ರೂ.4.5 ಕೋಟಿ ಮೌಲ್ಯದ ಮೊಬೈಲ್​ ಕಳವು ಮಾಡಿದ್ದ ಆರೋಪಿಗಳ ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು; ದೇಶಾದ್ಯಂತ ಮೆಚ್ಚುಗೆ

Most read

ಚಿಕ್ಕಬಳ್ಳಾಪುರ: ಕಳೆದ ನವೆಂಬರ್ ನಲ್ಲಿ ಟ್ರಕ್​ ವೊಂದು ಉತ್ತರಪ್ರದೇಶದ ನೊಯ್ಡಾದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿ ಬರುತ್ತಿತ್ತು. ಬೆಂಗಳೂರು ಕೇವಲ 50 ಕಿಮೀ ಮಾತ್ರ ಇತ್ತು. ಆದರೆ ಟ್ರಕ್​ 24 ಗಂಟೆ ಕಳೆದರೂ ಬೆಂಗಳೂರು ತಲುಪಲೇ ಇಲ್ಲ. ಕಂಪನಿಯವರು ಜಿಪಿಎಸ್ ಪರಿಶೀಲಿಸಿದಾಗ ಟ್ರಕ್​​ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಂತಿತ್ತು. ಈ ಟ್ರಕ್‌ ನಲ್ಲಿ 6640 ಮೊಬೈಲ್ ​ಗಳನ್ನು ಸಾಗಿಸುತ್ತಿತ್ತು.

ಸ್ಥಳಕ್ಕೆ ಹೋಗಿ ನೋಡಿದಾಗ ಟ್ರಕ್ ಇದೆ, ಆದರೆ, ಚಾಲಕ ಇರಲಿಲ್ಲ. ಟ್ರಕ್​ ಚಾಲಕನ ಕ್ಯಾಬಿನ್ ನಿಂದ ರಂದ್ರ ಕೊರೆದು ಮೊಬೈಲ್‌ ಗಳನ್ನು ಮತ್ತೊಂದು ಟ್ರಕ್​ಗೆ ತುಂಬಿಕೊಂಡು ಹೋಗಿರುವುದು ಪತ್ತೆಯಾಗಿತ್ತು.  6640 ಮೊಬೈಲ್​ಗಳ ಪೈಕಿ 5140 ಮೊಬೈಲ್​ಗಳನ್ನು ಕಳವು ಮಾಡಲಾಗಿತ್ತು. ಉಳಿದ ಮೊಬೈಲ್​ಗಳು ಟ್ರಕ್​ನಲ್ಲಿ ಉಳಿದುಕೊಂಡಿದ್ದವು.

ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ತಾನ್​, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತನಿಖೆ ನಡೆಸಿ ಉತ್ತರ ಭಾರತದ ಕುಖ್ಯಾತ ಏಳು ಜನ ದರೋಡೆಕೊರರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮಹಮದ್ ಮುಸ್ತಾಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ, ಹಾಗೂ ಯೂಸುಫ್ ಖಾನ್​ನನ್ನ ಬಂಧಿಸಿದ್ದಾರೆ. ಇವರಿಂದ ಮೊಬೈಲ್ ಸಾಗಿಸಲು ಬಳಸಿದ್ದ ಟ್ರಕ್ ಸೇರಿದಂತೆ ಕಳವು ಮಾಡಿದ್ದ 5140 ಮೊಬೈಲ್​ಗಳ ಪೈಕಿ 56 ಮೊಬೈಲ್​ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ಮೊಬೈಲ್​ಗಳನ್ನು ಕಳ್ಳರು ದೆಹಲಿಯಲ್ಲಿ ಮಾರಾಟ ಮಾಡಿದ್ದಾರೆ.

ಈ ಮೊಬೈಲ್​ಗಳು ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗಿವೆ. ಸುಮಾರು ರೂ.4.5 ಕೋಟಿ ಮೌಲ್ಯದ ಮೊಬೈಲ್​ಗಳನ್ನು ಕಳ್ಳರು ಕೇವಲ 90 ಲಕ್ಷ ರೂ.ಗಳಿಗೆ  ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ಖಾತೆಯಲ್ಲಿದ್ದ 20 ಲಕ್ಷ ಹಣವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಹರಿಯಾಣದ ಪಲ್ವಾಲಾ ಜಿಲ್ಲೆಯ ಆಲಿಮಿಯೋ ಗ್ರಾಮದ  ಕಳ್ಳರನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದರು. ಕೊನೆಗೂ ಹರಸಹಾಸ ಪಟ್ಟು ಕಳ್ಳರನ್ನು ಬಂಧಿಸಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಈ ದರೋಡೆ ಪ್ರಕರಣದ ಪ್ರಮುಖ ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ರೂ. 9 ಕೋಟಿ ಮೌಲ್ಯದ ಐಪೋನ್ ಮೊಬೈಲ್ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರಿಂದ ಪಶ್ಚಿಮ ಬಂಗಾಳದ ಪೊಲೀಸರು ಬಾಡಿ ವಾರೆಂಟ್ ಮೇಲೆ ಪಡೆದುಕೊಂಡಿದ್ದಾರೆ. ಈ ಪ್ರಕರಣವನ್ನು ಬೇಧಿಸಿದ ಕರ್ನಾಟಕದ ಪೊಲೀಸರಿಗೆ ದೇಶಾದ್ಯಂತ ಪ್ರಶಂಸೆ ಕೇಳಿ ಬರುತ್ತಿದೆ.

More articles

Latest article