ಪಟ್ನಾ: ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35ರಷ್ಟು ಮೀಸಲಾತಿಯನ್ನು ಬಿಹಾರದ ಖಾಯಂ ನಿವಾಸಿಗಳಿಗೆ ಮಾತ್ರ ಅನ್ವಯಿಸಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು ಈ ನಿರ್ಧಾರ ಮಹತ್ವ ಪಡೆದುಕೊಂಡಿದೆ.
ಬಿಹಾರದ ಮಹಿಳೆಯರಿಗೆ ಮಾತ್ರ ಸರ್ಕಾರಿ ಉದ್ಯೋಗಗಳಲ್ಲಿ ಶೇ. 35ರಷ್ಟು ಮೀಸಲಾತಿಯನ್ನು ನೀಡಬೇಕು ಎನ್ನುವ ಆಡಳಿತ ಇಲಾಖೆಯ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹೊಸ ನೀತಿಯು ರಾಜ್ಯದಲ್ಲಿ ಖಾಯಂ ನಿವಾಸಿಗಳಾಗಿರುವ ಮಹಿಳೆಯರಿಗೆ ಹಣಕಾಸಿನ ಸ್ವಾತಂತ್ರ್ಯ ಮತ್ತು ಉದ್ಯೋಗ ಭದ್ರತೆಯನ್ನು ನೀಡುತ್ತದೆ ಎಂದು ಕ್ಯಾಬಿನೆಟ್ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಸಿದ್ಧಾರ್ಥ ತಿಳಿಸಿದ್ದಾರೆ.
2016ರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35 ರಷ್ಟು ಮೀಸಲಾತಿಯನ್ನು ಘೋಷಿಸಲಾಗಿತ್ತು. ಯಾವುದೇ ರಾಜ್ಯದಿಂದ ಬಿಹಾರಕ್ಕೆ ಬಂದು ನೆಲೆಸಿದ ಮಹಿಳೆಯರು ಇದರ ಲಾಭವನ್ನು ಪಡೆಯಲು ಅವಕಾಶವಿತ್ತು. ಆದ್ದರಿಂದ ಸರ್ಕಾರಿ ಉದ್ಯೋಗಗಳಲ್ಲಿ ವಾಸಸ್ಥಳ ನೀತಿಯನ್ನು ಜಾರಿಗೊಳಿಸಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿದೆ.