿದ ಕಥೆಯಿದೆ. ಪಶ್ಚಿಮ ಬಂಗಾಳದ ಬ್ರಾಹ್ಮಣ ಸಮುದಾಯದಲ್ಲಿ ಮೀನಿನ ಖಾದ್ಯ ಸೇವನೆ ತೀರಾಸಾಮಾನ್ಯ. ಮೀನು ಕೇವಲ ಒಂದು ಆಹಾರವಷ್ಟೇ ಹೊರತು ಮೈಲಿಗೆ ಅಲ್ಲ. ಸಸ್ಯಾಹಾರಿ ಮಾಂಸಾಹಾರಿ ಎಂದೆಣಿಸದೇ ಹೃದಯ ಸಂಬಂಧಿ ರೋಗಿಗಳಿಗೆ ನೀಡುವ ಕಾಡ್ ಲಿವರ್ ಆಯಿಲ್ ಮಾತ್ರೆ ಪಕ್ಕಾ ಮೀನಿನದೇ ಉತ್ಪನ್ನ. ಇದನ್ನು ಸೇವಿಸುವಾತ ಯಾವತ್ತಾದರೂ ಶ್ರಾವಣ, ವಸಂತ, ಶಿಶಿರಗಳನ್ನು ಯಾವತ್ತಾದರೂ ಲೆಕ್ಕಹಾಕಿದ್ದಾನೆಯೇ..? ಬಹುಷ ಆತ ಸೂಕ್ತವಲ್ಲದ ಜಾಗದಲ್ಲಿ ಮೀನು ಹಿಡಿಯುವಂತ ರಾಜಕಾರಣಿಯಾಗಿರದಿದ್ದರೆ…

 ಶಂಕರ್ ಸೂರ್ನಳ್ಳಿ

ಸಾಮಾಜಿಕ ಚಿಂತಕರು

ಇದನ್ನೂ ಓದಿ-ಗ್ಯಾಸ್ ಬೆಲೆ ಏರಿಕೆ |ನೌಟಂಕಿ ಬೀಸಿದ ಮಾಯಾಜಾಲ

More articles

Latest article