ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಇರುವ ಮತದಾರರ ಸಂಖ್ಯೆ 89 ಲಕ್ಷ; ಸೇರ್ಪಡೆಗೆ ಇನ್ನೂ ಇದೆ ಅವಕಾಶ

Most read

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತದಾರರ ಕರಡು ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯ ಪ್ರಕಾರ ಒಟ್ಟು 88,91,411 ಮತದಾರರು ಇದ್ದಾರೆ

ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಕರಡುಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡ್‌ಗಳು ರಚನೆಯಾಗಿವೆ ಎಂದು ಮಾಹಿತಿ ನೀಡಿದರು.

ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ 1,ಅಕ್ಟೋಬರ್ 2025 ದಿನಾಂಕವನ್ನು ಆಧಾರವಾಗಿಟ್ಟುಕೊಂಡು ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿ ಪ್ರಕಾರ 45,69,193 ಪುರುಷರು, 43,20,583 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದಂತೆ, ಒಟ್ಟು 88,91,411 ಮತದಾರರು ಇದ್ದಾರೆ. ಜನವರಿ 20, 2026ರಿಂದ ಫೆಬ್ರವರಿ 3, 2026 ರವರೆಗೆ ಬೂತ್ ಲೆವಲ್ ಅಧಿಕಾರಿಗಳು (ಬಿ.ಎಲ್.ಓ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಆಕ್ಷೇಪಣೆಗಳ ವಿಲೇವಾರಿಯು ಫೆಬ್ರವರಿ 4 ರಿಂದ ಫೆಬ್ರವರಿ 18, 2026ರವರೆಗೆ ನಡೆಯಲಿದ್ದು, ಮಾರ್ಚ್ 16, 2026 ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುತ್ತದೆ. ಒಟ್ಟು 369 ವಾರ್ಡ್‌ಗಳಲ್ಲಿ 8,044 ಮತಗಟ್ಟೆಗಳು ಇರಲಿವೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 23 ರಲ್ಲಿ ಅತಿ ಹೆಚ್ಚು 49,530 ಮತದಾರರಿದ್ದರೆ, ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 16 ರಲ್ಲಿ ಅತಿ ಕಡಿಮೆ 10,926 ಮತದಾರರು ಇದ್ದಾರೆ.

ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025 ರಂತೆ ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧತೆಗೆ, ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿ / ಬಿ.ಎಲ್.ಓ ಅವರ ಬಳಿ ನಿಗಧಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್ ಸಂಗ್ರೇಶಿ ಅವರು ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಮತದಾರರು ಈ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದರೆ ನೂಮನೆಯ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

More articles

Latest article