ನಷ್ಟ ಅನುಭವಿಸುತ್ತಿದ್ದ ಕಂಪನಿ ಮಾಲೀಕರಿಗೆ ಆಮಿಷ; ರೂ. 37.50 ಲಕ್ಷ ವಂಚಿಸಿದ್ದ ಐವರ ಬಂಧನ

Most read

ಬೆಂಗಳೂರು: ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಕಂಪನಿ ಮಾಲೀಕರೊಬ್ಬರಿಗೆ ಕಮಿಷನ್‌ ರೂಪದಲ್ಲಿ ಹೆಚ್ಚಿನ ಹಣ ನೀಡುವುದಾಗಿ ಆಮಿಷವೊಡ್ಡಿ ರೂ. 37.50 ಲಕ್ಷ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಉಮೇಶ್‌, ಸುಕೀರ್ತಿ, ನಾಯತ್‌ ಉಲ್ಲಾ, ಜಾಕೀರ್‌ ಮತ್ತು ಪ್ರತೀಕ್‌ ಬಂಧಿತ ಆರೋಪಿಗಳು. ಇವರಿಂದ ಎರಡು ಕಾರು, ಐದು ಮೊಬೈಲ್‌, ಆರ್‌ಬಿಐ ಹೆಸರಿನಲ್ಲಿದ್ದ ಎರಡು ನಕಲಿ ಕಡತಗಳು, ರೂ.1 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶೇಷಾದ್ರಿಪುರದ ಕಂಪನಿಯೊಂದರ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ನಡೆಸುತ್ತಿದ್ದ ಕಂಪನಿ ನಷ್ಟ ಅನುಭವಿಸುತ್ತಿತ್ತು. ಹಣಕಾಸಿನ ಅವಶ್ಯಕತೆಯಿದ್ದ ಕಾರಣಕ್ಕೆ ಅವರು ಸಹಾಯ ಮಾಡುವಂತೆ ಸ್ನೇಹಿತರನ್ನು ಕೇಳಿಕೊಂಡಿದ್ದರು. ಆ ಸ್ನೇಹಿತರು ಆರೋಪಿಗಳನ್ನು ಪರಿಚಯ ಮಾಡಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪುರಾತನ ಕಾಲದ ತಾಮ್ರದ ವಸ್ತುಗಳನ್ನು ವಿದೇಶಕ್ಕೆ ಮಾರಾಟ ಮಾಡಲಾಗಿದ್ದು, ವಿದೇಶಿ ಕಂಪನಿಯಿಂದ ರೂ. 15 ಲಕ್ಷ ಕೋಟಿ ಬಂದಿದೆ. ಇದಕ್ಕೆ ಸಂಬಂಧಿಸಿದ ಕಡತ ಆರ್‌ಬಿಐನಲ್ಲಿದ್ದು ತೆರಿಗೆ ಪಾವತಿಸಿ ಕಡತ ಪಡೆದುಕೊಳ್ಳಬೇಕಿದೆ. ಕಡತ ಪಡೆದುಕೊಳ್ಳಲು ಮತ್ತು ಹಣವನ್ನು ಬಿಡಗಡೆ ಮಾಡಿಸಿಕೊಳ್ಳಲು ಹಣದ ಅಗತ್ಯವಿದ್ದು, ಸಹಾಯ ಮಾಡಿದರೆ, ದುಪ್ಪಟ್ಟು ಹಣ ನೀಡುವುದಾಗಿ ಆಮಿಷವೊಡ್ಡಿದ್ದರು. ಆರೋ‍ಪಿಗಳ ಮಾತು ನಂಬಿದ್ದ ದೂರುದಾರ, ಹಂತಹಂತವಾಗಿ ರೂ. 37.50 ಲಕ್ಷ ಪಾವತಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಬಸವೇಶ್ವರನಗರದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆತ ನೀಡಿದ ಸುಳಿವು ಆಧರಿಸಿ, ಉಳಿದ ನಾಲ್ವರನ್ನು  ಹುಬಳ್ಳಿಯಲ್ಲಿ ಬಂಧಿಸಲಾಗಿದೆ. ವಿದೇಶದಿಂದ ಬಂದ ಹಣಕ್ಕೆ ತೆರಿಗೆ ಕಟ್ಟಿ ಹಣ ಬಿಡಿಸಿಕೊಳ್ಳಬೇಕಿದೆ. ಬಂದ ಹಣದಲ್ಲಿ ಕಮಿಷನ್‌ ನೀಡಲಾಗುವುದು ಎಂಬುದಾಗಿ ಹಲವಾರು ಮಂದಿಯನ್ನು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

More articles

Latest article