ಕೋಲಾರ: ಇಲ್ಲಿನ ಮಹಿಳಾ ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪ್ರಾಪ್ತರ ನಾಪತ್ತೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಮಹಿಳಾ ಪೋಲೀಸರು ನಾಲ್ವರು ಅಪ್ರಾಪ್ತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳಾ ಪೋಲೀಸ್ ಠಾಣೆ ಇನ್ ಸ್ಪೆಕ್ಟರ್ ಶಂಕರಾಚಾರಿ ಮತ್ತು ಅವರ ತಂಡವು 24 ಗಂಟೆಗಳಲ್ಲಿ ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ನಾಲ್ವರು ಅಪ್ರಾಪ್ತರನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸರ ತಂಡ ಮೀರತ್‌ಗೆ ತೆರಳಿ ರೈಲನ್ನು ಶೋಧಿಸಿ ಓರ್ವ ಬಾಲಕಿಯನ್ನು ಪತ್ತೆ ಹಚ್ಚಿದ್ದರೆ ಮತ್ತಿಬ್ಬರು ಅಪ್ರಾಪ್ತೆಯರನ್ನು ಉಪ್ಪಾರಪೇಟೆ ಪೊಲೀಸರ ನೆರವಿನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸುಳಿವು ದೊರೆತ ಎರಡು ಗಂಟೆಗಳಲ್ಲಿ ಹೈದರಾಬಾದ್ ನಲ್ಲಿ ಪತ್ತೆಹಚ್ಚಿ ಕರೆತಂದಿದ್ದಾರೆ.
ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಶ್ಲಾಘಿಸಿದ್ದಾರೆ.

