“50 Years Of Silence” ಕನ್ನಡದಲ್ಲಿ “ಅರೆ ಶತಮಾನದ ಮೌನ”, ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ವಸಾಹತಿನಲ್ಲಿ ಅಲ್ಲಿನ ಅಂಬಾರವ ಪ್ರಿಸನ್ ಕ್ಯಾಂಪ್ ಗಳಲ್ಲಿ ನಡೆಸಿದ ಅತ್ಯಂತ ಅಮಾನವೀಯ ಘಟನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಕತೆಯಿದು. ಈ ಮನಕಲಕುವ ಕತೆಯ ಬಗ್ಗೆ ಬರೆದಿದ್ದಾರೆ ಶೃಂಗಶ್ರೀ ಟಿ, ಉಪನ್ಯಾಸಕಿ.
ಯುದ್ದ ಎಂದಾಕ್ಷಣ ಕಣ್ಮುಂದೆ ಬರವುದು ಭೀಕರ ಸಾವು- ನೋವುಗಳು, ಹಿಂಸೆ, ಸತ್ತವರ ಮೌನ, ಕಳಕೊಂಡವರ ತೀವ್ರ ಆರ್ತನಾದ, ಆಕ್ರೋಶ, ಸೋತವರ ಸಂಕಟಗಳು, ಗೆದ್ದವರ ಹಾರಾಟಗಳು. ಆದರೆ ಈ ಎಲ್ಲದರ ಕೊನೆಯಲ್ಲಿ ಯಾವುದೇ ಇತಿಹಾಸ ನೋಡಿದರೂ ಬಹು ಮುಖ್ಯವಾಗಿ ವಿನಾಕಾರಣ ಬಲಿಯಾದವಳು ಹೆಣ್ಣೇ.
ಅಂತಹದ್ದೇ ಒಂದು ಭೀಕರ ಕತೆ, ಒಡಲಾಳದ ಬೆಂಕಿಯನ್ನ ನುಂಗಲೂ ಆಗದೆ ಉಗಿಯಲೂ ಆಗದೆ ತಾನೇ ಉರಿದುಹೋದ ಹೆಣ್ಣಿನ ಅಮಾನುಷ ಬದುಕಿನ ಕತೆ “50 Years Of Silence” ಕನ್ನಡದಲ್ಲಿ “ಅರೆ ಶತಮಾನದ ಮೌನ”. ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ವಸಾಹತಿನಲ್ಲಿ ಅಲ್ಲಿನ ಅಂಬಾರವ ಪ್ರಿಸನ್ ಕ್ಯಾಂಪ್ ಗಳಲ್ಲಿ ನಡೆಸಿದ ಅತ್ಯಂತ ಅಮಾನವೀಯ ಘಟನೆಗಳ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಕತೆಯಿದು.
ಎಲ್ಲಾ ಕಾಲದ ಎಲ್ಲಾ ಗಡಿ ರೇಖೆಗಳನ್ನ ದಾಟಿದರೂ ಹೆಣ್ಣಿನ ಸ್ಥಿತಿ ಅತ್ಯಂತ ಶೋಚನೀಯವಾದದ್ದೇ. ಹೆಣ್ಣು ಮತ್ತು ಹೆಣ್ಣಿನ ದೇಹವನ್ನು ಯಾವಾಗಲೂ ದಾಳದಂತೆ ಬಳಸುವುದು ಸರ್ವೇ ಸಾಮಾನ್ಯ. ಅಂತೆಯೇ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ಭಾಗದಲ್ಲಿದ್ದ ಅಮಾಯಕ ಸಾವಿರಾರು ಹೆಣ್ಣು ಮಕ್ಕಳನ್ನ ಅಪಹರಿಸಿ ತಂದು ಪ್ರಿಸನ್ ಕ್ಯಾಂಪ್ ಗಳಲ್ಲಿ ಜೀತದಾಳುಗಳಂತೆ ನಡೆಸಿಕೊಂಡರು. ಮಕ್ಕಳನ್ನ ತಾಯಂದಿರಿಂದ ಬೇರ್ಪಡಿಸಿ ಅತ್ಯಂತ ಕೆಟ್ಟದಾದ, ಹಾಳಾದ ತೇವಯುತವಾದ, ಹೇನು, ತಿಗಣೆ, ಇಲಿಗಳು, ಜಿರಳೆಗಳಿಂದ ತುಂಬಿದ ಬ್ಯಾರಾಕ್ಸ್ ಗಳಲ್ಲಿ ಆ ಅಮಾಯಕ ಹೆಣ್ಣು ಮಕ್ಕಳನ್ನ ಬಂಧಿಸಿ ಅತ್ಯಂತ ಕೆಟ್ಟದಾಗಿ ಬಳಸಿಕೊಂಡರು. ಅನ್ನ ಆಹಾರ ವಸತಿ ನೀರನ್ನೂ ಕೊಡದೆ ಹಿಂಸಿಸಿ ಮೃಗಗಳಿಗಿಂತ ಕಡೆಯಾಗಿ ನೋಡಿಕೊಂಡರು. ಈ ಎಲ್ಲ ಅಮಾನುಷ ಕೃತ್ಯಗಳ ಕತೆಯಿದು.
ನೀರು, ಅನ್ನ, ಆಹಾರವನ್ನ ಕೊಡದ ಸಲುವಾಗಿ ಹಸಿವಿನಿಂದ ಪ್ರಿಸನ್ ಕ್ಯಾಂಪ್ ನಲ್ಲಿದ್ದ ಜಪಾನೀ ಅಧಿಕಾರಿಯ ಬೆಕ್ಕನ್ನೂ ಬಿಡದೆ, ಅದರಿಂದಾಗಿ ಸಿಗುವ ಶಿಕ್ಷೆಯ ಅರಿವಿದ್ದೇ ಬೇಯಿಸಿ ತಿಂದ ಘಟನೆಯ ಹಿಂದೆ ಅನುಭವಿಸಲಾಗದ ಸಂಕಟವಿದೆ. ಹಸಿವಿಗಾಗಿ ಬಸವನ ಹುಳಗಳನ್ನ, ಕಳೆಗಳನ್ನ (weeds), ಎತ್ತುಗಳ ದೇಹದ ಭಾಗಗಳೊಂದಾದ ವೃಷಣಗಳನ್ನೂ ಬೇಯಿಸಿ ಅದರಿಂದ ಸೂಪ್ ಗಳನ್ನ ತಯಾರಿಸಿ ಕುಡಿದಂತ/ತಿಂದಂತ ಘಟನೆಗಳಿವೆ.
ಅಲ್ಲಿರುವ ಎಲ್ಲಾ ಹೆಣ್ಣು ಮಕ್ಕಳು ಪ್ರತೀ ದಿನವೂ ಒಬ್ಬೊಬ್ಬರಾಗಿ ಅತ್ಯಂತ ದುರ್ವಾಸನೆಯಿಂದ ಕೂಡಿದ sewerage pits ಗಳನ್ನ ಶುಚಿಗೊಳಿಸ ಬೇಕಾಗಿರುತ್ತದೆ. ಜಪಾನೀ ಅಧಿಕಾರಿಗಳು ಹೇಳಿದಂತೆ ಕೇಳದಿದ್ದಾಗ ಸಾಯುವ ಹಾಗೆ ಹೊಡೆದು ಬಡಿದು ಬಿಸಿಲಿಗೆ ನಿಲ್ಲಿಸಿ ಹಿಂಸಿಸುವ ಎಲ್ಲಾ ಹಿಂಸಾಚಾರಗಳ ನಡುವೆಯೂ ಒಂದಷ್ಟು ಹೆಣ್ಣುಮಕ್ಕಳು ಕ್ಯಾಂಪ್ ನ ಮಕ್ಕಳಿಗೆ ಓದುವುದನ್ನು ಬರೆಯುವುದನ್ನು ಹೇಳಿಕೊಡುತ್ತಿರುತ್ತಾರೆ. ನಿಜಕ್ಕೂ ಹೆಣ್ಣಿನ ಆ ಎಲ್ಲಾ ಮನೋಧೈರ್ಯ ಮೆಚ್ಚಬೇಕಾದದ್ದೆ.
ಒಂದಷ್ಟು ವರ್ಷಗಳ ಸೆರವಾಸದ ಬಳಿಕ ಅಂಬಾರವ ಕ್ಯಾಂಪ್ ನಿಂದ ಜಾವಾದ ಕೇಂದ್ರ ರಾಜಧಾನಿಯಾದ ಸೆಮಾರಾಂಗ್ ಕ್ಯಾಂಪ್ ಗಳಿಗೆ ಏಳು ಜನ ಹೆಣ್ಣುಮಕ್ಕಳನ್ನು ಕರೆತಂದು ಬಂಧಿಸಲಾಗುತ್ತದೆ. ಡಚ್ ವಸಾಹತು ನಗರದ ಬೇರೆ ಬೇರೆ ಭಾಗಗಳಲ್ಲೂ ಕೂಡ ಪ್ರಿಸನ್ ಕ್ಯಾಂಪ್ ಗಳಲ್ಲಿ ಹೆಣ್ಣು ಮಕ್ಕಳನ್ನ ಮುಖ್ಯವಾಗಿ ವರ್ಜಿನ್(ಕನ್ಯೆ) ಗಳನ್ನು ಮಾತ್ರ ಬಂಧಿಸಿ ಅವರನ್ನ ʼComfort Womenʼ ಗಳೆಂದು ಕರೆದು ಅವರನ್ನ ನಿರಂತರ ಅತ್ಯಾಚಾರಕ್ಕೆ ಒಳಪಡಿಸಲಾಗುತ್ತದೆ. ವ್ಯಂಗ್ಯವೆಂದರೆ ಈ ಎಲ್ಲಾ Comfort Women ಗಳ ಹೆಸರುಗಳನ್ನ ಬದಲಾಯಿಸಿ ಪ್ರತಿಯೊಬ್ಬರಿಗೂ ಒಂದೊಂದು ಹೂವಿನ ಹೆಸರನ್ನ ಇಡಲಾಗುತ್ತದೆ. ಆದರೆ ಹೂಗಳ ಹೆಸರನ್ನಿಟ್ಟು ಅವರ ಬದುಕನ್ನ ಮುಳ್ಳಗಳಂತೆ ಮಾಡಿದ್ದು ದುರಂತ ಸ್ಥಿತಿ.
Comfort Women ಗಳೆಂದರೆ ಜಪಾನೀ ಸೈನಿಕರಿಗೆ ಲೈಂಗಿಕ ಸುಖವನ್ನು ನೀಡುವ ವಸ್ತುಗಳಲ್ಲದೆ ಮತ್ತೇನಲ್ಲ. ಅದರಲ್ಲಿ ಜಾನ್ ರುಫ್ ಒ ಹೆರ್ನೆ ಕೂಡ ಒಬ್ಬಳು. ಇದನ್ನು ಕ್ಯಾಂಪ್ ಅನ್ನುವುದಕ್ಕಿಂತ ವರ್ಜಿನ್ ಬ್ರಾಥೆಲ್ ಎಂದು ಕರೆದರೂ ಸರಿಯೇ. ಆದರೆ ಜಪಾನೀ ಸೈನಿಕರು ಇದನ್ನು ‘The House Of Seven Seas’ ಎಂದು ಕರೆಯುತ್ತಾರೆ.
ಈ ಎಲ್ಲಾ ಹೆಣ್ಣುಮಕ್ಕಳು ಸರಾಸರಿ ಮೂರೂವರೆ ತಿಂಗಳುಗಳ ಕಾಲ ನಿರಂತರವಾಗಿ ಪ್ರತಿ ದಿನವೂ ಹಗಲೂ, ಮಧ್ಯಾಹ್ನ , ರಾತ್ರಿಯೆನ್ನದೆ ಜಪಾನೀ ಸೈನಿಕರಿಂದ ಅತ್ಯಾಚಾರಕ್ಕೊಳಗಾದ ಬೆಚ್ಚಿಬೀಳಿಸುವ ಸಂಗತಿಗಳನ್ನು ನಾವಿಲ್ಲಿ ಕಾಣುತ್ತೇವೆ. ಹೆಣ್ಣಿನ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಅವರಿಚ್ಛೆಯ ವಿರುದ್ಧ ನಡೆಸಿದ ಹಿಂಸಾಚಾರವಿದು.
ಅತ್ಯಾಚಾರದಿಂದ ತಮ್ಮನ್ನು ತಾವು ಕಾಪಾಡಲು ಸಿಕ್ಕಸಿಕ್ಕ ಸಂದಿ ಮೂಲೆಗಳಲೆಲ್ಲಾ ಅವಿತುಕೊಂಡು ಅದಕ್ಕಾಗಿ ಹೊಡೆಸಿಕೊಂಡು ಹಿಂಸೆಗೆ ಒಳಪಡುವ ಶೋಚನೀಯ ಕತೆಯಿದು. ಜಾನ್ ರುಫ್ ಒ ಹೆರ್ನೆ ತನ್ನನ್ನು ತಾನು ಅತ್ಯಾಚಾರದಿಂದ ಕಾಪಾಡಲು ತನ್ನ ತಲೆಕೂದಲನ್ನೆಲ್ಲಾ ಕತ್ತರಿಸಿ ಬೋಡ ಮಾಡಿಕೊಂಡು ವಿಕೃತವಾಗಿ ಕಾಣುವ ಉಪಾಯದ ಹಿಂದಿರುವ ಉದ್ದೇಶ ಅವಳ ಅಸಹಾಯಕ ಸ್ಥಿತಿಯನ್ನು ಬಿತ್ತರಿಸುತ್ತದೆ.
ಮತ್ತೊಂದು ಶೋಚನೀಯ ಸಂಗತಿಯನ್ನು ಜಾನ್ ರುಫ್ ವಿವರಿಸುತ್ತಾಳೆ. Venereal disease (ಗುಹ್ಯರೋಗ)ಗೆ ಒಳಪಟ್ಟಂತಹವರನ್ನು ಪರೀಕ್ಷೆಗೆ ಒಳಪಡಿಸಲು gynaecological equipment ( ಸ್ತ್ರೀ ರೋಗತಜ್ಞ ಉಪಕರಣಗಳು)ಗಳನ್ನ Virgin Brothel (ಕನ್ಯಾ ವೇಶ್ಯಾಗೃಹ) ಗಳಲ್ಲಿ ಅಳವಡಿಸಲಾಗುತ್ತದೆ. ಪರೀಕ್ಷಿಸಲು ಬರುವ ಡಾಕ್ಟರ್ ಪ್ರತೀಬಾರಿಯೂ ಜಾನ್ ಳನ್ನು ಅತ್ಯಾಚಾರ ಮಾಡುತ್ತಾನೆ. ಅಷ್ಟೇ ಅಲ್ಲದೇ ಪರೀಕ್ಷೆ ನಡೆಸುವ ಕೊಠಡಿಗೆ ಯಾವುದೇ ಬಾಗಿಲು ಪರೆದೆಯೂ ಇರುವುದಿಲ್ಲ. ಡಾಕ್ಟರ್ ಜೊತೆಗೆ ಜಪಾನೀ ಸೈನಿಕರು ನಿಂತು ನೋಡಿ ಸಂತಸ ಪಡುವುದರ ಹಿಂದೆ ಇರುವುದು ವಿಕೃತ ಕಾಮುಕತನ.
ಅತ್ಯಾಚಾರಕ್ಕೆ ಒಳಗಾದವರು ಗರ್ಭಿಣಿಯರಾದಾಗ ಅವರಿಗೆ ಬಲಾತ್ಕಾರವಾಗಿ ಮಾತ್ರೆಗಳನ್ನ ನುಂಗಿಸಿ ಗರ್ಭಪಾತ ಮಾಡಿಸಲಾಗುತ್ತಿತ್ತು ಇದಕ್ಕೆ ಜಾನ್ ಕೂಡ ಹೊರತಾದವಳಲ್ಲ. ಇಷ್ಟೆಲ್ಲಾ ಕರಾಳ ಬದುಕಿನಲ್ಲೂ ಜಾನ್ ಳ ಬದುಕಿಗೆ ಧೈರ್ಯ ತುಂಬಿದ್ದು ಅವಳು ನಂಬಿದ ದೇವರು ಜೀಸಸ್.
ಸೆಮಾರಾಂಗ್ ಕ್ಯಾಂಪ್ ನಿಂದ ಮತ್ತೆ ಅವರೆನ್ನೆಲ್ಲಾ ಬೋಗೋರ್ ಕ್ಯಾಂಪ್ಗೆ ವರ್ಗಾಯಿಸಲಾಗುತ್ತದೆ. ಅಲ್ಲಿಯೂ ಕೂಡ ನೀರಿಗಾಗಿ ಆಹಾರಕ್ಕಾಗಿ ಪರದಾಡುತ್ತಾರೆ. ಒಂದು ಖುಷಿಯ ಸಂಗತಿ ಎಂದರೆ ಮತ್ತೆ ಜಾನ್ ರುಫ್ ಮತ್ತೊಂದು ಕ್ಯಾಂಪ್ ನಲ್ಲಿದ್ದ ತನ್ನ ಅಮ್ಮ ತಂಗಿಯರನ್ನ ಸೇರುತ್ತಾಳೆ. ಬೇರೆ ಹೆಂಗಸರಿಂದ ತಾನೊಬ್ಬಳು ಇಚ್ಛಾ ವೇಶ್ಯೆ ಎಂದು ತಿರಸ್ಕಾರಕ್ಕೆ, ನೋವಿಗೆ ಗುರಿಯಾಗುತ್ತಾಳೆ.
British Troops ನಲ್ಲಿಯ Tom Ruff ಎಂಬ ಸೈನಿಕನೊಬ್ಬ ಕೊನೆಯಲ್ಲಿ ಜಾನ್ ರುಫ್ ಳ ಎಲ್ಲಾ ಕರಾಳ ಕತೆಯನ್ನು ತಿಳಿದೂ ಅವಳನ್ನು ಮದುವೆಯಾಗುತ್ತಾನೆ. ಅವಳನ್ನು ಪ್ರೀತಿಯಿಂದ ಬದುಕಿಸುತ್ತಾನೆ. ಇದಾದ 50 ವರುಷಗಳ ನಂತರ ಕೊರಿಯಾದ Mrs Kim Hak Sun ಎಂಬ Comfort Women ಜಪಾನೀ ಸರ್ಕಾರದಿಂದ ಆದ ಎಲ್ಲಾ ಕ್ರೂರ ಅನ್ಯಾಯಗಳಿಗೆಲ್ಲಾ ಪರಿಹಾರ ಕೇಳುತ್ತಾಳೆ. ಜಪಾನೀ ಸೈನಿಕರು ಕ್ಷಮೆಯಾಚನೆ ಮಾಡಬೇಕೆಂದು ಕೇಳುತ್ತಾಳೆ. ಇವಳ ಧೈರ್ಯವನ್ನ ನೋಡಿ ಜಾನ್ ರುಫ್ ಕೂಡ ತನ್ನ ಸರಿಸುಮಾರು 50 ವರ್ಷಗಳ ಕಾಲದ ನೋವು, ಸಂಕಟ, ಹತಾಶೆ, ಅಸಹಾಯಕತೆ, ಅನ್ಯಾಯದ ದುರಂತ ಸ್ಥಿತಿಯನ್ನು ಇಡೀ ಪ್ರಪಂಚದ ಮುಂದೆ ಬಯಲಿಗೆಳೆಯುತ್ತಾಳೆ.
50 ವರುಷಗಳ ಕಾಲ ಯಾರಿಗೂ ಹೇಳಲಾಗದೆ ತನ್ನೊಳಗೆ ತುಂಬಿಕೊಂಡ ನಿಗಿ ನಿಗಿ ಸುಡುವಂತ ಸತ್ಯದ ಕತೆಯನ್ನು ಗುಟ್ಟಾಗಿ ಇಟ್ಟು ಪ್ರತಿದಿನವೂ ಬೆಂದು ಕೊನೆಯಲ್ಲಿ ಜಗತ್ತಿನ ಮುಂದೆ ಅನಾವರಣಗೊಳಿಸಿ ಧೈರ್ಯದಿಂದ ಬದುಕಿದ ಧೀಮಂತ ವೀರೆ ಜಾನ್ ರುಫ್ ಒ ಹೆರ್ನೆ. ನಿಜಕ್ಕೂ ಇವಳು ಮಹಾ ಶಕ್ತಿಯೇ ಸರಿ.
ಶೃಂಗಶ್ರೀ ಟಿ
ಅತಿಥಿ ಉಪನ್ಯಾಸಕಿ, ಶಿವಮೊಗ್ಗ.