ದೇವನಹಳ್ಳಿ: ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ, ಗಡ್ಡವಿರುವ ಹಲ್ಲಿ ಹಾಗೂ ಕೆಂಪು ಇಲಿ ಮೊದಲಾದ 40 ಅಪರೂಪದ ಪ್ರಾಣಿಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತಿದ್ದ ಇಬ್ಬರು ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಣಿಗಳನ್ನ ತಂದಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇವರ ಎರಡು ಟ್ರಾಲಿ ಬ್ಯಾಗ್‌ನಲ್ಲಿ 40 ಬಾಕ್ಸ್ ಗಳಲ್ಲಿದ್ದ ಈ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕೌಲಲಾಂಪುರದಿಂದ MHO192 ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ಬ್ಯಾಗ್ ನಲ್ಲಿ 24 ಪ್ರಾಣಿಗಳಿದ್ದವು. ಕೆಲವು ಪ್ರಾಣಿಗಳೂ ಜೀವಂತವಾಗಿದ್ದವು.
ಇವರ ವಿರುದ್ಧ ಪ್ರಾಣಿಗಳ ಸಾಗಾಟ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಹದಿನೈದು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬದುಕಿದ್ದ ಪ್ರಾಣಿಗಳನ್ನು ರಕ್ಷಿಸಲಾಗಿದೆ.
ಇತ್ತೀಚೆಗೆ ಕೌಲಲಾಂಪುರದಿಂದ ಒಳ ಉಡುಪಿನಲ್ಲಿ ಬಿಸ್ಕೆಟ್ ರೂಪದಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಬಂದಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಒಂದೂವರೆ ಕೆಜಿ ಚಿನ್ನವನ್ನ ವಶಪಡಿಸಿಕೊಂಡಿದ್ದರು. ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.