ಬೆಂಗಳೂರು: ಬೆಂಗಳೂರು ನಗರದ ಮೇಲಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕಗಳೊಂದಿಗೆ ಸ್ಯಾಟಲೈಟ್ ಟೌನ್ಶಿಪ್ ಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಭಾಗಶ: ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸಲು ಇಂದು ನಡೆದ ಸಚಿವ ಸಂಪುಟ ಸಭೆ ಸಚಿವ ಸಂಪುಟ ಅನುಮೋನೆ ನೀಡಿದೆ.
ದಿನಾಂಕ: 18.10.2006 ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಬಿಡದಿ, ಸಾತನೂರು, ರಾಮನಗರ, ಸೋಲೂರು ಮತ್ತು ನಂದಗುಡಿಯಲ್ಲಿ 5 ಸಮಗ್ರ ಉಪನಗರಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ನಲ್ಲಿ ಟೌನ್ ಶಿಪ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿತ್ತು.
ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು, ಸರಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್ ಶಿಪ್ ಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿತ್ತು.
ದಿನಾಂಕ: 02.09.2024 ರಲ್ಲಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ, ಬನ್ನಿಗೆರೆ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ, ಹಾಗೂ ಹಾರೋಹಳ್ಳಿ ತಾಲ್ಲೂಕು, ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ ಸಾಗುವಳಿ ವಿಸ್ತೀರ್ಣ 6023ಎಕರೆ 24 ಗುಂಟೆ ಹಾಗೂ ‘ಎ’ ಖರಾಬು ವಿಸ್ತೀರ್ಣದ ಒಟ್ಟು 101ಎಕರೆ 12 ಗುಂಟೆ ಮತ್ತು ‘ಬಿ’ ಖರಾಬು ವಿಸ್ತೀರ್ಣ 2818 ಎಕರೆ 39 ಗುಂಟೆ ಪೈಕಿ 722 ಎಕರೆ 31 ಗುಂಟೆ ಕೆರೆ ಪುದೇಶ ಸೇರಿದಂತೆ ಸುಮಾರು ಒಟ್ಟು 8942 ಎಕರೆ 35 ಗುಂಟೆ ಪ್ರದೇಶದಲ್ಲಿ ಈಗಾಗಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಖಾತೆ ತೆರೆದಿರುವ ನಿವೇಶನಗಳನ್ನು ಒಳಗೊಂಡಂತೆ, ಹ್ಯಾಮ್ಲೆಟ್, ಸೆಟಲ್ಮೆಂಟ್, ಶಾಲೆ/ಕಾಲೇಜು, ಕೆರೆ, ಸ್ಮಶಾನ ಮತ್ತಿತರೆ ಸಾರ್ವಜನಿಕ ಉದ್ದೇಶಿತ ಜಾಗಗಳನ್ನು ಯಥಾವತ್ತಾಗಿ ಕಾಯ್ದಿರಿಸಿ, ಉಳಿದ ಪ್ರದೇಶಕ್ಕೆ ಪ್ರಸ್ತುತ ಪ್ರಥಮ ಹಂತದಲ್ಲಿ ಬಿಡದಿ ಸಮಗ್ರ ಉಪನಗರ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಪ್ರಕ್ರಿಯೆಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ ಸರ್ಕಾರದ ತಾತ್ವಿಕ ಅನುಮೋದನೆ ನೀಡಿತ್ತು.