ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ
ಮಾದಕ ವಸ್ತುಗಳ ಮಾರಾಟದ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಅಪರಾಧ
ವಿಬಾಗದ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕೊಡಿಗೆಹಳ್ಳಿ ಪೊಲೀಸರು ಕೇರಳ ಮೂಲದ ವ್ಯಕ್ತಿ ಸೇರಿ 6 ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ ಅವರಿಂದ 80 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕುಮಾರಸ್ವಾಮಿ ಲೇ ಔಟ್ ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್, 520 ಗ್ರಾಂ. ಹೈಡ್ರೋ ಗಾಂಜಾ, 2 ಕೆಜಿ 223 ಗ್ರಾಂ ಗಾಂಜಾ ಮತ್ತು ತೂಕದ ಯಂತ್ರ ಆಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು, ಪಿಜಿಗಳಲ್ಲಿ ವಾಸವಾಗಿರುವವರು ಹಾಗೂ ಟೆಕ್ಕಿಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಆರೋಪಿ ಕೇರಳ ಮೂಳದ ಫಯಾಜ್ ಸೂಚನೆಯಂತೆ ಇವರು ಪೋರ್ಟಲ್ ಮೂಲಕ ಗಾಂಜಾ ಡೆಲಿವರಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಫಯಾಜ್ ಜೈಲಿನಿಂದಲೇ ಈ ಧಮಧೆಯನ್ನು ನಿಯಂತ್ರಿಸುತ್ತಿದ್ದ ಎಂದು ಹೇಳಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕಳ್ಳತನಕಿಂತ ಗಾಂಜಾ ಮಾರಾಟವೇ ಸುಲಭ ಎಂದು ಭಾವಿಸಿದ ನಾಲ್ವರು ಗೆಳೆಯರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಜಿತ್, ಕಾರ್ತಿಕ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಮೂಲದ ಈ ಆರೋಪಿಗಳು ಈ ಹಿಂದೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಕಷ್ಟದ ಕೆಲಸ ಎಂದು ಭಾವಿಸಿ ಗಾಂಜಾ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಒರಿಸ್ಸಾದಿಂದ ಗಾಂಜಾ ತರಿಸಿಕೊಂಡು ಟಾಟಾನಗರದ ಮೈದಾನದ ಬಳಿ ಆಟೋ ರಿಕ್ಷಾದಲ್ಲಿ ಮಾರಾಟಕ್ಕೆ ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 8 ಕೆಜಿ 600 ಗ್ರಾಂ ಗಾಂಜಾ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.