44.83 ಕೋಟಿ ರೂ. ಜಿಎಸ್‌ ಟಿ ವಂಚನೆ; ಕಂಪನಿ ಮುಖ್ಯಸ್ಥ ಬಂಧನ

Most read

ಬೆಂಗಳೂರು ಮತ್ತು ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಯೊಂದು 44.83 ಕೋಟಿ ರೂ. ಗಳಷ್ಟು ಸರಕು ಮತ್ತು ಸೇವಾ ತೆರಿಗೆ (ಜಿ ಎಸ್‌‌ ಟಿ) ವಂಚಿಸಿರುವುದನ್ನು ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮುಖ್ಯಸ್ಥರೊಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.  ಕೋಲಾರದಲ್ಲಿ ಕಾರ್ಖಾನೆ ಮತ್ತು ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಲಾರಾಗಾ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ ಜಿಎಸ್‌ ಟಿ ವಂಚಿಸಿರುವ ಕಂಪನಿ ಎಂದು ತಿಲೀದು ಬಂದಿದೆ.

ಈ ಕಂಪನಿಯು ನಕಲಿ ಇನ್‌ ವಾಯ್ಸ್‌ ಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ, ಹೂಡುವಳಿ ತೆರಿಗೆ ಜಮೆ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ಅನ್ನು ಕ್ಲೇಮು ಮಾಡಿದೆ. ಕಂಪನಿಯ ಕಚೇರಿ ಮೇಲೆ ಇತ್ತೀಚೆಗೆ ದಾಳಿ ನಡೆಸಿ, ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಈ ವಂಚನೆ ಪತ್ತೆಯಾಗಿದೆ ಎಂದು ತೆರಿಗೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಕಂಪನಿಯ ಪ್ರವರ್ತಕರಾದ ಘನಶ್ಯಾಮ್ ಅಗರ್‌ವಾಲ್ ಮತ್ತು ಮುಕುಂದ್ ಅಗರ್‌ವಾಲ್ ಅವರು ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಕಂಪನಿಯು ಪ್ರಸ್ತುತ ತ್ರೈಮಾಸಿಕದಲ್ಲಿ ರೂ. 250 ಕೋಟಿ ಮೊತ್ತದ ವಹಿವಾಟು ನಡೆಸಿದ್ದು, ಇದರಲ್ಲಿ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್ ಹೆಸರಿನಲ್ಲಿ ರೂ. 44.38 ಕೋಟಿ ವಂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮುಕುಂದ್ ಅಗರ್‌ವಾಲ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಕಂಪನಿಯ ಸರಕು ಮತ್ತು ಸೇವೆ ಪಡೆದುಕೊಂಡ ಗ್ರಾಹಕರ ಹೆಸರಿನ ಬದಲಿಗೆ, ಪೂರೈಕೆದಾರರ ಹೆಸರಿನಲ್ಲೇ ನಕಲಿ ಇನ್‌ ವಾಯ್ಸ್‌ ಸೃಷ್ಟಿಸಲಾಗುತ್ತಿತ್ತು. ಜತೆಗೆ ಬ್ಯಾಂಕ್ ಖಾತೆಗಳನ್ನೂ ತೆರೆದು, ಅದಕ್ಕೆ ಹಣ ಪಾವತಿ ಮಾಡಲಾಗುತ್ತಿತ್ತು. ಆ ಹಣವನ್ನು ಆರೋಪಿ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಆದರೆ ಈ ವಹಿವಾಟನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿಯಲ್ಲಿ ತೋರಿಸಿ, ತೆರಿಗೆ ವಂಚಿಸುತ್ತಿದ್ದರು ಎಂದು ಅಧಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮುಕುಂದ್ ಅವರನ್ನು ಏಪ್ರಿಲ್ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

More articles

Latest article