ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕವಸ್ತುಗಳ ಮಾರಾಟ ಜೋರಾಗಿಯೇ ಇದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಅಧಿಕಾರಿಗಳು ಡ್ತಗ್ ಪೆಡ್ಲರ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಕೇರಳ ಮೂಲದ ವ್ಯಕ್ತಿ ಸೇರಿ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 71 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕುಮಾರಸ್ವಾಮಿ ಲೇಔಟ್ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್, 520 ಗ್ರಾಂ. ಹೈಡ್ರೋ ಗಾಂಜಾ, 2 ಕೆಜಿ 223 ಗ್ರಾಂ. ಗಾಂಜಾ ಮತ್ತು ತೂಕದ ಯಂತ್ರ ಆಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ಬೆಂಗಲೂರಿನಲ್ಲಿ ಅಧಿಕ ಬಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಡ್ರಗ್ ಪೆಡ್ಲರ್ ಗಳಿದ್ದ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈಗಾಗಲೇ ಜೈಲು ಪಾಲಾಗಿರುವ ಓರ್ವ ಆರೋಪಿಯೂ ಇವರ ಸಂಪರ್ಕದಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿರುವ ಈ ಆರೋಪಿಯ ಸೂಚನೆಯಂತೆ ಇವರು ಪೋರ್ಟಲ್ ಮೂಲಕ ಗಾಂಜಾ ಡೆಲಿವರಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕಳ್ಳತನಕಿಂತ ಗಾಂಜಾ ಮಾರಾಟವೇ ಸುಲಭ ಎಂದು ಭಾವಿಸಿದ್ದ ನಾಲ್ವರು ಗೆಳೆಯರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಜಿತ್, ಕಾರ್ತಿಕ್, ಕಾರ್ತಿಕ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಯಲಹಂಕ ಮೂಲದ ಈ ಆರೋಪಿಗಳು ಈ ಹಿಂದೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ತ್ರಾಸದಾಯಕ ಎಂದು ಭಾವಿಸಿ ಗಾಂಜಾ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಒರಿಸ್ಸಾದಿಂದ ಗಾಂಜಾ ತರಿಸಿಕೊಂಡು ಆಟೋ ರಿಕ್ಷಾದಲ್ಲಿ ಮಾರಾಟಕ್ಕೆ ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 8 ಕೆಜಿ 600 ಗ್ರಾಂ ಗಾಂಜಾ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.
ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆ ಆಗದಂತೆ ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು. ನಗರದಲ್ಲಿ ಅಹಿತಕರ ಘಟನೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಿಸಿಬಿ ಸೇರಿದಂತೆ ಎಲ್ಲಾ ವಿಭಾಗದವರು ಡ್ರಗ್ಸ್ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ. ಹಳೇ ಡ್ರಗ್ ಪೆಡ್ಲರ್ಗಳು, ರೌಡಿ ಹಿನ್ನೆಲೆಯುಳ್ಳವರ ತಪಾಸಣೆ ನಡೆಯುತ್ತಿದೆ ಎಂದರು.
ಹೊಸ ವರ್ಷ ಆಯೋಜಕರನ್ನು ಕರೆಸಿ ಸಲಹೆ ಸೂಚನೆ ನೀಡಲಾಗುತ್ತಿದೆ. ಬೇರೆ ಬೇರೆ ಇಲಾಖೆ ಜೊತೆಯೂ ಹೊಸ ವರ್ಷ ಆಚರಣೆ ಬಗ್ಗೆ ಚರ್ಚೆ ಆಗುತ್ತಿದೆ. ಎಲ್ಲೆಲ್ಲಿ ಲೈಟಿಂಗ್, ಬೇರೆ ವ್ಯವಸ್ಥೆ ಆಗಬೇಕು ಅಂತ ಚರ್ಚೆ ಆಗುತ್ತಿದೆ ಎಂದು ಹೇಳಿದರು.