ಬೆಂಗಳೂರು: ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಒಂಬತ್ತು ಮಂದಿ ಡ್ರಗ್ಸ್ ಪೆಡ್ಲರ್ ಗಳ ಹೆಡೆಮುರಿ ಕಟ್ಟಿರುವ ಸಿಸಿಬಿ ಪೊಲೀಸರು ಸುಮಾರು 1.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಕುಮಾರಸ್ವಾಮಿ ಲೇಔಟ್, ಆವಲಹಳ್ಳಿ, ಅಮೃತಹಳ್ಳಿ, ಹೆಬ್ಬಗೋಡಿ, ಮೈಕೊಲೇಔಟ್ ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ಸ್ ಅನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ 506 ಗ್ರಾಂ ಎಂಡಿಎಂಎ ಕ್ರಿಸ್ಟಲ್, 50 ಎಲ್‌ಎಸ್‌ಡಿ ಸ್ಟ್ರಿಪ್ಸ್ ಗಳು, 85 ಗ್ರಾಂ ಕೊಕೇನ್, 56 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನಲ್ಲಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶಾಸ್ತ್ರಿನಗರದ ಬಳಿ ಡ್ರಗ್ಸ್ ಮಾರಾಟ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅವರಿಂದ 6 ಲಕ್ಷ ರೂ. ಬೆಲೆಯ ಎಲ್‌ಎಸ್‌ಡಿ ಸ್ಟ್ರಿಪ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆವಲಹಳ್ಳಿಯಲ್ಲಿ ವೈದ್ಯಕೀಯ ವೀಸಾ ಅಡಿಯಲ್ಲಿ ಬೆಂಗಲೂರಿಗೆ ಆಗಮಿಸಿ ಸ್ದೇಶಕ್ಕೆ ಮರಳದೆ ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ವಿದೇಶಿ ಮಹಿಳೆಯನ್ನು ಬಂಧಿಸಿ ಆಕೆಯಿಂದ 2 ಲಕ್ಷ ರೂ. ಮೌಲ್ಯದ 22 ಗ್ರಾಂ ಕೊಕೈನ್ ಮತ್ತು ಮತ್ತೊಬ್ಬ ಆರೋಪಿಯಿಂದ 28 ಲಕ್ಷ ರೂ. ಮೌಲ್ಯದ 56 ಗ್ರಾಂ ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಕೇರಳದಿಂದ ಬೆಂಗಳೂರಿಗೆ ಬಂದು ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 15 ಲಕ್ಷ ರೂ. ಮೌಲ್ಯದ 110 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಲಾಗಿದೆ. ಮತ್ತೊಬ್ಬ ವಿದೇಶಿ ಪ್ರಜೆಯಿಂದ 15 ಲಕ್ಷ ರೂ. ಮೌಲ್ಯದ 81 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ 63 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಮೈಕೊಲೇಔಟ್ ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಹೂಡಿಯಲ್ಲಿ ಬೇಕರಿ ನಡೆಸುತ್ತಾ ಪರಿಚಯಸ್ಥ ಗಿರಾಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಬಂಧಿಸಿ 36 ಲಕ್ಷ ರೂ. ಮೌಲ್ಯದ 300 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಅನ್ನು ಜಪ್ತಿ ಮಾಡಲಾಗಿದೆ.
ರಾಮಮೂರ್ತಿನಗರದ ಲಾಡ್ಜ್ ವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಮಂಗಳೂರು ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ 3 ಲಕ್ಷ ರೂ. ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಸಿರಿಂಜ್ , ನೀಡಲ್ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇವರೆಲ್ಲರೂ ವಿದ್ಯಾರ್ಥಿಗಳು ಹಾಗೂ ಹಾಗೂ ಐಟಿ ಕಂಪನಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದರು ಎಂದು ಪೊಲೀಸರು ತಿಳಿಸಿದ್ದಾರೆ.