ನವದೆಹಲಿ: ಗುಜರಾತ್ ಕರಾವಳಿ ತೀರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 700 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಾದಕ ವಸ್ತುವನ್ನು ಭಾರತಕ್ಕೆ ಸಾಗಿಸುತ್ತಿದ್ದ 8 ಮಂದಿ ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ.
ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ನೌಕಾಪಡೆ ಅಧಿಕಾರಿಗಳು ಮಾದಕ ವಸ್ತುವಿದ್ದ ಹಡಗನ್ನು ಗುರುತಿಸಿ ಶೋಧ ನಡೆಸಲು ನೆರವಾಗಿದ್ದರು. ಈ ಮೂಲಕ ಭಾರತಕ್ಕೆ ಸಾಗಿಸಲಾಗುತ್ತಿದ್ದ 700 ಕೆಜಿ ಮೆಥಾಮ್ ಫೆಟಮಿನ್ ರಾಸಾಯನಿಕವನ್ನು ವಶಪಡಿಸಿಕೊಳ್ಳಲಾಗಿದೆ.
ಎನ್ ಸಿಬಿ, ನೌಕಾಪಡೆ ಮತ್ತಯ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಗೆ ಸಾಗರ್ ಮಂಥನ್ ಎಂದು ಹೆಸರಿಡಲಾಗಿತ್ತು. ಅಧಿಕಾರಿಗಳ ಈ ಯಶಸ್ವಿ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.